ವಿಜಯವಾಣಿ ಸುದ್ದಿಜಾಲ ಉಡುಪಿ
ಇಂದಿನ ಯುವ ಜನತೆಯನ್ನು ಯಕ್ಷಗಾನ ಕಲೆಯತ್ತ ಸೆಳೆಯಲು ಅಕಾಡಮಿ ಇನ್ನಷ್ಟು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಯಕ್ಷಗಾನ ಕಲಿಕೆಯಿಂದ ಮಕ್ಕಳಲ್ಲಿ ಧನಾತ್ಮಕ ಚಿಂತನೆ ಉಂಟಾಗುತ್ತದೆ. ಯಕ್ಷಗಾನ ಹಾಗೂ ಕಂಬಳ ಕ್ರೀಡೆಯು ಅವಿಭಜಿತ ದ.ಕ. ಜಿಲ್ಲೆಯ ಎರಡು ಕಣ್ಣುಗಳಿದ್ದಂತೆ. ಅದನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಅಭಿಮತ ವ್ಯಕ್ತಪಡಿಸಿದರು.
ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಪಾರ್ತಿಸುಬ್ಬ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಕ್ಷಗಾನ ಅಕಾಡೆಮಿಯಿಂದ 2024ನೇ ಸಾಲಿನಲ್ಲಿ ವಿವಿಧ ಪ್ರಶಸ್ತಿ ಸ್ವೀಕರಿಸಿದ ಕಲಾವಿದರ ಜೀವನ ಚರಿತ್ರೆ ಒಳಗೊಂಡ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಮಕ್ಕಳಿಗೆ ವಿವಿಧ ಕಲೆಯಿಂದಾಗುವ ಪ್ರಯೋಜನವನ್ನು ಹೆತ್ತವರು ಅರಿತುಕೊಳ್ಳಬೇಕು. ಯಕ್ಷಗಾನದೊಂದಿಗೆ ಭರತನಾಟ್ಯ ಕಲಿತರೆ ಮಕ್ಕಳ ವ್ಯಕ್ತಿತ್ವ ವಿಕಸನವಾಗುತ್ತದೆ. ತಂತ್ರಜ್ಞಾನ ಎಷ್ಟೇ ಬೆಳೆದರೂ ನಮ್ಮ ಸಾಂಪ್ರದಾಯಿಕ ಕಲೆಗಳನ್ನು ಮರೆಯಬಾರದು. ನಮ್ಮ ಸಂಸತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕು. ಆ ಕೆಲಸದಲ್ಲಿ ನನ್ನಿಂದಾಗುವ ಎಲ್ಲ ಸಹಕಾರ ನೀಡುತ್ತೇನೆಂದು ಖಾದರ್ ಭರವಸೆ ನೀಡಿದರು.
ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ಎನ್.ಬಿ. ವಿಜಯ ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು. ಪಾರ್ತಿಸುಬ್ಬ ಪ್ರಶಸ್ತಿ ಪುರಸತ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿದರು.
ಮಾಹೆಯ ಸಹ ಕುಲಪತಿ ಡಾ.ನಾರಾಯಣ ಸಭಾಹಿತ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಪ ಸದಸ್ಯ ಮಂಜುನಾಥ್ ಭಂಡಾರಿ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೆರೂರು, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ, ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ್ ರಾವ್, ಅಕಾಡೆಮಿಯ ಸದಸ್ಯರು ಉಪಸ್ಥಿತರಿದ್ದರು.
ಅಕಾಡೆಮಿಯ ರಿಜಿಸ್ಟ್ರಾರ್ ನಮೃತಾ ಸ್ವಾಗತಿಸಿ, ವಂದಿಸಿದರು. ಸದಸ್ಯ ರಾಘವ ಎಚ್. ಕಾರ್ಯಕ್ರಮ ನಿರೂಪಿಸಿದರು.
ಸಂಸ್ಕೃತಿ, ಸಂಸ್ಕಾರ ಕಲಿಸಿಕೊಡುವ ಕಲೆ ಯಕ್ಷಗಾನ. ಹಳ್ಳಿಯ ಜನರಿಗೆ ರಾಮಾಯಣ, ಮಹಾಭಾರತದ ಕಥೆಯನ್ನು ಪರಿಣಾಮಕಾರಿಯಾಗಿ ತಿಳಿಸುವುದೂ ಕೂಡ ಇದೇ ಕಲೆಯಾಗಿದೆ. ಯಕ್ಷಗಾನ ಇಂದು ವಿಶ್ವಗಾನವಾಗಲು ಕಾರಣರಾದ ಡಾ.ಕೋಟ ಶಿವರಾಮ ಕಾರಂತರು ಸೇರಿದಂತೆ ಎಲ್ಲ ಕಲಾವಿದರನ್ನು ನೆನಪಿಸಿಕೊಳ್ಳಬೇಕು. | ಡಾ. ಎನ್.ಬಿ. ವಿಜಯ ಬಲ್ಲಾಳ್. ಅಂಬಲಪಾಡಿ ದೇವಳದ ಧರ್ಮದರ್ಶಿ ಯಕ್ಷಗಾನ ಅಕಾಡೆಮಿಗೆ ಇನ್ನಷ್ಟು ಶಕ್ತಿ ತುಂಬುವ ಕಾರ್ಯವಾಗಬೇಕಿದೆ. ಉಡುಪಿ ಯಕ್ಷಗಾನ ಕಲಾರಂಗದ ನೇತೃತ್ವದಲ್ಲಿ 90ಕ್ಕೂ ಅಧಿಕ ಶಾಲೆಗಳಲ್ಲಿ 3 ಸಾವಿರಕ್ಕೂ ಅಧಿಕ ಮಕ್ಕಳು ಯಕ್ಷಗಾನ ಕಲಿಯುತ್ತಿದ್ದಾರೆ. ಸರ್ಕಾರದಿಂದಲೂ ಇಂತಹ ಉತ್ತಮ ಕಾರ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗುವಂತಾಗಬೇಕು. | ಯಶ್ಪಾಲ್ ಸುವರ್ಣ. ಶಾಸಕ