ಜಿಲ್ಲೆ

ಯಕ್ಷಗಾನ ಕಲೆಯಿಂದ ಮಕ್ಕಳಲ್ಲಿ ಸಂಸ್ಕಾರ...

ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಂ ಶೆಟ್ಟಿ ಅಭಿಮತ

ವಿಜಯವಾಣಿ ಸುದ್ದಿಜಾಲ ಉಡುಪಿ

ಯಕ್ಷಗಾನ ಕಲೆ ಕರ್ನಾಟಕವಷ್ಟೇ ಅಲ್ಲದೆ ಎಲ್ಲೆಡೆ ಪಸರಿಸುವಂತಾಗಬೇಕೆಂಬ ಹಿನ್ನೆಲೆಯಲ್ಲಿ ಅಕಾಡೆಮಿಯ ವತಿಯಿಂದಲೇ ಗೋವಾ, ಮಹಾರಾಷ್ಟ್ರ, ಹೈದ್ರಾಬಾದ್​, ಮದ್ರಾಸ್​ನಲ್ಲಿಯೂ ಪ್ರದರ್ಶನ ಆಯೋಜಿಸಲಾಗಿದೆ. ಮಕ್ಕಳನ್ನು ವಿಶೇಷವಾಗಿ ಈ ಕಲೆಯತ್ತ ಆಕರ್ಷಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಯಕ್ಷಗಾನ ಕಲಿಕೆಯಿಂದ ಮಕ್ಕಳಲ್ಲಿ ಸಂಸ್ಕಾರ ಬೆಳೆಯಲಿದೆ. ಯಾವುದು ಸರಿ, ಯಾವುದು ತಪ್ಪು ಎನ್ನುವುದು ಅವರಿಗೆ ಪ್ರಾಯೋಗಿಕವಾಗಿ ಅನುಭವಕ್ಕೆ ಬರುತ್ತದೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಂ ಶೆಟ್ಟಿ ಅಭಿಮತ ವ್ಯಕ್ತಪಡಿಸಿದರು.

ಉಡುಪಿ ರಾಜಾಂಗಣದಲ್ಲಿ ಶ್ರೀಕೃಷ್ಣ ಮಠ, ಪರ್ಯಾಯ ಪುತ್ತಿಗೆ ಮಠ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದಲ್ಲಿ ಉಡುಪಿ ಯಕ್ಷಗಾನ ಕಲಾರಂಗ ಮೇ 31ರಂದು ಬೆಳಗ್ಗೆ ಆಯೋಜಿಸಿದ್ದ ಯಕ್ಷಗಾನ ಕಲಾವಿದರ ವಾರ್ಷಿಕ ಸಮಾವೇಶ ಮತ್ತು ಸಂಸ್ಥೆಯ ಸುವರ್ಣ ಸಡಗರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 ಕಲಾರಂಗ ಮಹತ್ವದ ಕಾರ್ಯ

ವೈದ್ಯರು, ಇಂಜಿನಿಯರ್​, ಶಿಕ್ಷಕರು ಸೇರಿದಂತೆ ಉನ್ನತ ಶಿಕ್ಷಣ ಪಡೆದವರೂ ಸಹ ಕಲೆಯ ತೇರು ಎಳೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಆದರೆ, ಯಕ್ಷಗಾನ ತನ್ನ ಸಾಂಪ್ರಾದಾಯಿಕ ಚೌಕಟ್ಟು ಮೀರುತ್ತಿದೆ ಎಂಬ ದೂರುಗಳೂ ಸಹ ಅಕಾಡೆಮಿಯ ಕದ ತಟ್ಟುತ್ತಿವೆ. ಕಲೆಯ ಗರಿಮೆಗೆ ಚ್ಯುತಿಯಾಗದಂತೆ ಉಳಿಸಿ ಬೆಳೆಸುವ ಜವಾಬ್ದಾರಿ ಕಲಾವಿದರ ಮೇಲಿದೆ. ಯಕ್ಷಗಾನ ಕಲಾರಂಗವು ಜಿಲ್ಲೆಯ 91 ಶಾಲೆಗಳಲ್ಲಿ ಉಚಿತವಾಗಿ ಯಕ್ಷಗಾನ ತರಬೇತಿ ನೀಡುವ ಮೂಲಕ ಮಹತ್ವದ ಕಾರ್ಯ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಉದ್ಯಮಿ ಗೋಪಾಲ ಬಂಗೇರ ಮಲ್ಪೆ, ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್​, ಉಪಾಧ್ಯಕ್ಷರಾದ ವಿ.ಜಿ. ಶೆಟ್ಟಿ, ಎಸ್​.ವಿ. ಭಟ್​, ಕಾರ್ಯದರ್ಶಿ ಮುರಳಿ ಕಡೆಕಾರ್​, ಕೋಶಾಧಿಕಾರಿ ಸದಾಶಿವ ರಾವ್​ ಉಪಸ್ಥಿತರಿದ್ದರು.

