ಯಾದಗಿರಿ

ಸಮಾಜಕ್ಕೆ ಮಧ್ವಾಚಾರ್ಯರ ಕೊಡುಗೆ ಅಪಾರ

ಪಂ.ನರಸಿAಹಾಚಾರ ಪುರಾಣಿಕ ಹೇಳಿಕೆ | ಜಿಲ್ಲಾಡಳಿತದಿಂದ ಜಯಂತಿ ಆಚರಣೆ

ಯಾದಗಿರಿ: ದ್ವೈತ ಸಿದ್ಧಾಂತದ ಪ್ರತಿಪಾದಕರಾದ ಜಗದ್ಗುರು ಮಧ್ವಾಚಾರ್ಯರು ಧಾರ್ಮಿಕ, ಆಧ್ಯಾತ್ಮಿಕ ಹಾಗೂ ತಾತ್ವಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅಪಾರ. ಅವರ ತತ್ವಾದರ್ಶಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ ಎಂದು ಪಂಡಿತ ನರಸಿಂಹಾಚಾರ ಪುರಾಣಿಕ ಹೇಳಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಡಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಗದ್ಗುರು ಶ್ರೀಮದ್ ಮಧ್ವಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಧ್ವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮಧ್ವಾಚಾರ್ಯರ ಜಯಂತಿ ಆಚರಿಸುತ್ತಿರುವುದು ವಿಪ್ರ ಸಮಾಜದವರಿಗೆ ಸಂತೋಷದ ಸಂಗತಿ. ಶ್ರೀ ಮಧ್ವಾಚಾರ್ಯರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಧಾರ್ಮಿಕ ಜಾಗೃತಿ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು.

ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಮಾತನಾಡಿ, ಜಗದ್ಗುರು ಶ್ರೀ ಮಧ್ವಾಚಾರ್ಯರ ಜೀವನ ಮತ್ತು ಸಾಧನೆಗಳು ಎಲ್ಲರಿಗೂ ಪ್ರೇರಣೆಯಾಗಿವೆ. ಇಂತಹ ಮಹನೀಯರ ಜಯಂತಿ ಆಚರಣೆ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಮಹತ್ವದ ವೇದಿಕೆಗಳಾಗಿವೆ ಎಂದರು.

ಜಿಲ್ಲಾ ಬ್ರಾಹ್ಮಣ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ನಾರಾಯಣ, ಪ್ರಮುಖರಾದ ರಾಘವೇಂದ್ರ ಆಚಾರ ಜೋಶಿ, ನರಸಿಂಗರಾವ ಕಿಣಿಕೇರಿ, ದಿನೇಶ್ ವಿ.ಸಿ., ಆನಂದ ಗೋರ್ಕಲ್, ವಿಜಯಕುಮಾರ ತಾತಳಗೇರಿ, ಸುಧಾಕರ ಕುಲಕರ್ಣಿ, ಶ್ರೀನಿವಾಸ, ನಾಗೇಶ ಬಿಂದುರಾವ, ವೆಂಕೋಬರಾವ, ಪ್ರವೀಣ ದೇಶಮುಖ, ಸತೀಶ ಕುಲಕರ್ಣಿ, ಅಶೋಕ ಮೂಕಿಹಾಳ, ವೆಂಕಟೇಶ ಮೂಕಿಹಾಳ, ವಾದಿರಾಜಾಚಾರ್ಯ, ಶ್ರೀಕಾಂತ ಆಚಾರ್ಯ, ಶ್ರೀನಿವಾಸರಾವ ಕುಲಕರ್ಣಿ, ಬದ್ರಿ ನಾರಾಯಣಚಾರ್, ವೇಣುಗೋಪಾಲ ಹುದ್ದಾರ, ಆನಂದ ಕುಲಕರ್ಣಿ ಇತರರಿದ್ದರು.

ಮಧ್ವಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿ ಧಾರ್ಮಿಕ ಪರಂಪರೆ ಮತ್ತು ಮಹಾನ್ ದಾರ್ಶನಿಕರ ಸಂದೇಶಗಳನ್ನು ಉಳಿಸಿ ಬೆಳೆಸುವ ಸಂಕಲ್ಪ ಮಾಡಲಾಯಿತು.