ಯಾದಗಿರಿ ಜಿಲ್ಲಾ ಪೊಲೀಸ್ ಭವನ  
ಯಾದಗಿರಿ

ಎರಡೇ ತಿಂಗಳಲ್ಲಿ ೯೦ ಕೇಸ್ ಪತ್ತೆ

ಅಕ್ರಮ ದಂಧೆ ಕಡಿವಾಣಕ್ಕೆ ಪೊಲೀಸ್ ದಿಟ್ಟ ಹೆಜ್ಜೆ | ೧೯೭ ಜನರ ವಿರುದ್ಧ ದೂರು | ನಗದು ಸೇರಿ ರು.೧೨ ಲಕ್ಷದ ವಸ್ತು ವಶಕ್ಕೆ

ಯಾದಗಿರಿ: ಅಕ್ರಮ ಚಟುವಟಿಕೆ ಮತ್ತು ಅಪರಾಧ ನಿಯಂತ್ರಣಕ್ಕೆ ದಿಟ್ಟ ಕ್ರಮಕ್ಕೆ ಮುಂದಾಗಿರುವ ಜಿಲ್ಲಾ ಪೊಲೀಸ್ ಇಲಾಖೆ ಜುಲೈ ಮತ್ತು ಆಗಸ್ಟ್ನಲ್ಲಿ ೯೦ ಪ್ರಕರಣ ಭೇದಿಸಿ ೧೯೭ ಜನರ ವಿರುದ್ಧ ದೂರು ದಾಖಲಿಸಿ ನಗದು ಸೇರಿ ೧೨ ಲಕ್ಷ ರೂ. ಮೌಲ್ಯದ ವಿವಿಧ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದೆ.

ಮಟಕಾ, ಜೂಜಾಟ, ಕೋಳಿ, ಹುಂಜಗಳ ಕಾಳಗ, ಅಕ್ರಮ ಮದ್ಯ ಮಾರಾಟ, ಉಸುಕಿನ ದಂಧೆ, ಗಾಂಜಾ ಸೇವನೆ ಮತ್ತು ಪಡಿತರ ಮಾರಾಟ ಜಾಲವನ್ನು ಎಸ್‌ಪಿ ಪೃಥ್ವಿಕ್ ಶಂಕರ್, ಹೆಚ್ಚುವರಿ ಎಸ್‌ಪಿ ಧರಣೇಶ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ, ಸಿಪಿಐ, ಪಿಎಸ್‌ಐ ನೇತೃತ್ವದ ತಂಡಗಳು ಪತ್ತೆ ಹಚ್ಚಿವೆ.

ಶಹಾಪುರ, ಸುರಪುರ, ಹುಣಸಗಿ, ಗುರುಮಠಕಲ್, ಯಾದಗಿರಿ, ಸೈದಾಪುರ, ನಾರಾಯಣಪುರ, ಕೊಡೇಕಲ್ ಮತ್ತು ಕೆಂಭಾವಿ ಸೇರಿ ಜಿಲ್ಲೆಯ ೧೫ ಠಾಣೆಗಳ ಸರಹದ್ದಿನಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟು ದಾಳಿ ಮಾಡಿ ೬೦ ದಿನಗಳಲ್ಲಿ ೯೦ ಪ್ರಕರಣ ದಾಖಲಿಸಿದ್ದಾರೆ. ವಿವಿಧ ಠಾಣೆ ವ್ಯಾಪ್ತಿಯ ೩೦ ಮಟಕಾ ಅಡ್ಡೆಗಳ ಮೇಲೆ ದಾಳಿ ಮಾಡಿ ೩೧ ಜನರ ವಿರುದ್ಧ ದೂರು ದಾಖಲಿಸಿ ೩೪.೯೨೦ ರೂ. ಜಪ್ತಿ ಮಾಡಿದ್ದಾರೆ.

ನಗರ ಸೇರಿ ವಿವಿಧ ಪಟ್ಟಣ, ಹಳ್ಳಿಗಳಲ್ಲಿ ಜೂಜಾಟದ ೨೪ ಕಡೆ ದಾಳಿ ನಡೆಸಿ ೧೬೧ ಜನರ ವಿರುದ್ಧ ದೂರು ದಾಖಲಿಸಿ ೧,೭೪,೮೯೫ ರೂ. ವಶಪಡಿಸಿಕೊಂಡಿದ್ದಾರೆ. ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಆರು ಕಡೆ ದಾಳಿ ಇಟ್ಟ ಪೊಲೀಸರು, ೨೩೭೫ ರೂ. ಮೌಲ್ಯದ ೬.೩೯೦ ಲೀಟರ್ ಮದ್ಯ ವಶಪಡಿಸಿಕೊಂಡು ಆರು ಜನರು ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಕಠಿಣ ಕಾನೂನು ಲಾಗೂ ಮಾಡಿದ್ದರೂ ದಂಧೆಕೊರರು ಕಳ್ಳಹಾದಿಯಿಂದ ಮರಳು ಮಾರಾಟ ಮಾಡುವುದನ್ನು ನಿಲ್ಲಿಸಿಲ್ಲ ಎಂಬುದಕ್ಕೆ ಎರಡೇ ತಿಂಗಳಲ್ಲಿ ಅಕ್ರಮ ಮರಳು ಮಾರಾಟದ ೩೦ ಪ್ರಕರಣ ಬಯಲಿಗೆಳೆದು ೮೩ ಜನರ ವಿರುದ್ಧ ಕೇಸ್ ದಾಖಲಿಸಿರುವ ಪೊಲೀಸರು, ೬,೧೮,೯೫೦ ರೂ. ಮೌಲ್ಯದ ೬೩೭.೨೪ ಕ್ಯೂಬಿಕ್ ಮೀಟರ್ ಮರಳು ವಶಪಡಿಸಿಕೊಂಡಿದ್ದಾರೆ.

