ಶಹಾಪುರ: ಕಲಬುರಗಿ ನಗರದ ಹೈಕೋರ್ಟ್ ವೃತ್ತದ ಬಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆ ತೆರವುಗೊಳಿಸಿದನ್ನು ಖಂಡಿಸಿ ಮತ್ತು 10ದಿನಗಳ ಒಳಗಾಗಿ ಪುನಃ ಅಲ್ಲಿಯೇ ಸ್ಥಾಪಿಸುವಂತೆ ಆಗ್ರಹಿಸಿ ನಗರದಲ್ಲಿ ಕುರುಬ ಸಮುದಾಯ, ಸಂಗೊಳ್ಳಿ ರಾಯಣ್ಣ ಯುವಕ ಸಂಘ, ಸಿದ್ದರಾಮಯ್ಯ ಅಭಿಮಾನಿಗಳ ಬಳಗ ಮತ್ತು ದಲಿತ ಸಮುದಾಯ ಸೇರಿ ವಿವಿಧ ಸಮುದಾಯಗಳ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಸಿಬಿ ಕಮಾನ್ನಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಸಿದ್ದರಾಮಯ್ಯ ಅವರ ಪ್ರತಿಮೆ ಪುನಃ ಪ್ರತಿಷ್ಠಾಪಿಸಬೇಕು ಎಂದು ಆಗ್ರಹಿಸಿ, ಕಲಬುರಗಿ ಮಹಾನಗರ ಪಾಲಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧವೂ ಘೋಷಣೆ ಕೂಗಿ, ಪ್ರತಿಮೆ ತೆರವು ಪ್ರಕರಣದಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ಕೂಡಲೇ ಮರು ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿದರು. ಹೈಕೋರ್ಟ್ ವೃತ್ತದಲ್ಲಿಯೇ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಸ್ಥಾಪಿಸುವಂತೆ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ವಿವಿಧ ಸಂಘಟನೆಗಳ ಅಧ್ಯಕ್ಷ, ಪದಾಧಿಕಾರಿಗಳು, ಎರಡು ಸಲ ಸಿಎಂ ಆಗಿ ಕೆಲಸ ಮಾಡಿರುವ ಸಿದ್ದರಾಮಯ್ಯ ಅವರು, ಹಿಂದುಳಿದವರು, ಶೋಷಿತರು ಹಾಗೂ ದುರ್ಬಲ ವರ್ಗಗಳ ಪರವಾಗಿ ಹಲವು ಯೋಜನೆ ಜಾರಿಗೆ ತಂದಿದ್ದಾರೆ. ರಾಜ್ಯಕ್ಕೆ ಅವರ ಕೊಡುಗೆ ಅಪಾವರವಾಗಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸೇರಿ ಹಲವು ಕ್ರಮಗಳ ಮೂಲಕ ಹಿಂದುಳಿದ ವರ್ಗಗಳ ವಿಚಾರಗಳನ್ನು ಮುನ್ನೆಲೆಗೆ ತಂದಿದ್ದಾರೆ. ಇಂತಹ ನಾಯಕನ ಪ್ರತಿಮೆ ತೆರವುಗೊಳಿಸಿರುವುದು ಬೇಸರದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿ ಜಿಲ್ಲೆಯ ಶಾಸಕರು, ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಹಕಾರ ನೀಡಿ ಅದೇ ಸ್ಥಳದಲ್ಲಿ ಸಿದ್ದರಾಮಯ್ಯ ಅವರ ಪ್ರತಿಮೆ ಪುನಃ ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿದರು. ಪ್ರತಿಮೆ ತೆರವು ವಿಚಾರದಲ್ಲಿ ಸರ್ಕಾರ ಮೌನ ವಹಿಸದೆ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಹಾಗೊಂದು ವೇಳೆ ನಿರ್ಲಕ್ಷವಹಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯ ಅವರು ಹೋರಾಟದ ಮೂಲಕ ರಾಜಕೀಯವಾಗಿ ಬೆಳೆದ ನಾಯಕರಾಗಿದ್ದು, ಅವರ ಪ್ರತಿಮೆ ತೆರವುಗೊಳಿಸಿರುವುದು ಹಿಂದುಳಿದ ವರ್ಗಗಳ ಜನರಿಗೆ ನೊವುಂಟು ಮಾಡಿದೆ. ಸಮುದಾಯವನ್ನು ಕಡೆಗಣಿಸಿದರೆ ಮುಂದಿನ ಚುನಾವಣೆಯಲ್ಲಿ ರಾಜಕೀಯವಾಗಿ ಉತ್ತರ ನೀಡಬೇಕಾಗುತ್ತದೆ. ಹೀಗಾಗಿ ಕೂಡಲೇ 10ದಿನಗಳ ಒಳಗಾಗಿ ಪ್ರತಿಮೆ ಸ್ಥಾಪಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಕುರಿ ಮಹಾಮಂಡಳಿ ನಿರ್ದೇಶಕ ಶಾಂತಗೌಡ ನಾಗನಟಗಿ, ಕುರುಬರ ಸಂದ ಜಿಲ್ಲಾಧ್ಯ ಮಲ್ಲಣ್ಣ ಐಕೂರು, ತಾಲೂಕು ಅಧ್ಯ ಯಲ್ಲಪ್ಪ ನರಿ, ಮುಖಂಡರಾದ ರವಿ ರಾಜಾಪುರ, ಬಲಭೀಮ ಮಡ್ನಾಳ, ಶರಬಣ್ಣ ರಸ್ತಾಪುರ, ಮುನಿಯಪ್ಪಗೌಡ ನಾಗನಟಗಿ, ಶಾಂತು ಪಾಟೀಲ್, ಮಲ್ಲನಗೌಡ ತಿಪ್ಪನಟಗಿ, ಸಿದ್ದಪ್ಪ ಕನ್ಯಕೋಳೂರು, ದೇವೇಂದ್ರಪ್ಪ ಮೇಟಿ, ಸೀನು ನಾಸಿ ಸೇರಿ ಅನೇಕರು ಭಾಗವಹಿಸಿದ್ದರು.