ಸುರಪುರ: ಇಲ್ಲಿ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ನಾಡಹಬ್ಬ ಉತ್ಸವ ನಾಲ್ಕು ದಶಕಗಳ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದು, ಮೈಸೂರು ದಸರಾ ಮಾದರಿಯಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ನಾಡಹಬ್ಬ ಉತ್ಸವ ಸಮಿತಿ ಉಪಾಧ್ಯಕ್ಷ ಕಿಶೋರಚಂದ ಜೈನ ಹೇಳಿದರು.
ನಗರದ ಗರುಡಾದ್ರಿ ಕಲಾ ಮಂದಿರದ ರಾಜಾ ಮದನಗೋಪಾಲ ನಾಯಕ ವೇದಿಕೆಯಲ್ಲಿ ಭಾನುವಾರ ಸಂಜೆ ನಡೆದ 40ನೇ ನಾಡಹಬ್ಬ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಂಸತಿಕ ರಾಯಭಾರಿ ಹಾಗೂ ಮಾಜಿ ಸಚಿವ ದಿ.ರಾಜಾ ಮದನಗೋಪಾಲ ನಾಯಕ ಅವರು ನಾಲ್ಕು ದಶಕಗಳ ಹಿಂದೆ ಆರಂಭಿಸಿದ ಈ ಉತ್ಸವ ಪ್ರಸ್ತುತ ನಾಡಹಬ್ಬ ಉತ್ಸವ ಸಮಿತಿ, ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಹಾಗೂ ಕನ್ನಡ ಸಾಹಿತ್ಯ ಸಂಘದಿಂದ ಆಯೋಜಿಸಲಾಗುತ್ತಿದೆ. ಅವರ ಸಹೋದರ ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ರಾಜಾ ಮುಕುಂದ ನಾಯಕ ಸೇರಿ ಸಮಿತಿ ಪದಾಧಿಕಾರಿಗಳು ಉತ್ಸವದ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.
ಮೈಸೂರು ದಸರಾ ಮಾದರಿಯ ಆನೆ&ಅಂಬಾರಿ ಮೆರವಣಿಗೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಉತ್ಸವಕ್ಕೆ ಮತ್ತಷ್ಟು ಮೆರಗು ನೀಡಲಾಗುತ್ತಿದೆ. ಸುರಪುರ ಹಾಗೂ ಕನ್ನಡ ನಾಡಿಗೆ ಸೇವೆ ಸಲ್ಲಿಸಿ ಕೀರ್ತಿ ತಂದ ಮಹನೀಯರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಬಾರಿ ಸುರಪುರ ರತ್ನ ಪ್ರಶಸ್ತಿ ಪ್ರದಾನ ಮಾಡುವ ಹೊಸ ಪರಂಪರೆಗೆ ಚಾಲನೆ ನೀಡಲಾಗಿದೆ. ಈ ಮೂಲಕ ಸಾಧಕರ ಕೊಡುಗೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ರಾಜಾ ಮುಕುಂದ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೌರವಾಧ್ಯಕ್ಷ ರಾಜಾ ಪಾಮ ನಾಯಕ ಉದ್ಘಾಟಿಸಿದರು. ಅರಸು ಮನೆತನದ ರಾಜಾ ಲಕ್ಷ್ಮೀನಾರಾಯಣ ನಾಯಕ, ಪ್ರಮುಖರಾದ ರಾಜಾ ಸೀತಾರಾಮ ನಾಯಕ, ರಾಜಾ ವಾಸುದೇವ ನಾಯಕ, ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯ ಅರವಿಂದ ಕುಮಾರ, ಕಾರ್ಯದರ್ಶಿ ಸುರೇಶ ಸಜ್ಜನ್, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ, ಜಯಲಲಿತಾ ಪಾಟೀಲ್, ಶಿವಲೀಲಾ ಮುರಾಳ ವೇದಿಕೆಯಲ್ಲಿದ್ದರು. ಪ್ರಕಾಶ ಅಂಗಡಿ ನಿರೂಪಿಸಿದರು. ಸವೋರ್ದಯ ಮತ್ತು ಲಕ್ಷ್ಮೀದೇವಿ ಜೇವರ್ಗಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮಾಜಿ ಶಾಸಕ ದಿ.ರಾಜಾ ಪಿಡ್ಡನಾಯಕ ಮತ್ತು ಮಾಜಿ ಸಂಸದ ದಿ.ರಾಜಾ ವೆಂಕಟಪ್ಪ ನಾಯಕ ಬ್ಯಾರಿಸ್ಟರ್ ಅವರಿಗೆ ಮರಣೋತ್ತರವಾಗಿ ಸುರಪುರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರ ಸಂಬಂಧಿಗಳು ಪ್ರಶಸ್ತಿ ಸ್ವೀಕರಿಸಿದರು. ಆನೆ-ಅಂಬಾರಿ ಮೆರವಣಿಗೆಗೆ ಸಹಕರಿಸಿದ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಕಾರ್ಯದರ್ಶಿ ಸುರೇಶ ಸಜ್ಜನ್, ಉತ್ಸವದ 9 ದಿನಗಳ ಅನ್ನದಾಸೋಹ ವ್ಯವಸ್ಥೆ ಮಾಡಿರುವ ಪ್ರಕಾಶ ಸಜ್ಜನ್ ಮತ್ತು ಮೆರವಣಿಗೆಗೆ ಕುದುರೆ ಒದಗಿಸಿದ ಚಂದ್ರಶೇಖರ ದಂಡಿನ್ ಅವರನ್ನು ಸನ್ಮಾನಿಸಲಾಯಿತು.