ಶಹಾಪುರದಲ್ಲಿ ಕಸಾಪ ಭಾನುವಾರ ಆಯೋಜಿಸಿದ್ದ ತತ್ವಪದಕಾರ ಅವಧೂತ ಶ್ರೀ ರಂಗಲಿಂಗೇಶ್ವರ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀ ಸದ್ಗುರು ತ್ರಿಶೂಲಪ್ಪ ಶರಣರು ಮಾತನಾಡಿದರು. ಡಾ.ರವೀಂದ್ರನಾಥ ಹೊಸ್ಮನಿ, ಸಿದ್ದಲಿಂಗಯ್ಯ ಗಣಚಾರಿ, ಅಶೋಕ ಮಲ್ಲಾಬಾದಿ, ಶಿವಣ್ಣ ಇಜೇರಿ, ಅಡಿವೆಪ್ಪ ಜಾಕಾ ಇತರರಿದ್ದರು. 
ಯಾದಗಿರಿ

ಸನ್ಮಾನಕ್ಕಿಂತ ಸಂಸ್ಕಾರವೇ ದೊಡ್ಡದು

ಶಹಾಪುರ: ಸನ್ಮಾನಕ್ಕಿಂತ ಜನರಲ್ಲಿ ಸಂಸ್ಕಾರ ಬೆಳೆಸುವುದು ಮುಖ್ಯವಾಗಿದೆ ಎಂದು ಅವಧೂತ ಶ್ರೀ ಸದ್ಗುರು ರಂಗಲಿಂಗೇಶ್ವರ ಮಹಾಮಠದ ಪೀಠಾಧಿಪತಿ ಶ್ರೀ ಸದ್ಗುರು ತ್ರಿಶೂಲಪ್ಪ ಶರಣರು ನುಡಿದರು.

ನಗರದ ಕಸಾಪ ಭವನದಲ್ಲಿ ಭಾನುವಾರ ತಾಲೂಕು ಹಾಗೂ ಮುಡಬೂಳ ವಲಯ ಘಟಕದ ಸಹಯೋಗದಡಿ ಭಾನುವಾರ ಏರ್ಪಡಿಸಿದ್ದ ತತ್ವಪದಕಾರ ಅವಧೂತ ಶ್ರೀ ರಂಗಲಿಂಗೇಶ್ವರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನೆಯೇ ಸಂಸ್ಕಾರದ ಮೊದಲ ಪಾಠಶಾಲೆ. ಅಲ್ಲಿಂದಲೇ ಮಕ್ಕಳಲ್ಲಿ ಸಂಸ್ಕಾರ ಆರಂಭವಾಗುತ್ತದೆ. ಬಳಿಕ ಗುರು-ಹಿರಿಯರ ಮಾರ್ಗದರ್ಶನ ಪಡೆದು ಉತ್ತಮ ಬದುಕು ರೂಪಿಸಿಕೊಂಡಾಗ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದರು.

ನಮ್ಮ ಮಾತುಗಳೇ ನಮ್ಮ ವ್ಯಕ್ತಿತ್ವ ರೂಪಿಸುವುದರಿಂದ ಮಾತನ್ನು ಮುತ್ತಿನಂತೆ ಬಳಸುವ ಪರಿ ಅರಿತುಕೊಳ್ಳಬೇಕು. ಅತ್ಯುತ್ತಮ ಗುರು ದೊರೆತರೆ ಜೀವನ ಪಾವನವಾಗುತ್ತದೆ ಎಂದು ಹೇಳಿದರು.

ಶ್ರೀ ರಂಗಲಿಂಗೇಶ್ವರರ ಬದುಕು-ಬರಹ ಕುರಿತು ಉಪನ್ಯಾಸಕ ಈರಣ್ಣ ಹವಾಲ್ದಾರ ಮಾತನಾಡಿ, ಶ್ರೀ ರಂಗಲಿಂಗೇಶ್ವರರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಮಾಡಿ ಅವಧೂತ ಹಾಗೂ ಸದ್ಗುರುಗಳಾಗಿ ನಾಡಿಗೆ ಬೆಳಕು ನೀಡಿದ್ದಾರೆ ಎಂದು ಬಣ್ಣಿಸಿದರು.

