ಜಿಲ್ಲೆ

ಯಕ್ಷಗಾನದ ಮೂಲಸ್ವರೂಪಕ್ಕೆ ಧಕ್ಕೆ ಸಲ್ಲದು

ಉಡುಪಿ: ಯಕ್ಷಗಾನದ ಜೀವಂತಿಕೆಗೆ ಹಿರಿಯ ಕಲಾವಿದರು ಭದ್ರ ಬುನಾದಿ ಹಾಕಿದ್ದಾರೆ. ಹೀಗಾಗಿ ರಂಗದ ಶ್ರೇಷ್ಠತೆಗೆ ಕೊರತೆಯಾಗಿಲ್ಲ. ಯುವಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ರಂಗಕ್ಕೆ ಪ್ರವೇಶಿಸುತ್ತಿದ್ದು, ಇದರ ಮೂಲ ಸ್ವರೂಪ ಮತ್ತು ಹಿರಿಯರ ತತ್ವ&ಆದರ್ಶಕ್ಕೆ ಅಪಚಾರವಾಗದಂತೆ ನೋಡಿಕೊಳ್ಳಬೇಕು ಎಂದು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಳದ ಧರ್ಮಕರ್ತೃ ಡಾ. ಜಿ. ಭೀಮೇಶ್ವರ ಜೋಶಿ ಹೇಳಿದರು.

ಐವೈಸಿ ಸಭಾಭವನದಲ್ಲಿ ಶನಿವಾರ ಕಲಾಸಕ್ತ ಮಟ್ಟಿ ಮುರಳೀಧರ ರಾವ್​ ಮತ್ತು ಹಿರಿಯ ಅರ್ಥಧಾರಿ ಪೆರ್ಲ ಕೃಷ್ಣ ಭಟ್ಟರ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆರ್ಥಿಕ ಅನುಕೂಲತೆ ಹಾಗೂ ಚಪ್ಪಾಳೆಗೋಸ್ಕರ ಯಕ್ಷಗಾನ ವೇದಿಕೆ ಬಳಸಿಕೊಳ್ಳಬಾರದು. ಕಲಾವಿದರು ಬದ್ಧತೆ ಇಟ್ಟುಕೊಳ್ಳಬೇಕು.ಮೇಳದ ಯಜಮಾನರೂ ಈ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣ ಪ್ರಸಾದ್​ ಅಡ್ಯಂತಾಯ, ಮೇಳದ ಯಜಮಾನ ಕಿಶನ್​ ಹೆಗ್ಡೆ ಕೊಳ್ಕೆಬೈಲು, ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್​, ಎಸ್​.ವಿ. ಭಟ್​ ಅಭ್ಯಾಗತರಾಗಿದ್ದರು. ಈ ಸಂದರ್ಭದಲ್ಲಿ ಹಿರಿಯ ಅರ್ಥಧಾರಿ ಡಾ. ಜಿ. ಎಲ್​. ಹೆಗಡೆ ಕುಮಟಾ ಅವರಿಗೆ ಮಟ್ಟಿ ಮುರಳೀಧರ ರಾವ್​ ಮತ್ತು ಸರ್ಪಂಗಳ ಈಶ್ವರ ಭಟ್​ ಇವರಿಗೆ ಪೆರ್ಲ ಕೃಷ್ಣ ಭಟ್ಟ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯದರ್ಶಿ ಮುರಲಿ ಕಡೆಕಾರ್​ ಕಾರ್ಯಕ್ರಮ ನಿರೂಪಿಸಿದರು.