ಉಡುಪಿ: ಯಕ್ಷಗಾನ ಕಲೆಗೆ ಉಡುಪಿಯ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ನೀಡುತ್ತಿರುವ ಕೊಡುಗೆ ಶ್ಲಾಘನೀಯ. ತಲ್ಲೂರು ಶಿವರಾಮ ಶೆಟ್ಟಿಯವರು ಯಕ್ಷಗಾನ ಕಲೆಗೆ ನೀಡುತ್ತಿರುವ ಉತ್ತೇಜನ ಪ್ರೋತ್ಸಾಹ ಹೀಗೆ ಮುಂದುವರೆಯಲಿ. ನಾಡಿನ ಹೆಮ್ಮೆಯ ಕಲೆ ಯಕ್ಷಗಾನ ಚಿರಸ್ಥಾಯಿಯಾಗಲಿ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಹೇಳಿದರು.
ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣ ಮಠ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್, ಕರ್ನಾಟಕ ಜಾನಪದ ಪರಿಷತ್ ಹಾಗೂ ದ್ಯುತಿಪರ್ವ ಯಕ್ಷ ಟ್ರಸ್ಟ್ ಕುಂದಾಪುರ ಸಂಯುಕ್ತ ಸಹಭಾಗಿತ್ವದಲ್ಲಿ ಹಟ್ಟಿಯಂಗಡಿ ಶ್ರೀ ಸಿದ್ಧಿ ವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ ವತಿಯಿಂದ ಹಮ್ಮಿಕೊಂಡ 5 ದಿನಗಳ ಯಕ್ಷಗಾನ ಪ್ರದರ್ಶನ ಯಕ್ಷ ಪಂಚಮಿ- ಸಮಾರೋಪದಲ್ಲಿ ಮಾತನಾಡಿದರು.
ಯಕ್ಷಗಾನ ಕಲೆಯ ಉಳಿವು ಬೆಳವಣಿಗೆಯ ದೃಷ್ಟಿಯಿಂದ ಸಂಘ ಸಂಸ್ಥೆಗಳ ಪ್ರೋತ್ಸಾಹ ಅತ್ಯಗತ್ಯ. ಅದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ತಲ್ಲೂರು ಶಿವರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಯಕ್ಷಗಾನ ಕಲೆಗೆ ಸಿಗುತ್ತಿರುವ ವಿಶೇಷ ಪ್ರೋತ್ಸಾಹ ಲಭಿಸುತ್ತಿದೆ. ಅವರ ಕಲಾಸೇವೆ ಇದೇ ರೀತಿ ಮುಂದುವರಿಯಲಿ ಎಂದು ಹಾರೈಸಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಯಕ್ಷಗಾನಕ್ಕೆ ಇಂದು ಶಿಕ್ಷಕರು, ಇಂಜೀನಿಯರ್ಗಳು, ವೈದ್ಯರು ಸೇರಿದಂತೆ ಸುಶಿಕ್ಷಿತ ಬುದ್ದಿ ಜೀವಿಗಳು ಬರುತ್ತಿದ್ದಾರೆ. ಕಲೆಯ ಬೆಳವಣಿಗೆಯ ದೃಷ್ಟಿಯಿಂದ ಇದು ಸ್ವಾಗತಾರ್ಹ. ಆದರೂ ಯಕ್ಷಗಾನವನ್ನು ಸಂಪ್ರದಾಯ ಚೌಕಟ್ಟಿನೊಳಗೆ ಬೆಳೆಸಿದ ಹಿರಿಯ ಕಲಾವಿದರನ್ನು ಗುರುತಿಸಿ, ಸನ್ಮಾನಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಉದ್ಯಮಿ ಗೋಪಾಲ ಸಿ. ಬಂಗೇರ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಅಜ್ರಿ ಗೋಪಾಲ ಗಾಣಿಗ ಅವರಿಗೆ ತಲ್ಲೂರ್ಸ್ ಪ್ಯಾಮಿಲಿ ಟ್ರಸ್ಟ್ ಯಕ್ಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಠದ ದಿವಾನರಾದ ನಾಗರಾಜ ಆಚಾರ್ಯ, ರಂಗಭೂಮಿ ಉಡುಪಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದಿಪ್ಚಂದ್ರ ಕುತ್ಪಾಡಿ, ಉದ್ಯಮಿ ರವೀಂದ್ರ ಶೆಟ್ಟಿ, ನಿವೃತ್ತ ರೈಲ್ವೆ ಉದ್ಯೋಗಿ ರಘುನಾಥ ನಾಯಕ್ ಶುಭ ಹಾರೈಸಿದರು. ಹಟ್ಟಿಯಂಗಡಿ ಶ್ರೀ ಸಿದ್ಧಿ ವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿಯ ಪ್ರವರ್ತಕ ರಂಜನ್ ಕುಮಾರ್ ಶೆಟ್ಟಿ ವಕ್ವಾಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸಂಗೀತ ವಿದ್ವಾನ್ ಪಾಡಿಗಾರ್ ಲಕ್ಷ್ಮೀ ನಾರಾಯಣ ಉಪಾಧ್ಯ, ಪುತ್ತಿಗೆ ಮಠದ ರಮೇಶ್ ಭಟ್ ಉಪಸ್ಥಿತರಿದ್ದರು.