ಜಿಲ್ಲೆ

ಯಡೂರು ಕೆರೆಗೆ ಜೀವಕಳೆ

ಸುನಿಲ್ ಪೊನ್ನೇಟಿ

ಮಡಿಕೇರಿ:

’ಕೆರೆ ಕಟ್ಟೆಗಳು ತುಂಬಿರುವ ಗ್ರಾಮಗಳು ಸಮೃದ್ಧವಾಗಿರುತ್ತದೆ,’ ಎನ್ನುವುದು ರೂಢಿಯಲ್ಲಿರುವ ಮಾತು. ಸೋಮವಾರಪೇಟೆ ತಾಲೂಕು ಹಾನಗಲ್ಲು ಗ್ರಾ.ಪಂ. ವ್ಯಾಪ್ತಿಯ ಯಡೂರು ಕೆರೆ ಬಹುತೇಕ ಬತ್ತಿಹೋಗಿ ಮಧ್ಯದಲ್ಲಿ ಮಾತ್ರ ಬಾವಿಯಂತಹ ಗುಂಡಿಯಲ್ಲಿ ಸ್ವಲ್ಪ ನೀರು ಕಂಡುಬರುತ್ತಿತ್ತು. ಉಳಿದೆಲ್ಲ ಪ್ರದೇಶ ಬಯಲಿನಂತಾಗಿ ಮಕ್ಕಳ ಆಟದ ಮೈದಾನವಾಗಿ ಬಳಕೆ ಆಗುತ್ತಿತ್ತು. ಆದರೆ ೨೦೧೮ರಿಂದ ಈಚೆಗೆ ಈ ಐತಿಹಾಸಿಕ ಕೆರೆ ನಳನಳಿಸುತ್ತಿದೆ. ಮಳೆಗಾಲದಲ್ಲಂತೂ ಯಡೂರು ಕೆರೆಯನ್ನು ನೋಡುವುದೇ ಒಂದು ಸೊಗಸು.

ಸೋಮವಾರಪೇಟೆಯಿಂದ ಸುಪ್ರಸಿದ್ಧ ಪ್ರವಾಸಿತಾಣ ಮಲ್ಲಳ್ಳಿ ಜಲಪಾತಕ್ಕೆ ತೆರಳುವ ವೇಳೆ ಬಿಟಿಸಿಜಿ ಕಾಲೇಜು ದಾಟಿದ ಕೂಡಲೇ ಎಡಬದಿಯಲ್ಲಿ ಒಂದು ಸುಂದರ ಕೆರೆ ಕಾಣಲು ಸಿಗುತ್ತದೆ. ತಾವರೆ ಗಿಡಗಳ ಅಗಲ ಎಲೆಗಳ ಮಧ್ಯದಿಂದ ಛಂಗನೇ ಹಾರುವ ಮೀನುಗಳು ಗಮನ ಸೆಳೆಯುತ್ತದೆ. ಸುತ್ತಲಿನ ಕಾಫಿ ತೋಟದ ಬೋಳು ಮರಗಳ ಮೇಲೆ ನೀರು ಹಕ್ಕಿಗಳು ತಮ್ಮ ಬೇಟೆಗಾಗಿ ತದೇಕ ಚಿತ್ತದಿಂದ ಧ್ಯಾನಾಸಕ್ತ ರೀತಿಯಲ್ಲಿ ಕುಳಿತಿರುವ ದೃಶ್ಯವೂ ಕಂಡುಬರುತ್ತದೆ. ಇದೆಲ್ಲಾ ಯಡೂರು ಕೆರೆಯ ೨೦೧೮ರ ಈಚಿನ ಬೆಳವಣಿಗೆಗಳು.

