ಜಿಲ್ಲೆ

ಮೈಸೂರಿನಲ್ಲಿ ಮೇಳೈಸಿದ ಯಕ್ಷಗಾನ ಪ್ರದರ್ಶನ

ಆರ್.ಕೃಷ್ಣ

ಮೈಸೂರು: ಕರಾವಳಿ ಯಕ್ಷಗಾನ ಕೇಂದ್ರದಿಂದ ನಗರದಲ್ಲಿ ಆಯೋಜಿಸಿದ್ದ 13ನೇ ವಾರ್ಷಿಕೋತ್ಸವದಲ್ಲಿ ತೆಂಕುತಿಟ್ಟು, ಬಡಗುತಿಟ್ಟು ವಿದ್ಯಾರ್ಥಿಗಳಿಂದ ಮೇಳೈಸಿದ ಯಕ್ಷಗಾನ ಪ್ರದರ್ಶನ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.
ಕುವೆಂಪುನಗರದ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿಕೋತ್ಸವದಲ್ಲಿ ಆರಂಭಕ್ಕೆ ಲಕ್ಷ್ಮೀನಾರಾಯಣ ಭಟ್, ಬಟ್ಯಮೂಲೆ ಅವರ ಭಾಗವತಿಕೆಯಲ್ಲಿ ಅಜುಪುರದ ಸುಬ್ಬ ಅವರ ರಚನೆಯ ‘ನರಕಾಸುರ ಮೋಕ್ಷ’ ಪ್ರಸಂಗವನ್ನು ವಿದ್ಯಾರ್ಥಿಗಳು ತೆರೆದಿಟ್ಟರು. ಪೃಥ್ವಿ ಬಡಕ್ಕಿಲ ಅವರ ಮದ್ದಳೆ, ಅರ್ಜುನ್ ಕೊರ್ಡೇಲ್ ಅವರ ಚಂಡೆ, ಅಭಿಷೇಕ್ ಭಟ್ ಚಣಿಲ ಅವರ ಚಕ್ರತಾಳ ಇತ್ತು. ಯಕ್ಷಗಾನದಲ್ಲಿ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳೊಂದಿಗೆ ಮುಮ್ಮೇಳದಲ್ಲಿ ಗಮನ ಸೆಳೆದರು. ಅಭಿಷೇಕ್ ಚಣಿಲ, ನಿಡ್ಲೆ ಕೇಂದ್ರದ ತೆಂಕುತಿಟ್ಟು ಈಶ್ವರಚಂದ್ರ ಭಟ್ ಅವರ ನಿರ್ದೇಶನ ಇತ್ತು.
ಬಳಿಕ ಪ್ರಸನ್ನ ಹೆಗಡೆ ಭಾವಗತಿಕಯ್ಲಿ ಗೇರುಸೊಪ್ಪೆ ಶಾಂತಪ್ಪಯ್ಯ ಮತ್ತು ಪಾಂಡೇಶ್ವರ ವೆಂಕಟ ಅವರ ರಚನೆಯ ಗಾಂಡೀವ ನಿಂದನೆ ಪ್ರಸಂಗವನ್ನು ಬಡಗುತಿಟ್ಟು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಅನಂತಪದ್ಮನಾಭ ಪಾಠಕ್ ಮದ್ದಳೆ, ಕಾರ್ತಿಕ್ ಧಾರೇಶ್ವರ ಅವರ ಚಂಡೆ ಸಹಕಾರ, ಮನೋಜ್‌ಭಟ್, ಅಲಕಾ ಕಟ್ಟೆಮನೆ ಅವರ ನಿರ್ದೇಶನ ಇತ್ತು. ಈ ಪ್ರಸಂಗದಲ್ಲಿಯೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.
ವೈದ್ಯರಾದ ಡಾ.ಸಂಜಯ್, ಡಾ. ನಾರಾಯಣ ಹೆಗಡೆ, ಕರಾವಳಿ ಯಕ್ಷಗಾನ ಕೇಂದ್ರದ ಅಧ್ಯಕ್ಷ ಶ್ರೀಧರ ಐತಾಳ, ಪ್ರಧಾನ ಕಾರ್ಯದರ್ಶಿ ಕೆ.ಗಣೇಶ್‌ಭಟ್ ಇತರರು ಇದ್ದರು.