ಭಾಗವತ ರತ್ನಾಕರ ಶೆಣೈ ಹಾಗೂ ಮೃದಂಗ ವಾದಕ ಸುನೀಲ ಭಂಡಾರಿ ಗಜಮುಖ ನಾ ನಿನ್ನ ಪಾದವ ನೆನೆವೆ ಎಂಬ ಯಕ್ಷಗಾನ ಸ್ತುತಿಪದ್ಯ ಹಾಡಿದರು. ಅಕಾಡೆಮಿಯ ರಜಿಸ್ಟ್ರಾರ್​ ನಮ್ರತಾ ಸ್ವಾಗತಿಸಿದರು. ಅಕಾಡೆಮಿಯ ಸದಸ್ಯ ಸತೀಶ ಅಡಪ ವಂದಿಸಿದರು. ರಂಗಕರ್ಮಿ ಗಣೇಶ ಎಲ್ಲೂರು ಕಾರ್ಯಕ್ರಮ ನಿರೂಪಿಸಿದರು.

ಕಲಾವಿದರಿಗಾಗಿ ಯಕ್ಷ ಚರ್ಚೆ

ಬೆಳಗ್ಗೆ 9ರಿಂದ ಯಕ್ಷಗಾನ ಕಲಾವಿದರಿಗಾಗಿ ಕೆಎಂಸಿ ಮಣಿಪಾಲದ ವೈದ್ಯರಿಂದ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಬೆಳಗ್ಗೆ 11:30ಕ್ಕೆ ಯಕ್ಷಗಾನ ಕಲೆಯ ಕುರಿತು ಕಲಾವಿದರಿಂದಲೇ ಕಲೆ ಪೂರ್ಣಾವಧಿ ಉದ್ಯೋಗ ಆಗಿರಬೇಕೆ?- ಉಪವೃತ್ತಿ ಆಗಿರಬೇಕೇ? ಎಂಬ ವಿಷಯ ಕುರಿತು ಮುಕ್ತ ಚರ್ಚೆ ನಡೆಯಿತು.

ಗಮನ ಸೆಳೆದ ಕೇರಳದ ಕೂಡಿಯಾಟ್ಟಂ

ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದೊಂದಿಗೆ ಬೆಳಗ್ಗೆ 10:30ಕ್ಕೆ ತ್ರಿಶೂರ್​ನ ಇಂಞಲಕುಡದ ಮಾಧವ ಮಾತೃ ಗ್ರಾಮಂ ಕೂಡಿಯಾಟ್ಟಂ ಗುರುಕುಲಂ ಅವರಿಂದ ಸೀತಾಪಹರಣಂ-ಜಟಾಯುವಧಂ ಎಂಬ ಕೂಡಿಯಾಟ್ಟಂ ಪ್ರದರ್ಶನ ನಡೆಯಿತು. ಸಂಸತ ಸಂಭಾಷಣೆಯೊಂದಿಗೆ ನಾಟ್ಯ ಶಾಸ್ತ್ರದ ವಿಶೇಷ ಆಂಗಿಕ, ಸಾಂಖ್ಯಿಕ, ಮುದ್ರೆಗಳ ಅಭಿನಯ ಹಾಗೂ ವಿಶೇಷ ಹಿಮ್ಮೇಳದಲ್ಲಿ ಪ್ರದರ್ಶನಗೊಂಡ ಈ ಕಲೆ ಸಭಿಕರ ಗಮನ ಸೆಳೆಯಿತು.