ಜಿಲ್ಲೆ

ಯಕ್ಸಂಬಾ ಬಂದ್ ಯಶಸ್ವಿ

ಪ್ರಶಾಂತ ಹೂಗಾರ

ಚಿಕ್ಕೋಡಿ ಗ್ರಾಮೀಣ: ರೈತರ ಜಮೀನುಗಳ ಮೇಲೆ ವಕ್ಫ್ ಆಸ್ತಿ ಎಂದು ನಮೂದಾಗಿರುವುದನ್ನು ರದ್ದುಪಡಿಸುವಂತೆ ಆಗ್ರಹಿಸಿ ತಾಲೂಕಿನ ಯಕ್ಸಂಬಾ ಪಟ್ಟಣದ ರೈತರು ಮಂಗಳವಾರ ಕರೆ ನೀಡಿದ್ದ ಯಕ್ಸಂಬಾ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಬಂದ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು, ಔಷಧ ಮಳಿಗೆ, ಆಸ್ಪತ್ರೆ ಹೊರತುಪಡಿಸಿ ಪಟ್ಟಣದ ಎಲ್ಲ ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ಪಟ್ಟಣದ ವ್ಯಾಪಾರಸ್ಥರು ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದರು.

ಬೆಳಗ್ಗೆಯಿಂದ ಸಂಜೆ 5ರ ವರೆಗೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸಂಜೆ ನಿಪ್ಪಾಣಿ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ಮೆರವಣಿಗೆ ನಡೆಸಿದರು. ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಿಂದ ಪಪಂವರೆಗೆ ಪ್ರತಿಭಟನೆ ಮೆರವಣಿಗೆ ನಡೆಯಿತು.

ಬಳಿಕ ಪಪಂ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರಾಣಲಿಂಗ ಸ್ವಾಮೀಜಿ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತರ ಜಮೀನಿನ ಮೇಲೆ ವಕ್ಫ್ ಆಸ್ತಿ ಎಂದು ನಮೂದಿಸಿರುವುದು ಅನ್ಯಾಯಕ್ಕೆ ಸಾಕ್ಷಿಯಾಗಿದ್ದು ರೈತರು, ದೇಶದ ಜನತೆ ಇದರ ವಿರುದ್ಧ ಬೀದಿಗಿಳಿಯುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು. ಬಸವರಾಜ ಕಲ್ಯಾಣಿ, ಮಹೇಶ ಬಾಕಳೆ, ವಿಜಯ ಭಾವೆ ಇತರರು ಇದ್ದರು. 141414