ಜಿಲ್ಲೆ

ಯಕ್ಷಗಾನ ಕಲೆ ಕರ್ನಾಟಕದ ಹೆಮ್ಮೆ: ಸಾಹಿತಿ ಶ್ರೀನಿವಾಸ್‌ಶೆಟ್ಟಿ ಬಣ್ಣನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಯಕ್ಷಗಾನ ಎಂಬುದು ಕರ್ನಾಟಕದ ಹೆಮ್ಮೆಯ ಕಲೆಯಾಗಿದ್ದು, ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಲು ವಿದ್ಯಾರ್ಥಿ ದಿಸೆಯಲ್ಲಿಯೇ ಮುಖ್ಯವಾಗಬೇಕು ಎಂದು ಸಾಹಿತಿ ಶ್ರೀನಿವಾಸ್‌ಶೆಟ್ಟಿ ಅಭಿಪ್ರಾಯಪಟ್ಟರು.

ಇಲ್ಲಿನ ಶಂಕರನಗರದಲ್ಲಿ ವಿದ್ಯಾಗಣಪತಿ ಮತ್ತು ಉಮಾಮಹೇಶ್ವರಿ ದೇವಸ್ಥಾನ, ಬೆಂಗಳೂರಿನ ಯಕ್ಷ ಸಿಂಚನ ಟ್ರಸ್ಟ್ ಸಹಯೋಗದಲ್ಲಿ ನಡೆದ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನಿಸಿ ಮಾತನಾಡಿದ ಅವರು, ಮೊದಲು ಯಕ್ಷಗಾನ ದೇವಾಲಯಗಳಲ್ಲಿ ಬೆಳಕಿನ ಸೇವೆಯಾಗಿ ಆರಂಭಿಸಿದ ಕಲೆ ಇಂದು ಬದಲಾವಣೆಯ ಮೂಲಕ ತನ್ನದೇ ಛಾಪು ಮೂಡಿಸುತ್ತಿದೆ. ಯಕ್ಷಗಾನದಲ್ಲಿ ಸಂಗೀತ, ಆಶುಭಾಷಣ, ನೃತ್ಯ, ಅಭಿನಯವೆಲ್ಲವೂ ಸೇರುವ ಮೂಲಕ ಅದು ಹಲವು ಪ್ರಕಾರಗಳಲ್ಲಿ ಕಾಣಿಸುತ್ತಿದೆ ಎಂದು ವಿವರಿಸಿದರು.

ಯಕ್ಷಗಾನವು ಅಳವಿನಿಂಚನಲ್ಲಿರುವ ಕಲೆ ಎಂದು ಹೇಳಲಾಗುತ್ತಿತ್ತು. ಅದನ್ನು ಸರಿಪಡಿಸಿಕೊಂಡು ಹಲವು ಸಂಘ ಸಂಸ್ಥೆಗಳ ಸಹಕಾರದಿಂದ ವಿದ್ಯಾರ್ಥಿಗಳಿಗೂ ಯಕ್ಷಗಾನ ಕಲಿಸುವ ಮೂಲಕ ಅದನ್ನು ಪ್ರಚುರಪಡಿಸಲಾಗುತ್ತಿದೆ. ಇದು ಹಾಗೆಯೇ ಹೆಚ್ಚಿನ ರೀತಿಯಲ್ಲಿ ಪ್ರದರ್ಶನಗೊಳ್ಳುವ ಮೂಲಕ ಈ ಅಮೂಲ್ಯವಾದ ಯಕ್ಷಗಾನ ಕಲೆಯನ್ನು ನಮ್ಮಲ್ಲಿ ಉಳಿಸಿಕೊಂಡು ಹೋಗಬೇಕಿದೆ ಎಂದು ಸಲಹೆ ನೀಡಿದರು.

ದೇವಾಲಯ ಟ್ರಸ್ಟ್ ಅಧ್ಯಕ್ಷ ಎಂ.ಎಚ್.ಶಿವಲಿಂಗೇಗೌಡ ಮಾತನಾಡಿ, ಜಾಂಬವತಿ ಕಲ್ಯಾಣ ಯಕ್ಷಗಾನವನ್ನು ಪ್ರದರ್ಶಿಸುತ್ತಿರುವ ಕಲಾವಿದರಿಗೆ ಕೃತಜ್ಞತೆ ತಿಳಿಸುವೆ. ಹಾಗೆಯೇ ಇಲ್ಲಿ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವ ಹಿನ್ನಲೆಯಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ನಮಗೆ ಹೆಚ್ಚಿನ ಸಂತಸ ತರಿಸಿದೆ ಎಂದು ಶ್ಲಾಘಿಸಿದರು.

ಟ್ರಸ್ಟ್ ಉಪಾಧ್ಯಕ್ಷರಾದ ಶಿವರಾಜು, ಚಾಮರಾಜು, ಕಾರ್ಯದರ್ಶಿ ಎಚ್.ಆರ್.ಕೃಷ್ಣಮೂರ್ತಿ, ಖಜಾಂಚಿ ಬಿ.ಸಿದ್ದಯ್ಯ, ಅರ್ಚಕ ಶ್ರೀನಿವಾಸ್‌ಬಾಬು, ಗುತ್ತಿಗೆದಾರರಾದ ಚಂದ್ರಶೇಖರ್, ಬಾಲರಾಜು ಭಾಗವಹಿಸಿದ್ದರು.