ಬೆಂಗಳೂರು: ( yugadhyaksh krishnaraja wadiyar ) ಮೈಸೂರು ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ದೇವಿ ಅವರ ಎರಡನೇ ಪುತ್ರನಿಗೆ ನಾಮಕರಣ ಮಾಡಲಾಗಿದೆ. ತಾವು ಮಗುವಿಗೆ ಏನು ಹೆಸರಿಟ್ಟಿದ್ದೇವೆ ಎಂಬುದನ್ನ ಯದುವೀರ್ ಒಡೆಯರ್ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ತಿಳಿಸಿದ್ದಾರೆ. ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಎಂಬ ಹೆಸರಿಗೆ ವಿಭಿನ್ನವಾದ ಅರ್ಥವೂ ಸಹ ಇದೆ.
ಗುರು ಹಿರಿಯರು ಸೂಚಿಸಿದಂತೆ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ಅವರು ತಮ್ಮ ಎರಡನೇ ಪುತ್ರನಿಗೆ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಎಂದು ನಾಮಕರಣ ಮಾಡಿದ್ದಾರೆ.
ಸಂಸದ ಯದುವೀರ್ ಒಡೆಯರ್ ಅವರ 2ನೇ ಮಗನ ನಾಮಕರಣ ಸಮಾರಂಭ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ಸಮ್ಮುಖದಲ್ಲಿ ಅರಮನೆಯ ಕನ್ನಡಿ ತೊಟ್ಟಿಯಲ್ಲಿ ನಡೆಯಿತು. ಅರಮನೆ ಪುರೋಹಿತರು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನ ನೆರವೇರಿಸಿದರು.
ತಮ್ಮ ಪುತ್ರನಿಗೆ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಎಂದು ನಾಮಕರಣ ಮಾಡಿದ್ದಾಗಿ ತಿಳಿಸಿದ್ದಾರೆ. ʼಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಅನುಗ್ರಹದಿಂದ ನಮ್ಮ ಎರಡನೇ ಮಗನಿಗೆ ಅರಮನೆಯ ಸಂಪ್ರದಾಯದಂತೆ ನಮ್ಮ ತಾಯಿಯವರಾದ ಡಾ. ಪ್ರಮೋದಾ ದೇವಿ ಒಡೆಯರವರ ಆಧ್ವರ್ಯದಲ್ಲಿ ʼ'ಚಿರಂಜೀವಿ ಶ್ರೀ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ʼ ಎಂದು ನಾಮಕರಣ ಮಾಡಲಾಗಿದೆ. ಈ ಸುಸಂದರ್ಭದಲ್ಲಿ ಪ್ರತಿಯೊಬ್ಬ ಹಿತೈಷಿಗಳಿಗೂ ನಮ್ಮ ಹೃತ್ಪೂರ್ವಕವಾದ ವಂದನೆಗಳನ್ನು ತಿಳಿಸುತ್ತೇವೆ ಎಂದು ಯದುವೀರ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಮಗುವಿನ ಮುದ್ದಾದ ಫೋಟೋಗಳನ್ನ ಹಂಚಿಕೊಂಡಿದ್ದಾರೆ.
ಮಗು ಯುಗಾಧ್ಯಕ್ಷ ತೊಟ್ಟಿಲಲ್ಲಿ ನಗುತ್ತಿರುವ, ರಾಜಮಾತೆ ಡಾ. ಪ್ರಮೋದಾ ದೇವಿ ಅವರು ಮಗುವಿಗೆ ಹರಸುತ್ತಿರುವ, ಹಿರಿಯ ಪುತ್ರ ಆದ್ಯವೀರ್ ತನ್ನ ತಮ್ಮನನ್ನ ಆಟವಾಡಿಸುತ್ತಿರುವ ಫೋಟೋಗಳನ್ನ ಯದುವೀರ್ ಒಡೆಯರ್ ಅವರು ಶೇರ್ ಮಾಡಿಕೊಂಡಿದ್ದಾರೆ.
ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ :
ಯದುವೀರ್ ಎರಡನೇ ಪುತ್ರನಿಗೆ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಎಂದು ಹೆಸರಿಡಲಾಗಿದೆ. ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಎಂಬ ಹೆಸರಿಗೆ ವಿಭಿನ್ನವಾದ ಅರ್ಥವೂ ಸಹ ಇದೆ. ಯುಗ ಎಂದರೆ ಯುಗದ ಅಧಿಪತಿ, ಅಧ್ಯಕ್ಷ ಎಂದರೆ ಗುಂಪಿನ ನಾಯಕ, ಸಮರ್ಥ, ತಜ್ಞ, ಕೌಶಲ್ಯ ಅಥವಾ ಪ್ರಾಮಾಣಿಕ ಎಂಬ ಅರ್ಥ ಬರುತ್ತದೆ. ಕೃಷ್ಣ ಎಂದರೆ ಸರ್ವ ಆಕರ್ಷಕ ಎಂಬ ಅರ್ಥವನ್ನು ನೀಡುತ್ತದೆ.
ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ವಿವಾಹ ರಾಜಸ್ಥಾನದ ದುಂಗರ್‌ಪುರ್ ಯುವರಾಣಿ ತ್ರಿಷಿಕಾ ಅವರೊಂದಿಗೆ 2016 ಜೂನ್ 27ರಂದು ನಡೆದಿತ್ತು. ಇದೀಗ ದಂಪತಿ ಇಬ್ಬರು ಪುತ್ರರ ಪೋಷಕರಾಗಿದ್ದಾರೆ. 2017ರ ಡಿಸೆಂಬರ್‌ನಲ್ಲಿ ತ್ರಿಷಿಕಾ ಮೊದಲ ಮಗು ಆದ್ಯವೀರ್‌ಗೆ ಜನ್ಮ ನೀಡಿದ್ದಾರೆ. 2024ರ ಅಕ್ಟೋಬರ್ 11ರಂದು ಎರಡನೇ ಮಗನ ಜನನವಾಗಿತ್ತು. ಅಂದಹಾಗೇ, ಎರಡನೇ ಮಗುವಿನ ನಾಮಕರಣ ಶಾಸ್ತ್ರ ಫೆ.19ರಂದೇ ನಡೆದಿದೆ.