ವಿಜಯವಾಣಿ ಸುದ್ದಿಜಾಲ ಉಡುಪಿ
ಯಕ್ಷಗಾನ ಕಲೆಯಿಂದು ಕೇವಲ ಕರಾವಳಿಗಷ್ಟೇ ಸೀಮಿತವಾಗಿಲ್ಲ. ಸೀಮೋಲ್ಲಂಘನ ಮಾಡಿರುವ ಈ ಕಲೆ ಬೆಂಗಳೂರು, ಮುಂಬಯಿ, ದೆಹಲಿಯಷ್ಟೇ ಅಲ್ಲದೆ, ಅಮೆರಿಕ ಸೇರಿದಂತೆ ವಿವಿಧ ದೇಶಗಳಲ್ಲೂ ತನ್ನ ಕಂಪು ಬೀರಿದ್ದಲ್ಲದೆ ಅಪಾರ ಯಕ್ಷಗಾನ ಪ್ರೇಮಿಗಳನ್ನು ಹುಟ್ಟುಹಾಕಿದೆ. ಇಂದು ಯಕ್ಷಗಾನ ಕಲಿಯಲು, ಪ್ರದರ್ಶಿಸಲು ಯಾವುದೇ ಪ್ರಾದೇಶಿಕ ಚೌಕಟ್ಟಿನ ಭಯವಿಲ್ಲ ಎಂದು ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಭಿಮತ ವ್ಯಕ್ತಪಡಿಸಿದರು.
ಗೋವಾ ರಾಜ್ಯದ ಪಣಜಿಯ ಕನ್ನಡ ಸಮಾಜದ ಆಶ್ರಯದಲ್ಲಿ ಮೆನೆಜಸ್ ಭ್ರಗಾಂಜ ಸಭಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಮಾ.9ರಂದು ಹಮ್ಮಿಕೊಂಡಿದ್ದ ಯಕ್ಷ ಶರಧಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಅಕಾಡೆಮಿಗೆ ಬಲತುಂಬಿದೆ. ಸರ್ಕಾರ ನೀಡುವ ಅನುದಾನವು ಯಕ್ಷಗಾನ ಕಲೆ, ಕಲಾವಿದರಿಗೆ ಸಲ್ಲಬೇಕು ಎನ್ನುವುದು ನಮ್ಮ ಬಯಕೆ. ಮಕ್ಕಳಿಗೆ ಈ ಕಲೆ ಕಲಿಸುವುದು ಅಕಾಡೆಮಿಯ ಮಹಾತ್ವಾಕಾಂಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಯಕ್ಷಗಾನ ಕಲಿಸುವ ಸಂಘ-ಸಂಸ್ಥೆಗಳಿಗೂ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಗೋವಾ ಬಂಟ್ಸ್ ಸಂಘ ಮತ್ತು ಮಡಗಾಂವ್ ವಿಮಾ ಸರ್ವೇಯರ್ ಸಂಸ್ಥೆಯ ಕಾರ್ಯದರ್ಶಿ ಸುನೀಲ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಪತ್ರಕರ್ತ ಹಾಗೂ ಭಾಗವತ ಎ.ಜಿ. ಶಿವಾನಂದ ಭಟ್, ಗೋವಾ ವಿಶ್ವವಿದ್ಯಾಲಯದ ಸಮಾಜ ಶಾಸ್ತ್ರದ ಹಿರಿಯ ಪ್ರಾಧ್ಯಾಪಕ ಡಾ.ಗಣೇಶ್ ಸೋಮಯಾಜಿ ಮಾತನಾಡಿದರು.
ಅರ್ಥಧಾರಿ ಬೆಂಗಳೂರಿನ ಅಜಿತ್ ಕಾರಂತ "ಯಕ್ಷಸಾಹಿತ್ಯ ಸಾಂಗತ್ಯ' ವಿಷಯ ಕುರಿತು ಮಾತನಾಡಿದರು.
ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ ಎನ್., ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್, ಕಾರ್ಯದರ್ಶಿ ಶ್ರೀಕಾಂತ್ ಲೋಣಿ, ಅಕಾಡೆಮಿ ಸದಸ್ಯ ಸಂಚಾಲಕ ಕೊಪ್ಪಲ ಮೋಹನ ಕದ್ರಿ, ಸದಸ್ಯರಾಧ ಜಿ.ಎಸ್. ಉಲ್ಲಾಳ್, ಗುರುರಾಜ ಭಟ್, ರಾಜೇಶ್, ರಾಘವ, ಪುಟ್ಟಸ್ವಾಮಿ, ದಯಾನಂದ ಬೆಳ್ಳಾಲ, ಪ್ರಥ್ವಿ ರಾಜೇಶ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಹೊನ್ನವಳ್ಳಿಯ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾ ಸಂಘದ ವತಿಯಿಂದ ಶರಸೇತು ಬಂಧನ ತಾಳಮದ್ದಲೆ ಹಾಗೂ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಮಂಡಳಿ ಹಳುವಳ್ಳಿ ಕಳಸ ಇವರಿಂದ ಸುಧನ್ವಾರ್ಜುನ ಯಕ್ಷಗಾನ ಪ್ರದರ್ಶನ ನಡೆಯಿತು.
ಯಕ್ಷಗಾನ ಕಲೆ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ದೇಶ-ವಿದೇಶದಿಂದ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಈ ನಿಟ್ಟಿನಲ್ಲಿ ಗೋವಾ ಕನ್ನಡ ಸಮಾಜದ ಕಲಾಸೇವೆ ಅನುಕರಣೀಯ. ಸಾಧ್ಯವಾದಷ್ಟು ಹೆಚ್ಚು ಎಲ್ಲೆಡೆ ಪ್ರವಾಸ ಮಾಡುತ್ತಿದ್ದೇನೆ. ಇಂತಹ ಯಕ್ಷಗಾನ ಕಾರ್ಯಕ್ರಮಗಳಿಗೆ ಅಕಾಡೆಮಿಯಿಂದ ನಿರಂತರ ಪ್ರೋತ್ಸಾಹ ನೀಡಲಾಗುವುದು. | ಡಾ.ತಲ್ಲೂರು ಶಿವರಾಮ ಶೆಟ್ಟಿ. ಯಕ್ಷಗಾನ ಅಕಾಡೆಮಿ ಅಧ್ಯಕ್ಷ