ಜಿಲ್ಲೆ

ಯಕ್ಷಗಾನ ಶಿಕ್ಷಕರ ಸಮಾಲೋಚನಾ ಸಭೆ

Mangaluru - Hariprasad Rai



ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಯಕ್ಷ ಶಿಕ್ಷಣ ಯೋಜನೆಯಡಿ ಸೇವಾನಿರತರಾಗಿರುವ ಯಕ್ಷಗಾನ ಶಿಕ್ಷಕರ ಸಮಾಲೋಚನಾ ಸಭೆ ನಗರದ ಪತ್ತುಮುಡಿ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಪಟ್ಲ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು ಪ್ರಸಕ್ತ ಸಾಲಿನ ಯಕ್ಷ ಶಿಕ್ಷಣ ಯೋಜನೆಯ ರೂಪುರೇಷೆಯ ಬಗ್ಗೆ ಯಕ್ಷಗಾನ ಶಿಕ್ಷಕರಿಗೆ ಮಾಹಿತಿ ನೀಡಿದರು. ಯೋಜನೆಯ ಗೌರವ ಸಲಹೆಗಾರ ಪ್ರೊ. ಎಂ.ಎಲ್ ಸಾಮಗ ಅವರು ಪ್ರಸಕ್ತ ಕಾಲದಲ್ಲಿ
ಯಕ್ಷಗಾನ ಶಿಕ್ಷಣದ ಸಾಧ್ಯತೆ ಬಗ್ಗೆ ಹಾಗೂ ಡಾ.ಎಂ.ಪ್ರಭಾಕರ ಜೋಷಿ ಯಕ್ಷಗಾನ ಶಿಕ್ಷಕರ ಸವಾಲು - ಸಾಧ್ಯತೆಗಳ ಬಗ್ಗೆ ತಿಳಿಸಿದರು.
ಯಕ್ಷಧ್ರುವ ದಶಮ ಪಟ್ಲ ಸಂಭ್ರಮದಲ್ಲಿ ಬಿಡುಗಡೆಯಾದ ’ಯಕ್ಷಧ್ರುವ ಯಕ್ಷಶಿಕ್ಷಣ - ತೆಂಕುತಿಟ್ಟು ಯಕ್ಷಗಾನ ಶಿಕ್ಷಣ ತಂತ್ರಜ್ಞಾನಾಧಾರಿತ ಪಠ್ಯ ಪುಸ್ತಕ’ ವನ್ನು ಯಕ್ಷಗಾನ ಶಿಕ್ಷಕರಿಗೆ ವಿತರಿಸಲಾಯಿತು. ಬಳಿಕ ಯಕ್ಷಗಾನ ಶಿಕ್ಷಕರೊಡನೆ ಸಂವಾದವನ್ನು ಏರ್ಪಡಿಸಲಾಯಿತು.
ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ಸಲಹಾ ಸಮಿತಿಯ ಸದಸ್ಯ ಸರಪಾಡಿ ಅಶೋಕ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ, ಮಂಬೈ ಘಟಕದ ಸಂಚಾಲಕ ಕರ್ನೂರು ಮೋಹನ್ ರೈ, ಯಕ್ಷಗಾನ ಸಂಘಟಕ ರಮೇಶ್ ಮಂಜೇಶ್ವರ, ಪತ್ರಕರ್ತ ನಗರ ರಾಘವೇಂದ್ರ ಹಾಗೂ 36 ಮಂದಿ ಯಕ್ಷಗಾನ ಶಿಕ್ಷಕರು ಉಪಸ್ಥಿತರಿದ್ದರು. ಯೋಜನೆಯ ಪ್ರಧಾನ ಸಂಚಾಲಕ ಪಣಂಬೂರು ವಾಸುದೇವ ಐತಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ಪ್ರಧಾನ ಸಂಚಾಲಕ ಪಣಂಬೂರು ವಾಸುದೇವ ಐತಾಳ ಸ್ವಾಗತಿಸಿ ವಂದಿಸಿದರು. ಸಂಯೋಜಕ ದೀವಿತ್.ಎಸ್.ಕೆ. ಪೆರಾಡಿ ಕಾರ್ಯಕ್ರಮ ನಿರೂಪಿಸಿದರು.