ತಮ್ಮ ಗುರುವನ್ನು ಅರಸಿ ನಡೆಸಿದ ಪ್ರಯತ್ನ, ಗುರುಗಳ ಆೆಯಂತೆ ನಡೆದುಕೊಂಡ ರೀತಿ ಹಾಗೂ ಸದ್ಗುರು ಮಾರುತೇಶ್ವರರ ಅಚ್ಚುಮೆಚ್ಚಿನ ಶಿಷ್ಯರಾಗಿ ಕೂಡಲೂರು ಬಸವಲಿಂಗೇಶ್ವರರ ಪರಂಪರೆ ಮುಂದುವರಿಸಿಕೊಂಡು ಬಂದ ವಿಚಾರಗಳ ಮೇಲೆ ಬೆಳಕು ಚೆಲ್ಲಿದ ಅವರು, ಅವಮಾನ ಮತ್ತು ಸನ್ಮಾನಗಳಿಗೆ ಹಿಗ್ಗದೆ-ಕುಗ್ಗದೆ ಆಡಂಬರದಿಂದ ದೂರವಿದ್ದು ಪ್ರಪಂಚ ಮತ್ತು ಪಾರಮಾರ್ಥಿಕ ಬದುಕು ಸಮನ್ವಯಗೊಳಿಸಿದ ಶ್ರೇಷ್ಠ ಶರಣರು. ಅವರು ರಚಿಸಿರುವ ಜ್ಞಾನ ಪ್ರಕಾಶ, ಕೈವಲ್ಯ ರತ್ನ ಹಾಗೂ ಚಿದ್ಘನ ಜ್ಯೋತಿ ಕೃತಿಗಳು ಆಧ್ಯಾತ್ಮಿಕ ಲೋಕದ ಪ್ರಮುಖ ಗ್ರಂಥಗಳಾಗಿವೆ. ಅವುಗಳ ಓದು ಮತ್ತು ಚರ್ಚೆ ನಿರಂತರ ನಡೆಯಬೇಕು ಎಂದರು.

ಶ್ರೀ ರಂಗಲಿಂಗೇಶ್ವರರ ತತ್ವಪದಗಳಲ್ಲಿನ ತಾತ್ವಿಕ ವಿಚಾರ ಕುರಿತು ಹಿರಿಯ ಸಾಹಿತಿ ಡಾ.ಗೋವಿಂದರಾಜ ಆಲ್ದಾಳ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಡಾ.ರವೀಂದ್ರನಾಥ ಹೊಸ್ಮನಿ ಅಧ್ಯತೆ ವಹಿಸಿದ್ದರು. ಸಿದ್ದಲಿಂಗಯ್ಯ ಗಣಚಾರಿ, ಅಶೋಕ ಮಲ್ಲಾಬಾದಿ, ಶಿವಣ್ಣ ಇಜೇರಿ, ಅಡಿವೆಪ್ಪ ಜಾಕಾ, ಶೇಖರ ದೊರೆ, ಮರೆಪ್ಪ ಪ್ಯಾಟಿ, ಯಲ್ಲಪ್ಪ ಹಳಕಟ್ಟಿ, ಮಲ್ಲಣ್ಣ ಹೊಸ್ಮನಿ, ರತಾ ಅರವಿಂದರೆಡ್ಡಿ, ಡಾ.ನಾಗರಾಜ ದೊರೆ, ಡಾ.ದೇವೇಂದ್ರಪ್ಪ ಹಡಪದ, ಮಹೇಶ ಪತ್ತಾರ, ಶರಣಬಸವ ಬಿರಾದಾರ ಇತರರಿದ್ದರು. ಸುರೇಶಬಾಬು ಅರುಣಿ ನಿರೂಪಣೆ ಮಾಡಿದರು. ಹಣಮಂತ್ರಾಯ ಗುರಿಕಾರ ಸ್ವಾಗತಿಸಿದರು. ರಾಜೇಶ್ವರಿ ವಂದಿಸಿದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಮಾನವೀಯ ಸಂದೇಶ ಅಡಕ

ಶ್ರೀ ರಂಗಲಿಂಗೇಶ್ವರರು ಸಮಾಜದ ಒಳಿತಿಗಾಗಿ ಅಪಾರ ಸೇವೆ ಸಲ್ಲಿಸಿದ ಮಹಾನ್​ ಸಂತ, ಶರಣ ಹಾಗೂ ಸತ್ಪುರುಷರು ಎಂದು ಹಿರಿಯ ಸಾಹಿತಿ ಡಾ.ಗೋವಿಂದರಾಜ ಆಲ್ದಾಳ ಬಣ್ಣಿಸಿದರು. ತಮ್ಮ ಜೀವನವನ್ನು ಭಕ್ತರು ಹಾಗೂ ಜನರ ಸೇವೆಗೆ ಮುಡಿಪಾಗಿಟ್ಟು ಆತ್ಮತೃಪ್ತಿ ಕಂಡುಕೊಂಡಿದ್ದ ಅವರ ತತ್ವಪದಗಳಲ್ಲಿ ಜೀವನ ಮೌಲ್ಯ, ಆಧ್ಯಾತ್ಮಿಕ ಚಿಂತನೆ, ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಸಂದೇಶಗಳು ಅಡಕವಾಗಿವೆ. ಅವರ ಜೀವನ, ಸಾಧನೆ ಹಾಗೂ ಸಮಾಜ ಸೇವೆ ಕುರಿತು ಇನ್ನಷ್ಟು ಚರಿತ್ರೆ ಮತ್ತು ಮಾಹಿತಿ ಸಂಗ್ರಹಿಸಿ ದಾಖಲಿಸುವ ಅಗತ್ಯವಿದೆ ಎಂದರು.