ಸುರಪುರದ ರಂಗಂಪೇಟೆಯಲ್ಲಿ ಶನಿವಾರ ಧರ್ಮಸ್ಥಳ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿರ್ಗತಿಕ ಕುಟುಂಬಗಳಿಗೆ ವಾತ್ಸಲ್ಯ ಮನೆ ವಿತರಿಸಲಾಯಿತು. ಗಿರಿಜಾ ಸಂತೋಷ ಪಾಟೀಲ್​, ದಿನೇಶ ಪೂಜಾರಿ, ಮಾಧುರಿ ಶೆಟ್ಟಿ, ಪ್ರಕಾಶ ಅಂಗಡಿ ಕನ್ನೆಳ್ಳಿ, ಸುಗೂರೇಶ ವಾರದ ಇತರರಿದ್ದರು. 
ಯಾದಗಿರಿ

ಸಬಲೀಕರಣದಿಂದ ಹೆಣ್ಮಕ್ಕಳ ಸ್ವಾವಲಂಬನೆ

ಸುರಪುರ: ಮಹಿಳೆಯರು ಕುಟುಂಬದ ಆಧಾರಸ್ತಂಭ ಜತೆ ಸಾಮಾಜಿಕ ಸಮಾನತೆ, ಆರ್ಥಿಕ ಪ್ರಗತಿ ಹಾಗೂ ರಾಷ್ಟ್ರದ ನಿರ್ಮಾಣದಲ್ಲೂ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ವಿಜಯಪುರದ ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಜಿಲ್ಲಾಧ್ಯೆಕ್ಷ, ಸಾಹಿತಿ ಗಿರಿಜಾ ಸಂತೋಷ ಪಾಟೀಲ್​ ಬಸವನ ಬಾಗೇವಾಡಿ ಹೇಳಿದರು.

ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್​ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಶನಿವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಶಿಕ್ಷಣ, ಸೂಕ್ತ ಅವಕಾಶ ಹಾಗೂ ಸ್ವಾವಲಂಬನೆ ದಾರಿ ಕಲ್ಪಿಸಿದಾಗಲೇ ಸ್ವಾಸ್ಥ ಕುಟುಂಬ ಮತ್ತು ಸಮರ್ಥ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.

ಸ್ತ್ರೀ ಸಬಲೀಕರಣ ಕೇವಲ ಕುಟುಂಬದ ಪ್ರಗತಿಗೆ ಸೀಮಿತವಾಗದೆ ಸಮಾಜ ಮತ್ತು ದೇಶಕ್ಕೂ ಪೂರಕವಾಗಿದೆ. ಮಹಿಳೆಯರಿಗೆ ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಸಮಾನ ಅವಕಾಶ ದೊರೆತರೆ ಕುಟುಂಬದ ಜತೆೆ ಸಮಾಜದ ಪ್ರಗತಿಗೂ ಕೊಡುಗೆ ನೀಡಬಲ್ಲರು ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ದಿನೇಶ ಪೂಜಾರಿ ಮಾತನಾಡಿ, ಸಮಾಜ ನಿರ್ಮಾಣ ಮತ್ತು ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಹೆಣ್ಣು ಮಕ್ಕಳು ನಾಲ್ಕು ಗೋಡೆ ಮಧ್ಯೆ ಬಂಧಿಯಾಗದೆ ತಮ್ಮ ಸಾಮರ್ಥ್ಯ ಗುರುತಿಸಿ ಸಮಾಜದ ಮುನ್ನೆಲೆಗೆ ಬರಬೇಕು. ಸಂಸ್ಥೆಯು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಸ್ವಸಹಾಯ ಸಂಗಳು ಮತ್ತು ಜ್ಞಾನವಿಕಾಸ ಕೇಂದ್ರಗಳ ಮೂಲಕ ಲಕ್ಷಾಂತರ ಹೆಣ್ಮಕ್ಕಳು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ವೇದಿಕೆ ಕಲ್ಪಿಸಿದೆ ಎಂದು ತಿಳಿಸಿದರು.

ಮಾಧುರಿ ಶೆಟ್ಟಿ ಮತ್ತು ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿದರು. ಸುಗೂರೇಶ ವಾರದ ಅಧ್ಯತೆ ವಹಿಸಿದ್ದರು. ಶಕುಂತಲಾ ಆನಂದರಾವ್​ ಜನಗಾರ ಉದ್ಘಾಟಿಸಿದರು. ಡಾ.ಪ್ರಿಯಾಂಕ್​ ಬಂಗಾರಿ, ಡಾ.ವಿಜಯ ಸಾಯಿ ಬಂಗಾರಿ, ಶಿವಶರಣಪ್ಪ ಹೆಡಗಿನಾಳ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅನಿತಾ ಇತರರಿದ್ದರು. ಕ್ಷೇತ್ರ ಯೋಜನಾಧಿಕಾರಿ ನಾಗೇಶ್​ ಎನ್​.ಪಿ. ನಿರೂಪಣೆ ಮಾಡಿ ವಂದಿಸಿದರು. ಸಂಸ್ಥೆಯ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ವಾತ್ಸಲ್ಯ ಮನೆ, ಮಾಸಾಶನ ಮತ್ತು ದ್ವಿಚಕ್ರ ವಾಹನ ವಿತರಿಸಲಾಯಿತು.

ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದು ಮಹಿಳೆಯರಿಗೆ ಶಿಕ್ಷಣ, ಜ್ಞಾನ ಹಾಗೂ ತಂತ್ರಜ್ಞಾನ ಮೂಲಕ ಸಾಕಷ್ಟು ಅವಕಾಶಗಳಿವೆ. ಪ್ರತಿ ತಿಂಗಳು ಜ್ಞಾನವಿಕಾಸ ಕೇಂದ್ರಗಳ ಮೂಲಕ ಆರೋಗ್ಯ, ಕಾನೂನು ಅರಿವು, ಪೌಷ್ಟಿಕ ಆಹಾರ, ಮಕ್ಕಳ ಶಿಕ್ಷಣ ಮತ್ತು ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಮಹಿಳೆಯರು ಸದುಪಯೋಗ ಪಡೆದು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಕುಟುಂಬ ಮತ್ತು ಸಮಾಜದ ಪ್ರಗತಿಗೆ ಶ್ರಮಿಸಬೇಕು.
> ದಿನೇಶ್​ ಪೂಜಾರಿ ಪ್ರಾದೇಶಿಕ ನಿರ್ದೇಶಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲಬುರಗಿ