ಸುರಪುರ: ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಸುರಪುರದ ದಿ.ಎ.ಕೃಷ್ಣ ಋಷಿಕವಿಯಾಗಿದ್ದರು ಎಂದು ಮಕ್ಕಳ ಹಿರಿಯ ಸಾಹಿತಿ ಎ.ಕೆ. ರಾಮೇಶ್ವರ ಸ್ಮರಿಸಿದರು.
ಗರುಡಾದ್ರಿ ಕಲಾ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಟಕ ಹಾಗೂ ಅರುಣ ಪ್ರಕಾಶನ ಸಹಯೋಗದಡಿ ಭಾನುವಾರ ಏರ್ಪಡಿಸಿದ್ದ ಸಾಹಿತಿ ಎ.ಕಮಲಾಕರ ವಿರಚಿತ ಪ್ರೇಮಾಲಾಪ ಗಜಲ್ ಸಂಕಲನ ಹಾಗೂ ಭಾವಸೆಲೆ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುರಪುರದ ಗುಡ್ಡಗಾಡು ಪರಿಸರ ಎ.ಕೃಷ್ಣ ಅವರ ಕಾವ್ಯಸೃಷ್ಟಿಗೆ ಪ್ರೇರಣೆ. ಭಾವಗೀತೆ, ಷಟ್ಪದಿ, ರಗಳೆ ಸೇರಿ ಹಲವು ಕಾವ್ಯ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ನಡೆಸಿದ್ದು ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.
ಉಪನ್ಯಾಸಕ ಶರಣಗೌಡ ಪಾಟೀಲ್ ಜೈನಾಪುರ ಅವರ ಭಾವಸೆಲೆ ಕವನ ಸಂಕಲನದಲ್ಲಿ ಪ್ರೀತಿ, ಪ್ರಕೃತಿ, ದೇಶಾಭಿಮಾನ, ನಾಡು-&ನುಡಿ, ಮಾನವೀಯ ಮೌಲ್ಯ ಹಾಗೂ ಸಾಮಾಜಿಕ ಕಾಳಜಿ ಅನಾವರಣಗೊಂಡಿವೆ ಎಂದರು.
ಖ್ಯಾತ ಅನುವಾದಕ ಬೋಡೆ ರಿಯಾಜ್ ಅಹ್ಮದ್ ಅವರು ಪ್ರೇಮಾಲಾಪ ಗಜಲ್ ಸಂಕಲನ ಪರಿಚಯಿಸಿ, 60 ಗಜಲ್ಗಳು ಪ್ರೇಮದ ವಿವಿಧ ಭಾವನೆ, ಜೀವನದ ಮೌಲ್ಯ ಹಾಗೂ ತಾಯಿ ಪ್ರೀತಿ ಸರಳ ಮತ್ತು ಸಂಭಾಷಣೆ ಶೈಲಿಯಲ್ಲಿ ಬರೆಯಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಸಾಪ ತಾಲೂಕು ಗೌರವಾಧ್ಯಕ್ಷ ರಾಜಾ ಮುಕುಂದ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಉಮೇಶಬಾಬು ಸಾಸಾಬಾಳ ಅವರು ಎ.ಕೃಷ್ಣ ಸುರಪುರ ಅವರ ಬದುಕು-ಬರಹ ಕುರಿತು ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಶರಣಬಸವ ಯಾಳವಾರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಕನಕಪ್ಪ ವಾಣಗೇರಾ ಆಶಯ ನುಡಿಗಳನ್ನಾಡಿದರು. ಶ್ರೀ ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಅರವಿಂದಕುಮಾರ, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ, ಕೃತಿಕಾರ ಎ.ಕಮಲಾಕರ, ಬೋರಮ್ಮ ಯಾಳವಾರ ಇತರರಿದ್ದರು. ಎಚ್.ರಾಠೋಡ ಸ್ವಾಗತಿಸಿದರು. ದೇವು ಹೆಬ್ಬಾಳ ನಿರೂಪಣೆ ಮಾಡಿ ವಂದಿಸಿದರು.