ಜಿಲ್ಲೆ

ಪಠ್ಯದಲ್ಲಿ ಯಕ್ಷಗಾನ ಅಳವಡಿಕೆ ಅಗತ್ಯ: ರೋಹಿತ್ ಚಕ್ರತೀರ್ಥ

ಗೋಪಾಲಕೃಷ್ಣ ಪಾದೂರ್

ಉಡುಪಿ: ಭಾರತೀಯ ಶ್ರೇಷ್ಠ ಕಲೆ ಯಕ್ಷಗಾನ ಶಾಲಾ ಪಠ್ಯದಲ್ಲಿ ಸಿಗಬೇಕು. ದೇಸೀತನ ಹೊಂದಿರುವ ಕಲೆಯ ಬಗ್ಗೆ ಮಕ್ಕಳು ಅರಿವು ಹೊಂದಬೇಕು. ಈ ನಿಟ್ಟಿನಲ್ಲಿ 5 ರಿಂದ 7ನೇ ತರಗತಿ ವರೆಗಿನ ತರಗತಿಗಳಲ್ಲಿ ಯಕ್ಷಗಾನ ಕವಿಗಳ ಪದ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಲೇಖಕ ರೋಹಿತ್ ಚಕ್ರತೀರ್ಥ ಅಭಿಪ್ರಾಯ ವ್ಯಕ್ತಪಡಿಸಿದರು.

ಶನಿವಾರ ಎಂಜಿಎಂ ಕಾಲೇಜು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಮೊದಲ ಸಮಗ್ರ ಯಕ್ಷಗಾನ ಸಮ್ಮೇಳನದ ಅಂಗವಾಗಿ ಕೆರೆಮನೆ ಶಿವರಾಮ ಹೆಗಡೆ ವೇದಿಕೆಯಲ್ಲಿ ಆಯೋಜಿಸಲಾದ ವಿಚಾರಗೋಷ್ಠಿಗಳನ್ನು ಉದ್ಘಾಟಿಸಿ, ದಿಕ್ಸೂಚಿ ಭಾಷಣ ಮಾಡಿದರು.

ಭರತ ಪ್ರಣೀತ ನಾಟ್ಯಶಾಸ್ತ್ರದ ಎಲ್ಲ ಲಕ್ಷಣಗಳೂ ಯಕ್ಷಗಾನದಲ್ಲಿದೆ. ಹಳೆಯದನ್ನು ಇಟ್ಟುಕೊಂಡು ಹೊಸತನ್ನು ನೀಡುವ ಪರಿಕ್ರಮ ಯಕ್ಷಗಾನದಲ್ಲಿ ಬೆಳೆಯಬೇಕು. ಪೌರಾಣಿಕ ಚೌಕಟ್ಟು ಮೀರದೇ ಯಕ್ಷಗಾನವನ್ನು ಬೆಳೆಸುವ ಕಾರ‌್ಯ ಆಗಬೇಕು. ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಪ್ರಸಂಗಗಳು ಪುರಾಣ ಆಧರಿತವಾಗಬೇಕಿಲ್ಲ ಎಂಬುದಾಗಿ ಕೆಲವರು ಪ್ರತಿಪಾದಿಸುತ್ತಿದ್ದು, ಸನಾತನ ಸಂಸ್ಕೃತಿ ಒಡೆಯುವ ಹುನ್ನಾರ ಮಾಡುತ್ತಿದ್ದಾರೆ. ಹಿಂದೂ ಸಂಸ್ಕೃತಿಯ ಮೂಲಸತ್ವಗಳಾದ ವೇದ ವೇದಾಂತಗಳು, ರಾಮಾಯಣಾದಿ ಮಹಾಕಾವ್ಯಗಳು ಹಾಗೂ ಪುರಾಣಗಳಿಂದ ಯಕ್ಷಗಾನ ಸಮೃದ್ಧವಾಗಿದೆ. ವಿವೇಕಾನಂದರಂಥವರು ವೇದ ವೇದಾಂತಗಳನ್ನು, ಕುವೆಂಪು ಮೊದಲಾದವರು ಮಹಾಕಾವ್ಯಗಳನ್ನು ಒಪ್ಪಿಕೊಂಡಿರುವಾಗ ಕೆಲವು ಬುದ್ದಿಜೀವಿಗಳಿಗೆ ಅವುಗಳ ವಿರುದ್ಧ ನಿಲುವು ತಳೆಯಲಾಗುತ್ತಿಲ್ಲ. ಹೀಗಾಗಿ ಪುರಾಣಗಳ ಬಗ್ಗೆ ಅಸಡ್ಡೆಯ ಮಾತುಗಳನ್ನಾಡುತ್ತಿದ್ದಾರೆ ಎಂದರು.

ಸಮ್ಮೇಳನಾಧ್ಯಕ್ಷ ಡಾ. ಪ್ರಭಾಕರ ಜೋಷಿ ಮತ್ತು ಕರ್ನಾಟಕ ಅಕಾಡೆಮಿ ಅಧ್ಯಕ್ಷ ಹಾಗೂ ಸಮ್ಮೇಳನ ಕಾರ‌್ಯಾಧ್ಯಕ್ಷ ಡಾ. ಜಿ.ಎಲ್. ಹೆಗಡೆ ಉಪಸ್ಥಿತರಿದ್ದರು. ನಾರಾಯಣ ಎಂ. ಹೆಗಡೆ ನಿರೂಪಿಸಿದರು. ಬಳಿಕ ಯಕ್ಷಶಿಕ್ಷಣದ ಸವಾಲುಗಳು ಹಾಗೂ ಯಕ್ಷಗಾನ ಕನ್ನಡದ ಅಸ್ಮಿತೆ ವಿಷಯದ ಕುರಿತು ಗೋಷ್ಠಿ ನಡೆಯಿತು.