ಕೋಟ: ಯಕ್ಷಗಾನವೆಂಬುವುದು ಕರಾವಳಿಯ ಗಂಡುಕಲೆ ಎಂಬುದು ನಾವೆಲ್ಲರೂ ತಿಳಿದುಕೊಂಡಿರುವ ವಿಚಾರ. ಆದರೆ ಇದರಲ್ಲಿ ವಿಜೃಂಭಿಸಿ ಮೆರೆದ ಹಲವಾರು ಹಿರಿಯ ಕಲಾವಿದರ ಕೊಡುಗೆ ಸಹ ಅಷ್ಟೇ ಅಮೂಲ್ಯ ಎಂದು ಹಂಗಾರಕಟ್ಟೆ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದರು.
ಶುಕ್ರವಾರ ಕೋಟದ ಯಕ್ಷಸೌರಭ ಹಿರೇಮಹಾಲಿಂಗೇಶ್ವರ ಕಲಾರಂಗದ 6ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಹಿರೇಮಹಾಲಿಂಗೇಶ್ವರ ದೇವಳದ ಸನಿಹದಲ್ಲಿ ಹಮ್ಮಿಕೊಂಡ ಯಕ್ಷಸೌರಭ ಪ್ರಶಸ್ತಿ 2021ರಂಗಾವತರಣಾ ಶೀರ್ಷಿಕೆಯಡಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಯಕ್ಷಗಾನದ ಮೂಲಕ ನಾಡನ್ನು ಕಟ್ಟುವ ಜತೆ ಕಲಾರಾಧನೆ ಉಳಿಸಿ ಬೆಳೆಸುವ ಕಾರ್ಯ ಪ್ರಶಂಸನೀಯ ಎಂದರು.
ಶುಭಾಶಂಸನೆಗೈದ ಯಕ್ಷಚಿಂತಕ ಎಚ್.ಸುಜಯೀಂದ್ರ ಹಂದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಹವ್ಯಾಸಿ ಯಕ್ಷತಂಡಗಳು ಹುಟ್ಟಿ ಒಂದಿಷ್ಟು ಶಿಬಿರಗಳನ್ನು ಆಯೋಜಿಸಿ ಯುವ ಕಲಾವಿದರಿಗೆ ಜನ್ಮ ನೀಡುವಂತಾಗಲಿ ಎಂದು ಹಾರೈಸಿದರು.
ಯಕ್ಷಗುರು ಕೃಷ್ಣಮೂರ್ತಿ ಉರಾಳ ಅವರಿಗೆ ಬಾಳೆಕುದ್ರು ನೃಸಿಂಹಾಶ್ರಮ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೃಷ್ಣಮೂರ್ತಿ ಉರಾಳ, ಚಿಕ್ಕವನಿರುವಾಗಲೇ ಯಕ್ಷಗಾನದಲ್ಲಿ ತೊಡಗಿಕೊಂಡೆ, ಹಲವು ಹಿರಿಯ ಕಲಾವಿದರ ನೆರವಿನೊಂದಿಗೆ ಇಂದು ಯಕ್ಷಗುರು, ವೇಷವರ್ಣಿಕೆ, ಯಕ್ಷಸ್ಮರಣಿಕೆಯ ಕಲಾವಿದನಾಗಿ ಗುರುತಿಸುವಂತೆ ಮಾಡಿದೆ ಎಂದರು.
ಕೋಟ ಅಮೃತೇಶ್ವರ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್ ಅಧ್ಯಕ್ಷತೆ ವಹಿಸಿದರು.
ಯಕ್ಷಸೌರಭದ ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಅಭಿನಂದನಾ ಮಾತುಗಳನ್ನಾಡಿದರು.
ಯಕ್ಷ ವಿಮರ್ಶಕ ಸುರೇಂದ್ರ ಪಣಿಯೂರು, ಉದ್ಯಮಿ ಬಡಾಮನೆ ರತ್ನಾಕರ್ ಶೆಟ್ಟಿ, ಕೋಟ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಗಣೇಶ್ ಭಟ್, ಕೋಟ ಗ್ರಾಪಂ ಅಧ್ಯಕ್ಷ ಅಜಿತ್ ದೇವಾಡಿಗ, ಯಕ್ಷಸೌರಭದ ಗೌರವಾಧ್ಯಕ್ಷ ಭೋಜ ಪೂಜಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಗೌರವ ಸಲಹೆಗಾರ ಟಿ.ಮಂಜುನಾಥ ಗಿಳಿಯಾರ್ ಸ್ವಾಗತಿಸಿ, ಯಕ್ಷಸೌರಭದ ಅಧ್ಯಕ್ಷ ಮಂಜುನಾಥ ಭಂಡಾರಿ ಪ್ರಾಸ್ತಾವನೆ ಸಲ್ಲಿಸಿದರು. ಸದಸ್ಯ ರಾಜೇಶ್ ಕರ್ಕೇರ ನಿರೂಪಿಸಿ, ಯಕ್ಷಸೌರಭ ಕಲಾರಂಗದ ಕಾರ್ಯಾಧ್ಯಕ್ಷ ಕೋಡಿ ರಾಘವೇಂದ್ರ ಕರ್ಕೇರ ವಂದಿಸಿದರು. ಯಕ್ಷಸೌರಭ ಕಲಾರಂಗದವರಿಂದ ನವಗ್ರಹ ಮಹಾತ್ಮೆ ಪ್ರಸಂಗ ಪ್ರದರ್ಶಿಸಲ್ಪಟ್ಟಿತು.
ಯಕ್ಷಕಲಾವಿದರಿಗೆ ಸನ್ಮಾನ
ಹವ್ಯಾಸಿ ಯಕ್ಷಕಲಾವಿದರಾದ ಕಾರ್ಕಡ ಯಕ್ಷಮಿತ್ರ ತಂಡದ ಸದಸ್ಯರಾದ ಸೀತಾರಾಮ್ ಸೋಮಯಾಜಿ, ಗಿರೀಶ್ ಹೊಳ್ಳ, ಮಟಪಾಡಿ ನಂದಿಕೇಶ್ವರ ಯಕ್ಷಗಾನ ಸಂಘದ ಪ್ರಭಾಕರ್ ಆಚಾರ್ಯ ಮಟಪಾಡಿ, ಶಿರಿಯಾರ ಬ್ರಹ್ಮಬಂಟ ಶಿವರಾಯ ಯಕ್ಷತಂಡದ ಅಶೋಕ್ ಆಚಾರ್ಯ ಸಾಯಿಬ್ರಕಟ್ಟೆ, ಕೋಡಿ ಕನ್ಯಾಣ ರಾಮಪ್ರಸಾದ ಯಕ್ಷಗಾನ ಸಂಘದ ರಾಧಾಕೃಷ್ಣ ಸಾಲ್ಯಾನ್ ಅವರನ್ನು ಗೌರವಿಸಲಾಯಿತು.