ಯಾದಗಿರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಬುಧವಾರ ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮ ಅತ್ಯಂತ ಕಳಪೆ ಮಟ್ಟದಲ್ಲಿ ಜರುಗುವ ಮೂಲಕ ನಿಜವಾದ ವಿವಿಧ ಕಲಾವಿದರಿಗೆ ಭಾರಿ ಅನ್ಯಾಯ ಮಾಡಿತು.
ಈ ಕಾರ್ಯಕ್ರಮ ಹೇಗೆ ಇತ್ತು ಎಂದರೆ ಒಂದು ಹಳ್ಳಿಯಲ್ಲಿ ಆಯೋಜಿಸುವ ಯುವಜನೋತ್ಸವ ಕಾರ್ಯಕ್ರಮಕ್ಕಿಂತ ಹೀನಾಯವಾಗಿತ್ತು. ಬೆಳಗ್ಗೆ 9ಕ್ಕೆ ಆರಂಭವಾಗಬೇಕಾದ ಕಾರ್ಯಕ್ರಮ 12ಗಂಟೆಯಾದರೂ ಶುರುವಾಗಿರಲಿಲ್ಲ. ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ವಿವಿಧ ನೂರಾರು ಕಲಾವಿದರು ಬರಬೇಕಿತ್ತು. ಆದರೆ 3&4 ತಂಡಗಳು ಮಾತ್ರ ಬಂದಿದ್ದವು. ಯಾವ, ಯಾವ ಸ್ಪರ್ಧೆಗಳು ಇರಬೇಕು, ಯಾರ್ಯಾರನ್ನು ಕರೆಯಿಸಬೇಕು, ನಿಗದಿತ ಅವಧಿಗೆ ಶುರು ಮಾಡಿ ಅಚ್ಚುಕಟ್ಟಾಗಿ ಆಯೋಜನೆ ಮಾಡುವ ಮೂಲಕ ನೈಜ ಕಲಾವಿದರಿಗೆ ಉತ್ತಮ ವೇದಿಕೆ ಆಗಬೇಕಾಗಿದ್ದ ಜಿಲ್ಲಾಮಟ್ಟದ ಯುವ ಜನೋತ್ಸವ ಸಂಪೂರ್ಣ ಕಳಪೆಮಟ್ಟದ್ದಾಗಿತ್ತು.
ಕಲಾವಿದರು ಇಲ್ಲ, ಆಯೋಜಕರು ಇಲ್ಲ, ಇಡೀ ಸಭಾಂಗಣವೇ ಖಾಲಿ ಇತ್ತು. ನೋಡುಗರು ಅವರೇ ಕಲೆ ಪ್ರದರ್ಶನ ಮಾಡುವವರು ಅವರೇ ಎಂಬಂತೆ ಐವತ್ತು ಮಂದಿ ಮಾತ್ರ ಅಲ್ಲಿದ್ದರು. ಜಾನಪದ ನೃತ್ಯ, ಜಾನಪದ ಗೀತೆ, ಕವಿತೆ ಬರೆಯುವುದು, ಚಿತ್ರಕಲೆ, ಬೀದಿ ನಾಟಕ ಹೀಗೆ ಈ ಎಲ್ಲ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಈ ಎಲ್ಲ ವಿಭಾಗಗಳಲ್ಲಿ ಭಾಗವಹಿಸಲು ಅರ್ಹ ಕಲಾವಿದರೇ ಬಂದಿರಲಿಲ್ಲ. ಆದರೂ ಇದೇ ಕಾರ್ಯಕ್ರಮ ಭಾರಿ ಮಾಡಿದ್ದೇವೆ ಎಂಬ ಖುಷಿಯಲ್ಲಿ ಆಯೋಜಕ ಅಧಿಕಾರಿ, ಸಿಬ್ಬಂದಿ ಇದ್ದದ್ದು ಕಂಡು ಬಂತು.
ಬಂದಷ್ಟು ಜನರು ಪ್ರದರ್ಶಿಸಿದ ಕಲೆಗಳ ಬಗ್ಗೆ ತೀರ್ಪು ಕೊಡಲು ಬಂದಿದ್ದ ನಾಲ್ಕು ಜನ ತೀರ್ಪುಗಾರರು ಬಹಳಷ್ಟು ಪರೇಶ್ಯಾನ್ ಆದಂತೆ ಕಂಡು ಬಂತು. ಯಾವ ಕಲೆ ಪ್ರದರ್ಶನ ಮಾಡಬೇಕೆಂಬ ನಿಯಮವಿತ್ತು, ಅದರ ಬದಲಿಗೆ ಬೇರೆ, ಬೇರೆ ಕಲೆಗಳೇ ಪ್ರದರ್ಶನಗೊಂಡ ಕಾರಣ ಏನು, ಹೇಗೆ ತೀರ್ಪು ನೀಡಬೇಕೆಂಬ ಗೊಂದಲಕ್ಕೆ ಅವರು ಸಿಲುಕಿದಂತೆ ಕಂಡು ಬಂತು. ಸಕಾಲಕ್ಕೆ ಕಲೆ ಪ್ರದರ್ಶನ ಮಾಡಲು ಯುವ ಕಲಾವಿದರೇ ಇರಲಿಲ್ಲ. ಕೊನೆಗೆ ನಗರದ ಒಂದು ಶಾಲೆ ಮಕ್ಕಳನ್ನು ಕರೆದುಕೊಂಡು ಬಂದು ಅವರಿಂದ ಒಂದು ಹಾಡಿನ ಸಹಿತ ನೃತ್ಯ ಮಾಡಿ ಕಳುಹಿಸಿದರು. ಇನ್ನೊಂದು ಕಲಾತಂಡ ಪ್ರದರ್ಶನವು ಉತ್ತಮವಾಗಿದ್ದರೂ ಅದು ಯಾವ ಕಲೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಅವರಲ್ಲಿ ಇರಲಿಲ್ಲ. ಆಗ ತೀರ್ಪುಗಾರರು ಇದು ಹೀಗೆ ಇದೆ. ನೀವು ರಾಜ್ಯಮಟ್ಟಕ್ಕೆ ಹೊದಾಗ ಅಲ್ಲಿ ಎಲ್ಲವೂ ಹೇಳಲು ಬರಬೇಕೆಂಬ ಬಗ್ಗೆ ಮಾಹಿತಿ ನೀಡುವಂತಹ ಕೆಲಸವೂ ನಡೆಯಿತು.
ಸುಮಾರು 500 ಜನರು ಕುಳಿತುಕೊಳ್ಳಲು ವ್ಯವಸ್ಥೆ ಇರುವ ಸಭಾಂಗಣ ಪೂರ್ತಿ ಖಾಲಿಯೇ ಇತ್ತು. ಒಟ್ಟಾರೆ ಆಯೋಜಕ ಅಧಿಕಾರಿಗಳು ಆಟಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಸರ್ಕಾರದ ನಿಯಮದಂತೆ ಮಾಡಿ ಮುಗಿಸಿದ್ದು ಕಂಡು ಬಂತು. ಹೀಗೆ ಇಂತಹ ಮಹತ್ವದ ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮ ಇಷ್ಟೋಂದು ಕಳಪೆ ಮಟ್ಟದಲ್ಲಿ ಮಾಡಿದ್ದಕ್ಕೆ ಯಾರು ಹೊಣೆ? ಹೀಗೆ ಮಾಡಿದ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಯಾವ ಶಿಸ್ತಿನ ಕ್ರಮ ಜರುಗಿಸುವರು? ಕಾದು ನೋಡಬೇಕಿದೆ.