ಮಂಜೇಶ್ವರ: ಮಜಿಬೂಲು ಶ್ರೀ ವಿಷ್ಣು ಯಕ್ಷಬಳಗ ಕಲಾ ತಂಡದ ಯಕ್ಷ ಶತಕ ಕಾರ್ಯಕ್ರಮ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶಾಸೀಯ ಸಂಗೀತ, ತಾಳಮದ್ದಳೆ, ಬಯಲಾಟ, ಗೌರವಾರ್ಪಣೆ, ಸನ್ಮಾನ ಸಹಿತ ವಿವಿಧ ಕಾರ್ಯಕ್ರಮಗಳೊಂದಿಗೆ ಭಾನುವಾರ ಸಮಾರೋಪಗೊಂಡಿತು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದಲ್ಲಿ ಜರುಗಿದ ಸಮಾರಂಭಕ್ಕೆ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮೀಯಪದವು ಶ್ರೀ ಗುರುನರಸಿಂಹ ಯಕ್ಷಬಳಗ, ಪೈವಳಿಕೆ ಶ್ರೀ ಬೆನಕ ಯಕ್ಷ ಕಲಾ ವೇದಿಕೆ ಸಹಕಾರ ನೀಡಿದ್ದರು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅರಸು ಸಂಕಲ ದೈವಕ್ಷೇತ್ರ ಸಂತಡ್ಕ ಮಾಡ ಕ್ಷೇತ್ರದ ಅಧ್ಯಕ್ಷ ಡಾ.ಶ್ರೀಧರ ಭಟ್ ಅಧ್ಯಕ್ಷತೆ ವಹಿಸಿದ್ದರು. ನೇಪಾಳ ಪಶುಪತಿ ದೇವಸ್ಥಾನದ ನಿವೃತ್ತ ಅರ್ಚಕ ರುರಾಮ ಕಾರಂತ ಪದ್ಯಾಣ, ಕಸಾಪ ಕಾಸರಗೋಡು ಜಿಲ್ಲಾ ಅಧ್ಯಕ್ಷ ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಉದ್ಯಮಿ ನರಸಿಂಹ ಕುಲಾಲ್ ಕಟ್ಟೆ ಕಡಂಬಾರು ಉಪಸ್ಥಿತರಿದ್ದರು.
ವಿಷ್ಣುಬಳಗದ ಅಧ್ಯಕ್ಷ ಹರೀಶ್ ನಾವಡ ಮಜಿಬೈಲು ಸ್ವಾಗತಿಸಿದರು. ರಾಧಾಮಣಿ ಮೀಯಪದವು ಪ್ರಾರ್ಥನೆಗೈದರು. ಗುರುರಾಜ ಹೊಳ್ಳ ಬಾಯಾರು ನಿರೂಪಿಸಿದರು. ಮಮತಾ ನಾವಡ ಮಜಿಬೈಲು ವಂದಿಸಿದರು.
ಸನ್ಮಾನ ಗೌರವಾರ್ಪಣೆ
ಯಕ್ಷ ಶತಕ ಸಂಭ್ರಮದಲ್ಲಿ ಹಿರಿಯ ಸಂಗೀತ ಗುರು ಶಿಲ್ಪಾ ಭಟ್ ಹಾಗೂ ಯಕ್ಷಗಾನ ಹಿಮ್ಮೇಳ ಗುರು ಶೇಣಿ ಸುಬ್ರಹ್ಮಣ್ಯ ಭಟ್, ಹವ್ಯಾಸಿ ಕಲಾವಿದ ಮಾಧವ ನಾವಡ ವರ್ಕಾಡಿ, ಗೋಪಾಲಕೃಷ್ಣ ನಾಯಕ್ ಸೂರಂಬೈಲು ಅವರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ವಿದುಷಿ ಶಿಲ್ಪಾ ಭಟ್ ಮತ್ತು ಶಿಷ್ಯೆಯರಾದ ಮಮತಾ ನಾವಡ ಹಾಗೂ ವಿಷ್ಣುಪ್ರಿಯ ನಾವಡ ಅವರಿಂದ ಶಾಸೀಯ ಸಂಗೀತ, ವಾಮನ ಚರಿತ್ರೆ ತಾಳಮದ್ದಳೆ, ವೀರ ತರಣಿಸೇನ ಹಾಗೂ ವೀರವರ್ಮ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.