ಜಿಲ್ಲೆ

ಶೇಣಿ ಜತೆ ಗುರುತು ಹೆಮ್ಮೆ:ಪ್ರಶಸ್ತಿ ಸ್ವೀಕರಿಸಿ, ಯಕ್ಷಗಾನ ಹಿರಿಯ ಕಲಾವಿದ ಕುಂಬ್ಳೆ ಸುಂದರ ರಾವ್ ಅಭಿಮತ

Dakshina Kannada

ಮಂಗಳೂರು ಶೇಣಿಯವರ ಹೆಸರಿನ ಪ್ರಶಸ್ತಿಗೆ ನಾನು ಅರ್ಹನೋ ಎನ್ನುವ ಸಂದೇಹವಿದ್ದರೂ, ಅವರೊಂದಿಗೆ ಗುರುತಿಸಲ್ಪಡುವುದಕ್ಕೆ ಹೆಮ್ಮೆಯಿದೆ. ನಾನು ಶಾಸಕನಾಗಿದ್ದ, ಮೇಳದ ಕಲಾವಿದನಾಗಿದ್ದ ಸುರತ್ಕಲ್‌ನಲ್ಲಿಯೇ ಪ್ರಶಸ್ತಿ, ಗೌರವ ಪಡೆಯುತ್ತಿರುವುದು ಹೆಮ್ಮೆ ತಂದಿದೆ. ಅವರಿಂದಲೇ ಕೊಡಲ್ಪಟ್ಟಿದ್ದೆಂದು ತಿಳಿದುಕೊಳ್ಳುತ್ತೇನೆ ಎಂದು ಯಕ್ಷಗಾನ ಹಿರಿಯ ಕಲಾವಿದ ಕುಂಬ್ಳೆ ಸುಂದರ ರಾವ್ ಹೇಳಿದರು.

ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಲಲಿತ ಕಲಾ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರ ಗೋವಿಂದದಾಸ ಕಾಲೇಜು, ಯಕ್ಷಗಾನ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಾಲೇಜು ಆವರಣದಲ್ಲಿ ಎರಡು ದಿನಗಳ ಕಾಲ ಜರುಗಿದ ಶೇಣಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾನುವಾರ ‘ಶೇಣಿ ಪ್ರಶಸ್ತಿ-2021’ ಸ್ವೀಕರಿಸಿ ಮಾತನಾಡಿದರು.

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ, ಶೇಣಿಯವರೊಂದಿಗೆ ಅರ್ಥ ಹೇಳುವ ಅವಕಾಶ ನನಗೂ ಒಂದು ಸಲ ಒದಗಿ ಬಂದಿತ್ತು ಎನ್ನುವುದು ಹೆಮ್ಮೆ. ಕುಂಬ್ಳೆ ಸುಂದರ ರಾವ್ ಅವರನ್ನು ಶೇಣಿಯವರು ಪ್ರೀತಿ ಅಭಿಮಾನದಿಂದ ‘ನಮ್ಮ ಸುಂದರ’ ಎಂದು ಕರೆಯುತ್ತಿದ್ದರು. ಅಪೇಕ್ಷೆ ಪಡದೆ ಅಧ್ಯಕ್ಷ ಸ್ಥಾನ ಸಿಕ್ಕಿದ್ದು, ಅದನ್ನು ಉಪೇಕ್ಷೆ ಮಾಡದೆ ಕ್ಷೇತ್ರದ ಬೆಳವಣಿಗೆಗೆ ಉಪಯೋಗಿಸುವೆ ಎಂದರು.

ಟ್ರಸ್ಟ್ ಅಧ್ಯಕ್ಷ ಎಂ.ಆರ್.ವಾಸುದೇವ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಕಮಲಾದೇವಿ ಪ್ರಸಾದ ಅಸ್ರಣ್ಣ ಆಶೀರ್ವಚನ ನೀಡಿದರು. ಕಸ್ತೂರಿ ಅರುಣ ಪೈ ಶೇಣಿ ಸಂಸ್ಮರಣೆ ಮಾಡಿದರು.ಯಕ್ಷಗಾನ ಅಕಾಡೆಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಿದರು.

ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಅಗರಿ ಎಂಟರ್‌ಪ್ರೈಸಸ್ ಮಾಲೀಕ ಅಗರಿ ರಾಘವೇಂದ್ರ ರಾವ್, ಉದ್ಯಮಿ ಶ್ರೀಪತಿ ಭಟ್ ಉಪಸ್ಥಿತರಿದ್ದರು. ಎಸ್.ಎನ್.ಭಟ್ ಸನ್ಮಾನ ಪತ್ರ ವಾಚಿಸಿದರು. ಉಪಾಧ್ಯಕ್ಷ ಕೂಡ್ಲು ಮಹಾಬಲ ಶೆಟ್ಟಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಜಿ.ಕೆ.ಭಟ್ ಸೇರಾಜೆ ಕಾರ್ಯಕ್ರಮ ನಿರೂಪಿಸಿದರು.

ಮುಖವರ್ಣಿಕೆ ಸ್ಪರ್ಧೆ ಹಾಗೂ ಪೌರಾಣಿಕ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ‘ಸುಧನ್ವ ಮೋಕ್ಷ’ ಯಕ್ಷಗಾನ ಬಯಲಾಟ ಜರುಗಿತು.

ಛಂದೋಬದ್ಧ ಗಾನ ವಿಚಾರಗೋಷ್ಠಿ: ಸಮಾರಂಭದ ಅಂಗವಾಗಿ ಯಕ್ಷಗಾನ ಗುರುಗಳಾದ ಗಣೇಶ ಕೊಲೆಕಾಡಿ ಅವರ ಶಿಷ್ಯವೃಂದದಿಂದ ‘ಛಂದೋಬದ್ಧ ಗಾನ- ವಾದನ ವೈದುಷ್ಯ ಮತ್ತು ಕೆಲವು ಮಟ್ಟುಗಳ ಮರ್ಮಾನಾವರಣ’ ವಿಚಾರಗೋಷ್ಠಿ ಭಾನುವಾರ ನಡೆಯಿತು.

ಛಾಂದಸ, ಉಪನ್ಯಾಸಕ ವಿಶ್ವನಾಥ ಕೆ ಅಧ್ಯಕ್ಷತೆ ವಹಿಸಿದ್ದರು. ‘ವಾದನ ವೈದುಷ್ಯ ಮತ್ತು ಛಂದಸ್ಸು’ ವಿಷಯದ ಬಗ್ಗೆ ಮದ್ದಳೆ ವಾದಕ ಕೃಷ್ಣಪ್ರಕಾಶ ಉಳಿತ್ತಾಯ, ‘ಕೆಲವು ಯಕ್ಷಗಾನ ಮಟ್ಟುಗಳ ಮರ್ಮಾನಾವರಣ’ ವಿಷಯದ ಬಗ್ಗೆ ಪ್ರಸಂಗಕರ್ತ ಶಿವಕುಮಾರ ಅಳಗೋಡು, ‘ಯಕ್ಷಗಾನ ಗಾನ ಮತ್ತು ಛಂದಸ್ಸಿನ ನಡುವಿನ ಸಂಬಂಧ’ ಎಂಬ ವಿಷಯದ ಬಗ್ಗೆ ಭಾಗವತರಾದ ಭವ್ಯಶ್ರೀ ಕುಲ್ಕುಂದ ವಿಷಯ ಮಂಡನೆ ಮಾಡಿದರು. ಭಾಗವತ ಚೇತನ್ ಸಚ್ಚರಿಪೇಟೆ ಯಕ್ಷಗಾನದ ಪರಂಪರೆಯ ಹಾಡು ಹಾಡಿದರು.

ಬಳಿಕ ಯಕ್ಷಗಾನ ಛಂದೋಬದ್ಧ ಗಾಯನದಲ್ಲಿ ಭಾಗವತರಾಗಿ ಭವ್ಯಶ್ರೀ ಕುಲ್ಕುಂದ, ದೇವರಾಜ ಆಚಾರ್ಯ, ಗುರುರಾಜ ಉಪಾಧ್ಯಾಯ, ಮದ್ದಳೆಯಲ್ಲಿ ಯಜ್ಞೇಶ ರೈ ಕಟೀಲು, ಚೆಂಡೆಯಲ್ಲಿ ಸವಿನಯ ನೆಲ್ಲಿತೀರ್ಥ, ಚಕ್ರತಾಳದಲ್ಲಿ ರಜತ್ ಡಿ.ಆರ್ ಈಶ್ವರಮಂಗಲ ಭಾಗವಹಿಸಿದ್ದರು. ಉಪನ್ಯಾಸಕ ದೀವಿತ್ ಎಸ್.ಕೆ.ಪೆರಾಡಿ ಕಾರ್ಯಕ್ರಮ ನಿರೂಪಿಸಿದರು.