ಜಿಲ್ಲೆಯ ನಾಲ್ಕು ಕಡೆ ಅಕ್ರಮವಾಗಿ ಸಾಗಿಸುತ್ತಿದ್ದ ೩,೪೮,೬೫೩ ರೂ. ಮೌಲ್ಯದ ಪಡಿತರ ಅಕ್ಕಿ ಮತ್ತು ಜೋಳ ಜಪ್ತಿ ಮಾಡಿ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇನ್ನು ಗಾಂಜಾ ಸೇವನೆಗೆ ಸಂಬಂದಿಸಿದಂತೆ ಒಂದು ಕಡೆ ದಾಳಿ ಇಟ್ಟು ಇಬ್ಬರನ್ನು ವಶಕ್ಕೆ ಪಡೆದು ದೂರು ದಾಖಲಿಸಿದರೆ, ಎರಡು ಕಡೆ ಕೋಳಿ, ಹುಂಜ ಕಾಳಗಕ್ಕೆ ಸಂಬಂದಿಸಿದಂತೆ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿವಿಧ ರೀತಿಯ ಅಕ್ರಮ ದಂಧೆ ಮತ್ತು ಅಪರಾಧ ತಡೆಯಲು ಜಿಲ್ಲಾ ಪೊಲೀಸ್ ನಿರಂತರ ಶ್ರಮಿಸುತ್ತಿದೆ. ವಿಶೇಷವಾಗಿ ಮಟಕಾ, ಜೂಜಾಟ, ಕೋಳಿ, ಹುಂಜಗಳ ಕಾಳಗ, ಮದ್ಯ ಮಾರಾಟ, ಉಸುಕು, ಗಾಂಜಾ ಸೇವನೆ ಮತ್ತು ಅಕ್ರಮ ಪಡಿತರ ಮಾರಾಟದ ಜಾಲ ಪತ್ತೆ ಹಚ್ಚುವಲ್ಲಿ ಪೊಲೀಸ್ ಅಽಕಾರಿಗಳ ತಂಡ ರಚಿಸಿ ಜಾಲ ಬೀಸಲಾಗುತ್ತಿದೆ. ಸಾರ್ವಜನಿಕರು ಮಾಹಿತಿ ನೀಡಿದರೆ ಹೆಸರು ಗೌಪ್ಯವಾಗಿ ಇಡಲಾಗುವುದು. ಈ ಕುರಿತು ಜನರಲ್ಲಿ ಜಾಗೃತಿಯೂ ಮೂಡಿಸಲಾಗುತ್ತಿದೆ. | ಪೃಥ್ವಿಕ್ ಶಂಕರ್ ಜಿಲ್ಲಾ ಪೊಲೀಸ್ ವರಿಷ್ಠಾಅಕಾರಿ

ಹಳ್ಳಿಗಳಲ್ಲಿ ನಿಲ್ಲದ ಅಕ್ರಮ ಮದ್ಯ ಮಾರಾಟ

ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದರೂ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲುತ್ತಿಲ್ಲ. ಬದಲಿಗೆ ದಿನೇದಿನೆ ಹೆಚ್ಚಾಗುತ್ತಿದೆ. ದಿನ ಬೆಳಗಾದರೆ ಹಾಲಿನ ವಾಹನ ಬರುವಂತೆ ಅಕ್ರಮ ಮದ್ಯ ತುಂಬಿದ ವಾಹನಗಳು ರಾಜಾರೋಷವಾಗಿ ಹಳ್ಳಿಗಳಿಗೆ ಬಂದು ಕೆಲ ವ್ಯಾಪಾರಿಗೆ ಕೊಟ್ಟು ಹೋಗುವ ಪರಿಪಾಠ ಚಾಲ್ತಿಯಲ್ಲಿದೆ. ಹಳ್ಳಿ, ತಾಂಡಾಗಳ ಕಿರಾಣಿ ಅಂಗಡಿ, ತಟ್ಟಿ ಹೋಟೆಲ್, ಪಾನ್‌ಶಾಪ್ ಮತ್ತು ಮನೆಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟು ಅಗ್ಗದ ಮದ್ಯ ದುಬಾರಿ ಬೆಲೆಗೆ ಮಾರಾಟ ಮಾಡುವ ದಂಧೆ ಎಗ್ಗಿಲ್ಲದೆ ಸಾಗಿದ್ದರೂ ಅಬಕಾರಿ ಇಲಾಖೆ ದಿವ್ಯ ಮೌನಕ್ಕೆ ಶರಣಾಗಿದ್ದು ದುರಂತವೇ ಸರಿ.