ಸದೇಶ್ ಕಾರ್ಮಾಡ್ ಮೈಸೂರು
ತೀವ್ರ ಕುತೂಹಲ ಕೆರಳಿಸಿದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಿದ್ದು, ಕ್ಷೇತ್ರವನ್ನು ಸತತ ಎರಡು ಬಾರಿ ಪ್ರತಿನಿಧಿಸಿದ ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ಕೈತಪ್ಪಿದೆ.
ಕಳೆದ ಕೆಲವು ದಿನಗಳಿಂದ ಯದುವೀರ್ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂಬ ಚರ್ಚೆಗಳು ಪ್ರಾರಂಭವಾಯಿತು. ಈ ಚರ್ಚೆಯ ನಡುವೆ ಪ್ರತಾಪ್ ಸಿಂಹ ಮಗದೊಮ್ಮೆ ಟಿಕೆಟ್ ಪಡೆಯುವ ಪ್ರಯತ್ನ ನಡೆಸಿದ್ದರು. 10 ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್ ಅನ್ನು ಸಿದ್ಧಪಡಿಸಿದ್ದ ಪ್ರತಾಪ್ ಸಿಂಹ ಪ್ರಧಾನಿ ನರೇಂದ್ರ ಮೋದಿಯಿಂದ ಸಾಮಾನ್ಯ ಕಾರ್ಯಕರ್ತರವರೆಗೆ ರಿಪೋರ್ಟ್ ಕಾರ್ಡ್ ನೀಡಿ ಚುನಾವಣೆಗೆ ತಯಾರಿ ಮಾಡಿಕೊಂಡಿದ್ದರು. ಆದರೆ, ಪ್ರತಾಪ್ ಸಿಂಹ ವಿರುದ್ಧ ಜಿಲ್ಲೆಯ ಬಿಜೆಪಿ ಮುಖಂಡರು ಹೈಕಮಾಂಡ್‌ಗೆ ಸಲ್ಲಿಸಿದ ‘ರಿಪೋಟ್ ಕಾರ್ಡ್’ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪಲು ಪ್ರಮುಖ ಕಾರಣ ಎನ್ನಲಾಗಿದೆ.
ಈ ಎಲ್ಲ ವಿರೋಧದ ನಡುವೆಯೂ ಜನಪ್ರಿಯತೆ ಆಧಾರದ ಮೇಲೆ ಈ ಬಾರಿಯೂ ಟಿಕೆಟ್ ಪಡೆಯುತ್ತೇನೆ ಎಂಬ ವಿಶ್ವಾಸದಲ್ಲಿ ಪ್ರತಾಪ್ ಸಿಂಹ ಇದ್ದರು. ಆದರೆ, ಪ್ರತಾಪ್ ಸಿಂಹಗೆ ಶಾಕ್ ನೀಡಿದ ಪಕ್ಷದ ಹೈಕಮಾಂಡ್ ಹೊಸ ಮುಖಕ್ಕೆ ಮಣೆ ಹಾಕಿದೆ. ಇದು ಪ್ರತಾಪ್ ಸಿಂಹ ಬೆಂಬಲಿಗರಲ್ಲಿ ತೀವ್ರ ಬೇಸರ ಮೂಡಿಸಿದರೂ ಬಿಜೆಪಿಯ ಬಹುತೇಕ ನಾಯಕರು ಮೊಗದಲ್ಲಿ ಸಂತಸ ಅರಳುವಂತೆ ಮಾಡಿರುವುದು ಸುಳ್ಳಲ್ಲ.
ಪ್ರತಾಪ್ ಸಿಂಹ ಅವರು ತಮ್ಮ ಹರಿತವಾದ ಮಾತುಗಳ ಮೂಲಕ ಸಾಕಷ್ಟು ಜನರನ್ನು ಎದುರು ಹಾಕಿಕೊಂಡರು. ಹೀಗಾಗಿ ಪಕ್ಷದಲ್ಲೇ ಅವರಿಗೆ ದೊಡ್ಡ ಮಟ್ಟದಲ್ಲಿ ಶತ್ರುಗಳು ಸೃಷ್ಟಿಯಾದರು. ಪ್ರತಾಪ್ ಸಿಂಹ ಪಕ್ಷದ ಶಾಸಕರು, ಜನಪ್ರತಿನಿಧಿಗಳು ಹಾಗೂ ಪಕ್ಷದ ಹಿರಿಯ ಮುಖಂಡರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಅಸಮಾಧಾನವನ್ನು ಹಲವಾರು ಬಿಜೆಪಿ ನಾಯಕರು ಪಕ್ಷದ ವರಿಷ್ಠರ ಮುಂದೆ ತೋಡಿಕೊಂಡಿದ್ದರು. ಅಲ್ಲದೆ, ಬಿಜೆಪಿಗಿಂತ ಜೆಡಿಎಸ್ ಮುಖಂಡರೊಂದಿಗೆ ಅವರು ಹೆಚ್ಚಿನ ಆತ್ಮೀಯ ಒಡನಾಟ ಹೊಂದಿದ್ದರು.
ಕಳೆದ ಕೆಲವು ವರ್ಷಗಳಿಂದ ನಗರದಲ್ಲಿ ಮಹಿಷಾ ದಸರಾ ಪ್ರಾರಂಭಗೊಂಡಿತ್ತು. ಚಾಮುಂಡಿಬೆಟ್ಟದಲ್ಲಿ ಮಹಿಷಾ ದಸರಾ ನಡೆಯದಂತೆ ಮಾಡುವಲ್ಲಿ ಪ್ರತಾಪ್ ಸಿಂಹ ಯಶಸ್ವಿಯಾದರು. ಇದರಿಂದ ಅವರು ದಲಿತರನ್ನು ಎದುರು ಹಾಕಿಕೊಳ್ಳುವ ಪರಿಸ್ಥಿತಿ ನಿರ್ಮಾಣ ವಾಯಿತು. ಅಯೋಧ್ಯೆಯ ರಾಮಲಲ್ಲ ಮೂರ್ತಿ ತಯಾರಿಕೆಗೆ ತಾಲೂಕಿನ ಹಾರೋಹಳ್ಳಿ-ಗುಜ್ಜೇಗೌಡನಪುರ ಗ್ರಾಮದಲ್ಲಿ ದೊರೆತ ಶಿಲೆಯನ್ನು ಬಳಕೆ ಮಾಡಲಾಯಿತು. ಶಿಲೆ ದೊರೆತ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ ಪಾಲ್ಗೊಂಡಿದ್ದರು. ಆ ಸಂದರ್ಭ ಪ್ರತಾಪ್ ಸಿಂಹ ದಲಿತ ವಿರೋಧಿ ಎಂದು ಘೋಷಣೆ ಕೂಗಿ ಸ್ಥಳೀಯರು ಪ್ರತಿಭಟಿಸಿ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಸ್ಥಳದಿಂದ ನಿರ್ಗಮಿಸುವ ಪರಿಸ್ಥಿತಿ ನಿರ್ಮಾಣವಾಯಿತು.
ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಳೆದ 10 ವರ್ಷಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಈ ಅಭಿವೃದ್ಧಿ ಕಾರ್ಯಗ ಳನ್ನು ಪ್ರತಾಪ್ ಸಿಂಹ ಮುಂದೆ ನಿಂತು ಮಾಡಿಸಿದರು. ಆದರೆ, ಎಲ್ಲ ಕಡೆಗಳಲ್ಲೂ ನಾನು ಮಾಡಿಸಿದೆ ಎಂದು ಪದೇ ಪದೆ ಹೇಳಿಕೊಳ್ಳುತ್ತಿದ್ದರು. ಈ ‘ನಾನು’ ಎಂಬ ಪದವೇ ಅವರಿಗೆ ಮುಳುವಾಯಿತೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಅಲ್ಲದೆ ಅವರ ವೈಯಕ್ತಿಕ ಬದುಕಿನ ಕುರಿತು ಸಾಕಷ್ಟು ಟೀಕೆ ಟಿಪ್ಪಣಿಗಳು ವ್ಯಕ್ತವಾಯಿತು. ಈ ಎಲ್ಲ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ಹೊಸ ಮುಖವನ್ನು ಕಣಕ್ಕಿಳಿಸುವ ತೀರ್ಮಾನಕ್ಕೆ ಕೈಗೊಂಡರು.
