ವಿಜಯವಾಣಿ ಸುದ್ದಿಜಾಲ ಉಡುಪಿ
ಅಮೆರಿಕದ ನ್ಯೂಯಾರ್ಕ್ ಮೂಲದ ರಂಗಕಲಾವಿದರಿಗೆ ತರಬೇತಿಯ ಭಾಗವಾಗಿ ಥಿಯೇಟರ್ ಯಕ್ಷ (ರಿ.) ಉಡುಪಿಯ ಕಲಾವಿದರು ಬೆಂಗಳೂರು ಮಾಗಡಿಯ ಇನ್ಫನೆಟ್ ಸೋಲ್ನಲ್ಲಿ ಇತ್ತೀಚೆಗೆ ಕುಂಭಕರ್ಣ ಕಾಳಗ-ಕಾಳಿಂಗ ಮರ್ದನ ಯಕ್ಷಗಾನ ಪ್ರಸಂಗ ಪ್ರದರ್ಶಿಸಿದರು.
ಥಿಯೇಟರ್ ಯಕ್ಷದ ಪೃಥ್ವೀರಾಜ ಕವತ್ತಾರು ನಿರ್ದೇಶಿಸಿದ ಈ ಪ್ರಸಂಗವನ್ನು ದೀವಟಿಗೆ ಬೆಳಕಿನಲ್ಲಿ ಪ್ರದರ್ಶಿಸಲಾಯಿತು. ಪ್ರಸಿದ್ಧ ರಂಗಕಲಾವಿದರಾದ ಕೀರ್ತನಾ ಕುಮಾರ್ ಮತ್ತು ಕೋನಾರ್ಕ್ ರೆಡ್ಡಿ ಈ ಯಕ್ಷಗಾನ ಸಂಯೋಜಿಸಿದ್ದರು.
ರಾಮಾಯಣ ಮತ್ತು ಭಾಗವತ ಮಹಾಕಾವ್ಯಗಳಿಂದ ಆಯ್ದ ಕಥಾನಕ ಇದಾಗಿತ್ತು. ಒಂದೂವರೆ ಗಂಟೆ ಅವಧಿಯ ಪೂರ್ವರಂಗದೊಂದಿಗೆ ಮತ್ತು ಶ್ರೀರಾಮ-ಲಕ್ಷ್ಮಣರ ಪೂರ್ಣ ಒಡ್ಡೋಲಗ, ಸುಗ್ರೀವನ ಪಾರಂಪರಿಕ ಪ್ರವೇಶ, ಹನುಮಂತನ ತೆರೆ ಪೊರಪ್ಪಾಟ್, ರಾವಣನ ನಿತ್ಯವಿಧಿ, ಕುಂಭಕರ್ಣನ ಸಾಂಪ್ರದಾಯಿಕ ನಡೆ, ಶೂರ್ಪನಖಾ ಪ್ರವೇಶ, ಕಾಳಿಂಗ-ಗರುಡ ಯುದ್ಧ ಕುಣಿತ ಇತ್ಯಾದಿ ಪಾರಂಪರಿಕ ಅಂಶಗಳೊಂದಿಗೆ, ಸಾಂಪ್ರದಾಯಿಕ ಘನತೆಯಲ್ಲಿ ಪ್ರದರ್ಶನ ಪ್ರಸ್ತುತ ಪಡಿಸಲಾಯಿತು.
ಹಿಮ್ಮೇಳದಲ್ಲಿ ಮಹೇಶ ಕನ್ಯಾಡಿ, ವಿಶ್ವಾಸ್ ಕಾರ್ಬೆಟ್, ಸ್ಕಂದ ಕೊನ್ನಾರ್, ರಜನೀಶ ಪಡುಬಿದ್ರಿ, ಧೀರಜ್ ಸಹಕರಿಸಿದರು. ಶಶಿಕಿರಣ ಕಾವು, ಶಂಭಯ್ಯ ಕಂರ್ಜಪಣೆ, ಸುನೀಲ್ ಭಾಸ್ಕರ ಪಲ್ಲಮಜಲು, ನಾಗೇಶ್ ಬೈಲೂರು, ಪವನ್ದೇವ್ ವೇಣೂರು, ಬಾಲಕೃಷ್ಣ ಮಿಜಾರು, ಲಕ್ಷ್ಮಣ ಮರಕಡ, ಸುರೇಶ್ ಬಾಯಾರ್, ಶಿವಾನಂದ ಪೆರ್ಲ, ಆದರ್ಶ ಮೂಡಬಿದ್ರಿ, ಶ್ರೀಶ ನಾರಾಯಣ ಹೆಗ್ಡೆ, ರಕ್ಷಿತ್ ಗುಡ್ಡೆಯಂಗಡಿ, ಸಂತೋಷ್ ಪಂಜಿಕಲ್, ಅನ್ವೇಶ್ ಬಂಟ್ವಾಳ್ ವಿವಿಧ ಪಾತ್ರ ನಿರ್ವಹಿಸಿದರು. ಪ್ರಮೋದ್, ಶಿವರಾಮ ಪಂಜ, ನಿತಿನ್ ಪಡುಬಿದ್ರಿ ನೇಪಥ್ಯ ಕಲಾವಿದರಾಗಿ ನೆರವು ನೀಡಿದರು.
ಅಮೆರಿಕದ 30 ಕಲಾವಿದರು ಈ ಪ್ರದರ್ಶನವನ್ನು ವೀಕ್ಷಿಸಿದರು. ಭಾರತೀಯ ನಾಟ್ಯಶಾಸ್ತ್ರದ ಬಗ್ಗೆ ಅಧ್ಯಯನ ಮಾಡುತ್ತಿರುವ ಡಾ. ತಮಾಂಡಾ ಮಾತನಾಡಿ, ವಿಶಿಷ್ಟ ಯಕ್ಷಗಾನ ಪ್ರದರ್ಶನ ವೀಕ್ಷಿಸಿ ಭಾವುಕರಾಗಿದ್ದೇವೆ. ಭಾರತೀಯ ಸಾಂಪ್ರದಾಯಿಕ, ಪ್ರಾತಿನಿಧಿಕ ಪ್ರಕಾರವನ್ನು ನೈಜವಾಗಿಯೇ ಕಂಡ ಅನುಭವವಾಯಿತು. ಈ ಪ್ರದರ್ಶನ ನಾನು ಮಾಡುತ್ತಿರುವ ಸಂಶೋಧನೆಗೆ ಪೂರಕವಾಗಿದೆ ಎಂದರು. ಆರಂಭದಲ್ಲಿ ಪೃಥ್ವೀರಾಜ ಕವತ್ತಾರು ಯಕ್ಷಗಾನದ ಪ್ರಸಂಗದ ಸ್ಥೂಲ ಪರಿಚಯ ನೀಡಿದರು. ರಂಗಕಲಾವಿದರು ಯಕ್ಷಗಾನ ಕಲಾವಿದರೊಂದಿಗೆ ಸಂವಾದ ನಡೆಸಿದರು.