ಸುರಪುರ: ಇಲ್ಲಿನ ಕನ್ನಡ ಸಾಹಿತ್ಯ ಸಂಘ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್‌ನ ಜಂಟಿ ಆಶ್ರಯದಲ್ಲಿ ೪೦ನೇ ನಾಡಹಬ್ಬ ಉತ್ಸವವನ್ನು ಅ.೧೧ರಿಂದ ೧೯ರವರೆಗೆ ಗರುಡಾದ್ರಿ ಕಲಾ ಮಂದಿರದಲ್ಲಿ ಆಯೋಜಿಸಲಾಗಿದ್ದು, ಮೈಸೂರು ದಸರಾ ಮಾದರಿಯಲ್ಲಿ ಆನೆ-ಅಂಬಾರಿ ಮೆರವಣಿಗೆ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಬ್ಲಿಕ್ ರಿಕ್ರಿಯೇಷನ್ ಕ್ಲಬ್‌ನ ಕಾರ್ಯದರ್ಶಿ ಸುರೇಶ ಸಜ್ಜನ್ ತಿಳಿಸಿದರು.
ನಗರದ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್‌ನಲ್ಲಿ ಗುರುವಾರ ನಾಡಹಬ್ಬ ಉತ್ಸವದ ಆಮಂತ್ರಣ ಪೂಜೆ ನೆರವೇರಿಸಿ ಮಾತನಾಡಿದ ಅವರು, ಅ.೧೧ರಂದು ಸಂಜೆ ೪ರವರೆಗೆ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ಆನೆ-ಅಂಬಾರಿ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಅಂಬಾರಿಯಲ್ಲಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಿ ಶೋಭಾಯಾತ್ರೆ ನಡೆಸಲಾಗುವುದು. ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ದೇವಿಗೆ ಪುಷ್ಪಾರ್ಚನೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಲಿದ್ದು, ಶಾಸಕ ರಾಜಾ ವೇಣುಗೋಪಾಲ ನಾಯಕ ಪಾಲ್ಗೊಳ್ಳಿದ್ದಾರೆ ಎಂದರು.
ಗಟ್ಟಿಮೇಳ, ಕೋಲಾಟ, ಡೊಳ್ಳು ಕುಣಿತ ಸೇರಿ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಮಹಿಳೆಯರು ಕುಂಭ-ಕಳಸದೊಅದಿಗೆ ಪಾಲ್ಗೊಳ್ಳುವರು. ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ರಾಜಮಾರ್ಗದ ಮೂಲಕ ಗರುಡಾದ್ರಿ ಕಲಾ ಮಂದಿರವರೆಗೆ ಮೆರವಣಿಗೆ ಸಾಗಲಿದೆ. ನಗರವಾಸಿಗಳು ಮನೆಗಳ ಮುಂಭಾಗ ರಂಗೋಲಿ ಹಾಕಿ, ಪುಷ್ಪವೃಷ್ಟಿ ಮಾಡುವ ಮೂಲಕ ಶೋಭಾಯಾತ್ರೆಗೆ ಅದ್ದೂರಿಯಾಗಿ ಸ್ವಾಗತಿಸಬೇಕು. ಬಳಿಕ ರಾತ್ರಿ ೮ಕ್ಕೆ ಉತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಗೌರವಾಧ್ಯಕ್ಷ ರಾಜಾ ಪಾಮ ನಾಯಕ ಉದ್ಘಾಟಿಸುವರು. ಪ್ರತಿ ದಿನ ವಿಶೇಷ ಉಪನ್ಯಾಸ, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ರಾಜಾ ಮುಕುಂದ ನಾಯಕ ಮಾತನಾಡಿ, ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅವರು ೧೯೮೬ರಲ್ಲಿ ನಾಡಹಬ್ಬ ಉತ್ಸವ ಸಮಿತಿ ಸ್ಥಾಪಿಸಿರುತ್ತಾರೆ ಎಂದು ಅವರ ಕೊಡುಗೆ ಸ್ಮರಿಸಿದ ಅವರು, ೪೦ನೇ ವರ್ಷದ ಉತ್ಸವವನ್ನು ಯಶಸ್ಸುಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದರು.
ಉದ್ಯಮಿ ಕಿಶೋರಚಂದ ಜೈನ ಮಾತನಾಡಿ, ಇಲ್ಲಿಯ ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು ಸ್ಮರಿಸುವ ಉದ್ದೇಶದಿಂದ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದರು. ಕ್ಲಬ್ ಅಧ್ಯಕ್ಷ ಅರವಿಂದ ಕುಮಾರ, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ, ನಾಡಹಬ್ಬ ಉತ್ಸವ ಸಮಿತಿ ಗೌರವಾಧ್ಯಕ್ಷ ರಾಜಾ ಪಾಮ ನಾಯಕ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಮಸ್ಕಿ ಸೇರಿ ಕ್ಲಬ್‌ನ ಪದಾಽಕಾರಿಗಳು, ಸದಸ್ಯರಿದ್ದರು.