ಮೈಸೂರು ರಾಜಮನೆತನಕ್ಕೆ ರಾಜಕಾರಣ ಹೊಸತೇನು ಅಲ್ಲ. ಜಯಚಾಮರಾಜ ಒಡೆಯರ್ ಅವರು 1940ರಿಂದ 1950ರವರೆಗೆ ಮೈಸೂರು ಸಂಸ್ಥಾನದ ರಾಜರಾಗಿ ರಾಜ್ಯಭಾರ ನಡೆಸಿದರು. ಆ ನಂತರ 1950ರಲ್ಲಿ ಭಾರತವು ಗಣರಾಜ್ಯವಾದಾಗ ಮೈಸೂರು ರಾಜ್ಯದ ಪ್ರಮುಖರಾಗಿ 1956ರವರೆಗೆ ಸೇವೆ ಸಲ್ಲಿಸಿದರು. ಮೈಸೂರು ರಾಜ್ಯ (ಕರ್ನಾಟಕ) ರಚನೆಯಾದ ನಂತರ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದರು. ಇವರ ಪುತ್ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ 6 ಬಾರಿ ಸ್ಪರ್ಧಿಸಿ 4 ಬಾರಿ ಸಂಸದರಾಗಿ ಗೆಲವು ಸಾಧಿಸಿದ್ದರು. ಇದೀಗ ಯದುವೀರ್ ಅವರು ಚುನಾವಣಾ ರಾಜಕೀಯಕ್ಕೆ ಧುಮುಕ್ಕಿದ್ದಾರೆ.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು ಸಂಸ್ಥಾನವನ್ನು ಆಳ್ವಿಕೆ ನಡೆಸಿದ ಯದುವಂಶದ 27ನೇ ಉತ್ತರಾಧಿಕಾರಿ ಯಾಗಿದ್ದಾರೆ. ಮೈಸೂರು ರಾಜಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ಪ್ರಮೋದಾದೇವಿ ಒಡೆಯರ್ ದಂಪತಿಗೆ ಮಕ್ಕಳಿಲ್ಲದ ಹಿನ್ನೆಲೆಯಲ್ಲಿ 23 ಫೆಬ್ರವರಿ 2015 ರಂದು ಯದುವೀರ್ ಅವರನ್ನು ದತ್ತುಪುತ್ರನಾಗಿ ಸ್ವೀಕಾರ ಮಾಡಲಾಯಿತು.
ಯದುವೀರ್ ಅವರ ಮೊದಲ ಹೆಸರು ‘ಯದುವೀರ್ ಗೋಪಾಲರಾಜೇ ಅರಸ್’. ದತ್ತು ಸ್ವೀಕಾರ ಸಮಾರಂಭದ ನಂತರ ಅವರ ಹೆಸರನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಂದು ಬದಲಾಯಿಸಲಾಯಿತು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನರಾಗಿ 14 ತಿಂಗಳು ಕಳೆದ ನಂತರ ಯದುವೀರ್ ಅವರನ್ನು ಪ್ರಮೋದಾದೇವಿ ಒಡೆಯರ್ ದತ್ತು ಸ್ವೀಕರಿಸಿದರು.
ಯದುವೀರ್ ಅವರ ತಂದೆ ಬೆಟ್ಟದಕೋಟೆ ಅರಸು ಪರಂಪರೆಯವರಾಗಿದ್ದು, ಜಯಚಾಮರಾಜ ಒಡೆಯರ್ ಅವರ ಮರಿಮಗ ಆಗಿದ್ದಾರೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹಿರಿಯ ಸೋದರಿ ಗಾಯತ್ರಿ ದೇವಿ ಮತ್ತು ರಾಮಚಂದ್ರ ಅರಸ್ ಅವರ ಪುತ್ರಿಯಾದ ತ್ರಿಪುರಸುಂದರೀದೇವಿ ಮತ್ತು ಸ್ವರೂಪ್ ಗೋಪಾಲ ರಾಜೇ ಅರಸ್ ಅವರ ಪುತ್ರರಾಗಿದ್ದಾರೆ. ಬೆಂಗಳೂರಿನ ವಿದ್ಯಾಸಾಗರ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು. ನಂತರ ಬೆಂಗಳೂರಿನ ಕೆನೆಡಿಯನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಐಬಿ ಡಿಪ್ಲೊಮಾ ಕೋರ್ಸ್ ಪೂರೈಸಿ, ಅಮೆರಿಕದ ಮ್ಯಾಸಾಚುಸೆಟ್ಸ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದರು.