ಮಂಗಳೂರು : ಯಕ್ಷಧ್ರುವ ಸೌಹಾರ್ದ ಕೋ- ಅಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ ಸೊಸೈಟಿಯ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಸಂಘವು ವರ್ಷಾಂತ್ಯಕ್ಕೆ ಎ ದರ್ಜೆಯ ಸದಸ್ಯತ್ವ ಪಾಲು ಬಂಡವಾಳ 46.30 ಲಕ್ಷ ರೂ., ಠೇವಣಿ ಸಂಗ್ರಹಣೆ 4.64 ಕೋಟಿ ರೂ.ಹಾಗೂ 4.56 ಕೋಟಿ ರೂ.ವಿವಿಧ ರೀತಿಯ ಸಾಲ ವಿತರಿಸಲಾಗಿದ್ದು, 1.17 ಲಕ್ಷ ರೂ.ನಿವ್ವಳ ಲಾಭವನ್ನು ಗಳಿಸಿದೆ. ಸಂಘದ ಸದಸ್ಯರ ಠೇವಣಾತಿಗಳಿಗೆ ಅತ್ಯಾಕರ್ಷಕ ಬಡ್ಡಿಯನ್ನು ನೀಡುವುದರೊಂದಿಗೆ ಹಿರಿಯ ನಾಗರಿಕರಿಗೆ ವಿಶೇಷ ರೀತಿಯ ಬಡ್ಡಿಯನ್ನು ನೀಡಲಾಗುತ್ತಿದೆ. 2024-25ನೇ ಸಾಲಿಗೆ ಅಂದಾಜು 10 ಕೋಟಿ ರೂ.ಠೇವಣಿ ಸಂಗ್ರಹಣೆ ಹಾಗೂ 8.50 ಕೋಟಿ ರೂ. ಸಾಲ ವಿತರಣೆಯ ಗುರಿ ಹೊಂದಲಾಗಿದೆ. ಮಂಗಳೂರು ನಗರದ ಪಂಪ್‌ವೆಲ್ ಪ್ರದೇಶದಲ್ಲಿ ನೂತನ ಶಾಖೆ ಶೀಘ್ರದಲ್ಲೇ ಕಾರ್ಯಾರಂಭ ಆಗಲಿದೆ ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಹಾಗೂ ಸೊಸೈಟಿಯ ನಿರ್ದೇಶಕ ಐಕಳ ಹರೀಶ್ ಶೆಟ್ಟಿ ಮಾತನಾಡಿ ಸಹಕಾರ ಕ್ಷೇತ್ರದಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರು ಸಮಾಜಕ್ಕೆ ಸಹಕರಿಸುವುದು ಶ್ಲಾಘನೀಯ ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ತನುಜಾ.ಜೆ. ಅಡ್ಯಂತಾಯ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕರಾದ ನಿಟ್ಟೆಗುತ್ತು ರವಿರಾಜ ಶೆಟ್ಟಿ, ಸುಧಾಕರ.ಎಸ್.ಪೂಂಜ, ಸಂತೋಷ್ ಕುಮಾರ್ ಶೆಟ್ಟಿ, ಲೋಕೇಶ ಪೂಜಾರಿ ಭರಣಿ, ರವಿಚಂದ್ರ ಶೆಟ್ಟಿ, ಆರತಿ ಆಳ್ವ, ನಿರ್ಮಿತಾ ಶೆಟ್ಟಿ ಉಪಸ್ಥಿತರಿದ್ದರು. ನಿರ್ದೇಶಕರಾದ ಸವಣೂರು ಸೀತಾರಾಮ ರೈ ಸ್ವಾಗತಿಸಿ, ಗಿರೀಶ್. ಎಂ. ಶೆಟ್ಟಿ ಕಟೀಲು ವಂದಿಸಿದರು. ಉಪಾಧ್ಯಕ್ಷ ಅಡ್ಯಾರ್ ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.