ಜಿಲ್ಲೆ

ಯಕ್ಷಗಾನ ವಿದ್ವಾಂಸರನ್ನು ಗುರುತಿಸಲು ಪ್ರಶಸ್ತಿ ಪ್ರಾರಂಭ

ಉಡುಪಿ: ಯಕ್ಷಗಾನ ವಿದ್ವಾಂಸರನ್ನು ಗುರುತಿಸುವ ನಿಟ್ಟಿನಲ್ಲಿ ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿಯನ್ನು 2013ರಲ್ಲಿ ಪ್ರಾರಂಭಿಸಲಾಗಿದ್ದು, ಈವರೆಗೆ 12ಕ್ಕೂ ಅಧಿಕ ವಿದ್ವಾಂಸರನ್ನು ಗೌರವಿಸಲಾಗಿದೆ ಎಂದು ತಲ್ಲೂರು ಟ್ರಸ್ಟ್​ ಪ್ರವರ್ತಕ ಹಾಗೂ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಭಾನುವಾರ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ತಲ್ಲೂರು ಕನಕಾ&-ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿಸ್ಪಹ ಕಾರ್ಯಕರ್ತರ ತಂಡ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಯಾವುದೇ ಸಂಸ್ಥೆ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಯಕ್ಷಗಾನ ಕಲಾರಂಗ ಮಾದರಿಯಾಗಿದ್ದು, ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದೆ. ಗುರುರಾಜ ಮಾರ್ಪಳ್ಳಿ ಅವರು ಪ್ರಸಿದ್ಧಿಯ ಗೊಡವೆಯೇ ಇಲ್ಲದೆ ಸಾಧನೆ ಮಾಡಿರುವ ಅಪರೂಪದ ವ್ಯಕ್ತಿ ಎಂದು ಹೇಳಿದರು. ಈ ಸಂದರ್ಭದಲ್ಲಿ 40 ಸಾವಿರ ನಗದು ಪುರಸ್ಕಾರಗಳನ್ನೊಳಗೊಂಡ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಬಹುಮುಖೀ ಕಲಾ ಸಾಧಕ ಗುರುರಾಜ ಮಾರ್ಪಳ್ಳಿ ಅವರಿಗೆ ಪ್ರದಾನ ಮಾಡಲಾಯಿತು.

ಹಿರಿಯ ವಿದ್ವಾಂಸ ಪ್ರ್ರೊ. ಎಂ.ಎಲ್​. ಸಾಮಗ ಅಭಿನಂದನ ಭಾಷಣ ಮಾಡಿ, ಗುರುರಾಜ ಮಾರ್ಪಳ್ಳಿಯವರು ಸದಾ ಪ್ರಯೋಗಶೀಲತೆಗೆ ಮತ್ತೊಂದು ಹೆಸರು. ವಿಲಕ್ಷಣ ವ್ಯಕ್ತಿತ್ವ ಹೊಂದಿರುವ ಅವರು ಎಲ್ಲಾ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡು ತನ್ನದೇ ಆದ ಛಾಪು ಮೂಡಿಸಿದ್ದಾರೆ ಎಂದರು.

ಹಿರಿಯ ಪ್ರಸಂಗಕರ್ತ ಶ್ರೀಧರ ಡಿ. ಎಸ್​. ಅಭ್ಯಾಗತರಾಗಿದ್ದರು. ಟ್ರಸ್ಟ್​ನ ಗಿರಿಜಾ ಶಿವರಾಮ ಶೆಟ್ಟಿ , ಕಾರ್ಯದರ್ಶಿ ಮುರಲಿ ಕಡೆಕಾರ್​ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್​ ಸ್ವಾಗತಿಸಿ, ನಾರಾಯಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮ ಬಳಿಕ ಗುರುರಾಜ ಮಾರ್ಪಳ್ಳಿಯವರ ನಿರೂಪಣೆಯಲ್ಲಿ ಯಕ್ಷಗಾನ ಭಾಗವತಿಕೆ -ಗಮಕಗಳ ಸಂಶೋಧನಾತ್ಮಕ ಅಧ್ಯಯನ ಪ್ರಸ್ತುತಿಪಡಿಸಲಾಯಿತು. ಭಾಗವತರಾಗಿ ಶಶಿಕಿರಣ್​ ಮಣಿಪಾಲ್​, ಮದ್ದಲೆ ವಾದಕರಾಗಿ ಕೂಡ್ಲಿ ದೇವದಾಸ್​ ರಾವ್​, ಗಮಕ ವಿಶ್ಲೇಷಣಗಾರರಾಗಿ ಅರವಿಂದ ಹೆಬ್ಬಾರ್​, ರವಿಕಿರಣ್​ ಮಣಿಪಾಲ ಭಾಗವಹಿಸಿದ್ದರು.