ಪ್ರಕಾಶ ಅಂಗಡಿ ನಿರೂಪಿಸಿದರು. ರಾಜಶೇಖರ ದೇಸಾಯಿ ವಂದಿಸಿದರು.
ಆನೆ-ಅಂಬಾರಿ ಮೆರವಣಿಗೆಗೆ ಅರಣ್ಯ ಹಾಗೂ ಪಶುವೈದ್ಯಕೀಯ ಇಲಾಖೆಗಳ ಅಗತ್ಯ ಅನುಮತಿ ಪಡೆಯಲಾಗಿದ್ದು, ರಾಜ್ಯಮಟ್ಟದ ಅನುಮತಿಯೂ ದೊರೆತಿದೆ. ಕಲಬುರಗಿ ಕಡಗಂಚಿ ಮಠದ ಆನೆ ಹಾಗೂ ಮಸ್ಕಿ ಮಠದ ಅಂಬಾರಿಯನ್ನು ಬಳಸಲಾಗುವುದು. ಕಲಬುರಗಿಯಿಂದ ದೇವಿ ಮೂರ್ತಿ ತರಿಸಿ ಅಂಬಾರಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಶನಿವಾರ ಆನೆ ನಗರಕ್ಕೆ ಆಗಮಿಸಲಿದ್ದು, ಪೂಜೆ ಸಲ್ಲಿಸಿ ಸ್ವಾಗತಿಸಲಾಗುವುದು. | ಸುರೇಶ ಸಜ್ಜನ್, ಸುರಪುರ
ಮಾಜಿ ಶಾಸಕ ದಿ.ರಾಜಾ ಪಿಡ್ಡನಾಯಕ, ರಾಜಾ ವೆಂಕಟಪ್ಪನಾಯಕ, ಮಾಜಿ ಸಂಸದ ಬ್ಯಾರಿಸ್ಟರ್ ರಾಜಾ ವೆಂಕಟಪ್ಪನಾಯಕ, ಮಾಜಿ ಸಚಿವ ರಾಜಾ ಮದನಗೋಪಾಲನಾಯಕ, ಎ.ಕೃಷ್ಣ ಸುರಪುರ, ದಿ.ವಿರುಪಾಕ್ಷಪ್ಪಗೌಡ ರಾಜನಕೋಳೂರ ಅವರಿಗೆ ನಾಡಹಬ್ಬ ಉತ್ಸವದಲ್ಲಿ ಮರಣೋತ್ತರವಾಗಿ ಸುರಪುರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆದಾಯ ತೆರಿಗೆ ನಿವೃತ್ತ ಆಯುಕ್ತ ರತ್ನಾಕರ ನಾಯಕ, ಉದ್ಯಮಿ ಗ್ಯಾನಚಂದ್ ಜೈನ, ಕ್ರೀಡಾಪಟು ಮರೆಪ್ಪ ಗುರಿಕಾರ, ಡಾ.ಇಂದರಚಾದ್ ಜೈನ, ಶ್ರೀಹರಿರಾವ ಆದೋನಿ, ಶಾಂತಿ ಭಂಗ್ರೆ (ರೀಟಾ ಹಂಚಾಟೆ) ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಅ.೧೧ರಿಂದ ಅ.೧೭ ರವರೆಗೆ ಪ್ರತಿದಿನ ರಾತ್ರಿ ೮ಕ್ಕೆ ವಿಶೇಷ ಉಪನ್ಯಾಸ ನಡೆಯಲಿದೆ. ಅ.೧೧ರಂದು ನಾಡಹಬ್ಬ ಉತ್ಸವದಲ್ಲಿ ಸಮ್ಮಿಳಿತಗೊಂಡ ಜಾನಪದ ಕಲೆ ಕುರಿತು ಶಿವಲೀಲಾ ಮುರಾಳ, ೧೨ರಂದು ಸುರಪುರದ ಜನಪದ ಪರಂಪರೆ-ಕನಕಪ್ಪ ವಾಗಣಗೇರಿ, ೧೩ರಂದು ಸಾಮಾಜಿಕ ಜೀವನದಲ್ಲಿ ಸ್ತಿಥ ಸಮಾನತೆ-ವಿಶ್ವಪೂರ್ವ ಸತ್ಯಂಪೇಟೆ, ೧೪ರಂದು ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿ-ಶ್ರೀನಿವಾಸ ಜಾಲವಾದಿ, ೧೫ರಂದು ಸಗರನಾಡಿನ ಮಹಿಳಾ ಸಾಧಕರು-ಜ್ಯೋತಿಲತಾ ತಡಿಬಿಡಿಮಠ, ೧೬ಕ್ಕೆ ಸಗರನಾಡಿನ ಚಂದಿಮರಸ-ಡಾ.ಡಿ.ಎನ್.ಪಾಟೀಲ್ ಕರಡಕಲ್, ೧೭ರಂದು ಸಗರನಾಡಿನ ಶರಣರು ಕುರಿತು ಪಾರ್ವತಿ ದೇಸಾಯಿ ಬೂದೂರು ವಿಶೇಷ ಉಪನ್ಯಾಸ ನೀಡಲಿದ್ದಾರೆ.