ಸಬ್ಬಮ್ಮ ದೇವರ ಕೆರೆ ಎಂದೇ ಸ್ಥಳೀಯರು ನಂಬಿರುವ ಈ ಕೆರೆಯಲ್ಲಿ ಈಗಿನ ತಲೆಮಾರು ನೀರು ಕಂಡಿದ್ದೇ ೨೦೧೮ರಿಂದ ಈಚೆಗೆ. ಈ ಮಾರ್ಗದಲ್ಲಿ ಓಡಾಡುವ ಬಹುತೇಕರಿಗೆ ಇಲ್ಲೊಂದು ಕೆರೆ ಇದೆ ಎಂದು ಕೂಡ ಗೊತ್ತಿರಲಿಲ್ಲ. ಸ್ಥಳೀಯರು ಮಾತ್ರ ದೇವರ ಕೆರೆ ಎಂದು ಕರೆಯುತ್ತಿದ್ದರು. ಸುಮಾರು ೨ ಎಕರೆ ಪ್ರದೇಶದ ಈ ಕೆರೆ ಮಕ್ಕಳಿಗೆ ಕ್ರಿಕೆಟ್ ಆಟದ ಮೈದಾನವಾಗಿ ಬಳಕೆ ಆಗುತ್ತಿತ್ತು. ಗ್ರಾಮವನ್ನು ಸಮೃದ್ಧವಾಗಿ ಇಡಬೇಕಾಗಿದ್ದ ಕೆರೆ ಬತ್ತಿಹೋಗಿ ತನ್ನ ವರ್ಚಸ್ಸನ್ನೇ ಕಳೆದುಕೊಂಡಿತ್ತು.

ಗ್ರಾಮದ ಕೆಲವು ಹಿರಿಯರು ಈ ಕೆರೆಗೆ ಪುನಶ್ಚೇತನ ಕೊಡುವ ಸಂಕಲ್ಪ ಮಾಡಿ ಪ್ರಯತ್ನ ನಡೆಸಿದ್ದರು. ಅಧಿಕಾರಿಗಳು, ಜನಪ್ರತಿನಿಧಿಗಳು, ಸರ್ಕಾರದ ಮಟ್ಟದಲ್ಲಿ ಮನವಿ ಸಲ್ಲಿಸಿ, ಹಲವು ರೀತಿಯಲ್ಲಿ ಒತ್ತಡ ಹೇರಿದರೂ ಫಲ ಕೊಡದಿದ್ದಾಗ ಪ್ರಯತ್ನ ಕೈಬಿಟ್ಟು ಸುಮ್ಮನಾಗಿದ್ದರು. ಆಗ ಈ ಗ್ರಾಮಕ್ಕೆ ಆಪತ್ಬಾಂಧವನಂತೆ ಬಂದವರು ಹರಪಳ್ಳಿ ರವೀಂದ್ರ. ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿರುವ ರವೀಂದ್ರ ತಮ್ಮ ಊರು ಹರಪಳ್ಳಿಗೆ ತೆರಳಬೇಕಾದರೆ ಈ ಕೆರೆ ದಂಡೆ ಮೇಲಿನ ರಸ್ತೆಯಲ್ಲಿ ಹೋಗಬೇಕು. ಪ್ರತಿ ಬಾರಿ ಇಲ್ಲಿ ಹೋಗುವಾಗಲೂ ಕೆರೆಗೆ ಮತ್ತೆ ಜೀವ ಕೊಡಬೇಕು ಎನ್ನುವ ತುಡಿತ ಇವರನ್ನು ಕಾಡುತ್ತಿತ್ತು.

ಐತಿಹಾಸಿಕ ಹಿನ್ನೆಲೆಯ ಯಡೂರು ಕೆರೆ ಬಗ್ಗೆ ರವೀಂದ್ರ ಅವರು ಕೇಳಿ ತಿಳಿದಿದ್ದರು. ಒಂದೊಮ್ಮೆ ಇಲ್ಲಿ ಸಮೃದ್ಧ ನೀರು ಇದ್ದ ಬಗ್ಗೆ ಸ್ವತಃ ಇವರ ಪೋಷಕರೇ ಹೇಳಿಕೊಳ್ಳುತ್ತಿದ್ದರು. ಸೋಮವಾರಪೇಟೆ ಸಂತೆಗೆ ಬರುವಾಗ ಮತ್ತು ಹೋಗುವಾಗ ದಣಿವಾರಿಸಿಕೊಳ್ಳಲು ಹಿಂದೆಲ್ಲಾ ಇದೇ ಕೆರೆ ನೀರನ್ನು ಬಳಸಿಕೊಳ್ಳಲಾಗುತ್ತಿತ್ತು ಎನ್ನುವುದನ್ನು ತಿಳಿದುಕೊಂಡಿದ್ದ ರವೀಂದ್ರ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಕೆರೆ ಹೂಳೆತ್ತಿಸುವ ಇಂಗಿತವನ್ನು ಗ್ರಾಮಸ್ಥರಲ್ಲಿ ಹೇಳಿಕೊಂಡರು. ಕೆರೆ ಪುನಶ್ಚೇತನಕ್ಕೆ ಕಾಯುತ್ತಿದ್ದ ಸ್ಥಳೀಯರು ಪೂರಕವಾಗಿ ಸ್ಪಂದಿಸಿದ ಪರಿಣಾಮ ೨೦೧೮ರಲ್ಲಿ ಯಡೂರು ಕೆರೆ ಜೀರ್ಣೋದ್ಧಾರಗೊಂಡು ಸಮೃದ್ಧ ಜಲ ಕಾಣುವಂತಾಯಿತು.

ಯಡೂರು ಕೆರೆ ಪುನಶ್ಚೇತನಗೊಂಡಿರುವುದರಿಂದ ಈಗ ಊರಿಗೆ ವಿಶೇಷ ಕಳೆ ಬಂದಿದೆ. ಸುತ್ತಮುತ್ತಲ ಕಲ್ಕಂದೂರು, ಹೊಸಬೀಡು, ತೋಳೂರು ಶೆಟ್ಟಳ್ಳಿ, ಕಂಬಳ್ಳಿ ಮತ್ತಿತರ ಗ್ರಾಮಗ ನೂರಾರು ಎಕರೆ ಜಮೀನಿಗೆ ಈ ಕೆರೆಯಿಂದಲೇ ನೀರು ಹರಿಯುತ್ತಿದೆ. ಪಕ್ಕದ ಸಕಲೇಶಪುರ ತಾಲೂಕಿನ ತನಕವೂ ಯಡೂರು ಕೆರೆ ನೀರು ತಲುಪುತ್ತದೆ ಎನ್ನುತ್ತಾರೆ ಗ್ರಾಮಸ್ಥರು. ಇದೀಗ ಈ ಕೆರೆಯಲ್ಲಿ ಮೀನು ಕೂಡ ಬಿಡಲಾಗಿದೆ. ಮೀನುಗಾರಿಕೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದ್ದು ಗ್ರಾಮಕ್ಕೆ ಈ ಮೂಲಕವೂ ಆದಾಯ ಬರುವಂತಾಗಿದೆ. ಯಡೂರು ಗ್ರಾಮವೂ ಸಮೃದ್ಧವಾಗಿರುವ ತೃಪ್ತಿ ಸ್ಥಳೀಯರಲ್ಲಿದೆ.

ತುಂಬಿರುವ ಯಡೂರು ಕೆರೆಗೆ ಶನಿವಾರ (ಜು.೨೯) ಬಾಗಿನ ಅರ್ಪಿಸಲಾಯಿತು. ಇದಕ್ಕೂ ಮೊದಲು ಪೂಜೆ ಸಲ್ಲಿಸಿದ ಗ್ರಾಮಸ್ಥರು ತಮ್ಮ ಗ್ರಾಮದ ಜೀವನಾಡಿಯಾದ ಕೆರೆಗೆ ಕತಜ್ಞತಾರೂಪಕವಾಗಿ ಮಂಗಳಕರ ವಸ್ತುಗಳನ್ನು ಅರ್ಪಿಸಿದರು. ನಂತರ ನಾಡಿನ ಸುಭಿಕ್ಷಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಕೆರೆಗೆ ಪುನಶ್ಚೇತನ ನೀಡಿದ ಹರಪಳ್ಳಿ ರವೀಂದ್ರ, ಯಡೂರು ಗ್ರಾಮಾಭಿವೃದ್ದಿ ಸಮಿತಿ ಅಧ್ಯಕ್ಷ ಭಾನುಪ್ರಕಾಶ್, ಕಾರ್ಯದರ್ಶಿ ಗಿರೀಶ್ ಸಿ.ಎಸ್., ಸುಧೀರ್, ಕುಮಾರಸ್ವಾಮಿ, ಸಹ ಕಾರ್ಯದರ್ಶಿ ಪವನ್, ಸ್ಥಳೀಯರಾದ ಭರತ್, ಶರತ್, ರವಿ ಹಾಗೂ ಗ್ರಾಮಸ್ಥರು ಈ ಸಂದರ್ಭ ಇದ್ದರು.

ನನ್ನ ಊರು ಹರಪಳ್ಳಿಗೆ ಹೋಗುವ ದಾರಿಯಲ್ಲಿ ಯಡೂರು ಕೆರೆ ಇದೆ. ನಮ್ಮ ಪೋಷಕರು ಸೋಮವಾರಪೇಟೆ ಸಂತೆಗೆ ಬರುವಾಗ ಮತ್ತು ಹೋಗುವಾಗ ಈ ಕೆರೆಯ ನೀರನ್ನು ಕುಡಿದು ದಣಿವಾರಿಸಿಕೊಳ್ಳುತ್ತಿದ್ದರಂತೆ. ಇಂತಹ ಕೆರೆ ಹೂಳು ತುಂಬಿ ನೀರು ಬತ್ತಿಹೋಗಿ ಮೈದಾನದಂತೆ ಆಗಿರುವುದನ್ನು ನೋಡುವಾಗ ಮನಸ್ಸಿಗೆ ನೋವಾಗುತ್ತಿತ್ತು. ಹಾಗಾಗಿಯೇ ನನ್ನ ಸ್ವ.ಂತ ಹಣ ಖರ್ಚು ಮಾಡಿ ಕೆರೆಯ ಹೂಳೆತ್ತಿಸಲಾಯಿತು. ಈಗ ಇಲ್ಲಿ ಸಮೃದ್ಧ ನೀರಿದೆ. ಈ ದೃಶ್ಯ ಕಾಣುವಾಗ ಮಾಡಿದ ಕೆಲಸದ ಬಗ್ಗೆ ತೃಪ್ತಿ ಮೂಡುತ್ತದೆ.
ಹರಪಳ್ಳಿ ರವೀಂದ್ರ, ಸಮಾಜ ಸೇವಕ

ಇದು ಊರಿನ ದೇವರ ಕೆರೆ. ನೀರೆಲ್ಲಾ ಬತ್ತಿಹೋಗಿ ಮಕ್ಕಳು ಕ್ರಿಕೆಟ್ ಆಡಲು ಬಳಸುತ್ತಿದ್ದರು. ಹರಪಳ್ಳಿ ರವೀಂದ್ರ ಅವರು ೨೦೧೮ರಲ್ಲಿ ಈ ಕೆರೆಯ ಹೂಳೆತ್ತಿಸಿ ಪುನಶ್ಚೇತನ ನೀಡಿದ ನಂತರ ನಮ್ಮ ಊರಿನ ಕಳೆಯೇ ಬದಲಾಗಿದೆ. ಸುತ್ತಮುತ್ತಲಿನ ಹಳ್ಳಿಗಳಿಗೂ ಇಲ್ಲಿಂದಲೇ ನೀರು ಹೋಗುತ್ತದೆ. ವ್ಯವಸಾಯ, ದನಕರುಗಳಿಗೆ ಇದೇ ಕೆರೆಯ ನೀರನ್ನು ಈಗ ಬಳಸಲಾಗುತ್ತಿದೆ.
ಎ. ಇ. ಮಲ್ಲಪ್ಪ, ಮಾಜಿ ಅಧ್ಯಕ್ಷ, ಯಡೂರು ಗ್ರಾಮ

ಅಕ್ಷರಶಃ ಮೈದಾನವೇ ಆಗಿ ಹೋಗಿದ್ದ ಯಡೂರು ಕೆರೆಗೆ ಪುನಶ್ಚೇತನ ಕೊಡುವುದಾಗಿ ಹರಪಳ್ಳಿ ರವೀಂದ್ರ ಅವರು ಹೇಳಿದಾಗ ನಮಗೆ ನಂಬಲು ಆಗಲಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನ ಆಗಿರಲಿಲ್ಲ. ಆದರೂ ರವೀಂದ್ರ ಅವರು ಕೆರೆ ಮತ್ತೆ ನೀರಿನಿಂದ ನಳನಳಿಸುವಂತೆ ಮಾಡಿದರು. ಗ್ರಾಮಸ್ಥರಿಗೆ ಇದರಿಂದ ಸಾಕಷ್ಟು ಉಯೋಗ ಆಗುತ್ತಿದೆ. ಮಕ್ಕಳು ಆಟವಾಡುತ್ತಿದ್ದ ಮೈದಾನದಲ್ಲಿ ಈಗ ಮೀನು ಸಾಕಾಣಿಕೆ ನಡೆಯುತ್ತಿದೆ.
ಭಾನುಪ್ರಕಾಶ್, ಅಧ್ಯಕ್ಷ, ಯಡೂರು ಗ್ರಾಮ