ಕೆಂಭಾವಿ: ರೈತರ ನಿರಂತರ ಹೋರಾಟದ ಬಲವಾಗಿ ಕೃಷ್ಣಾ ಕಾಲುವೆಗೆ ಸರ್ಕಾರ ನೀರು ಬಿಟ್ಟಿದೆ. ಆದರೆ ಕೆಂಭಾವಿ ವಲಯದ ಹದನೂರ, ಮಲ್ಲಾ ಇತರ ಗ್ರಾಮಗಳ ಕೊನೆಯ ಭಾಗಕ್ಕೆ ಕಾಲುವೆ ನೀರು ತಲುಪದ್ದರಿಂದ ಹಿಲ್ಟಾಪ್ ಕಾಲನಿಯಲ್ಲಿರುವ ಕೆಬಿಜೆಎನ್ಎಲ್ ಕಚೇರಿಗೆ ಬೀಗ ಹಾಕಿ ಕೃಷಿಕರು ಬುಧವಾರ ಪ್ರತಿಭಟನೆ ನಡೆಸಿದರು. ನಂತರ ಇಂಡಿ ಶಾಖಾ ಕಾಲುವೆ ಗೇಟ್ಗೆ ಆಗಮಿಸಿ ಸಮರ್ಪಕ ನೀರು ಹರಿಯುವವರೆಗೂ ಕಚೇರಿ ಬೀಗ ತೆಗೆಯುವುದಿಲ್ಲ ಎಂದು ಪಟ್ಟುಹಿಡಿದರು.
ರೈತ ಗುತ್ತಣ್ಣಗೌಡ ಪಾಟೀಲ್ ಮಾತನಾಡಿ, ಕಾಲುವೆ ನೀರು ನಂಬಿ ಬೆಳೆಗಳನ್ನು ಬೆಳೆದಿದ್ದು, ಅಽಕಾರಿಗಳು ಸಮರ್ಪಕವಾಗಿ ನೀರು ಹರಿಸದೆ ರೈತರ ಜತೆ ಚೆಲ್ಲಾಟವಾಡುತ್ತಿದ್ದಾರೆ. ಈ ಭಾಗದ ರೈತರಿಗಾಗಿ ಮುಖ್ಯ ಕಾಲುವೆಯಲ್ಲಿ ಕನಿಷ್ಠ ೧೫೦೦ ಕ್ಯೂಸೆಕ್ ನೀರು ಹರಿಯಬೇಕು. ಆದರೆ ಅಽಕಾರಿಗಳು ೭೦೦-೯೦೦ ಕ್ಯೂಸೆಕ್ ನೀರು ಮಾತ್ರ ಹರಿಸುತ್ತಿದ್ದಾರೆ ಎಂದು ದೂರಿದರು.
ಹದನೂರ ರೈತ ಮಡಿವಾಳಪ್ಪಗೌಡ ಮಾತನಾಡಿ, ನಾರಾಯಣಪುರ ಎಡದಂಡೆ ಕಾಲುವೆಯಿಂದ ಜೇವರ್ಗಿ, ಶಹಾಪುರ, ಮುಡಬೋಳ ಶಾಖಾ ಕಾಲುವೆಗಳಿಗೆ ನೀರು ಹರಿಯುತ್ತಿದ್ದರೂ ಇಂಡಿ ಕೆನಾಲ್ಗೆ ಹರಿಯುತ್ತಿಲ್ಲ. ಇದರಿಂದ ಮೆಣಸಿನಕಾಯಿ, ಜೋಳ, ಶೇಂಗಾ ಬೆಳೆಗಳು ಒಣಗುತ್ತಿವೆ ಎಂದು ಗೋಳು ತೋಡಿಕೊಂಡರು.
ರೈತರ ಆಕ್ರೋಶಕ್ಕೆ ಮಣಿದ ಅಽಕಾರಿಗಳು ತುರ್ತಾಗಿ ಇಂಡಿ ಶಾಖಾ ಕಾಲುವೆಗೆ ೯೦೦-೧೫೦೦ ಕ್ಯೂಸೆಕ್ ನೀರು ಹರಿಸಲು ಕ್ರಮ ಕೈಗೊಂಡ ಬಳಿಕ ಕಚೇರಿ ಬೀಗ ತೆಗೆಯಲಾಯಿತು.
ಪ್ರಮುಖರಾದ ಅಂಬರೀಶಗೌಡ, ಗೌಡಪ್ಪಗೌಡ ಹೊಸಮನಿ, ನಿಂಗನಗೌಡ ಹೊಸಮನಿ, ನಾಗಪ್ಪ, ಹೊನ್ನಪ್ಪ ಪೂಜಾರಿ, ಭೀಮನಗೌಡ ಬನ್ನಟ್ಟಿ ಇತರರಿದ್ದರು.