ಸುರಪುರನ ಪಬ್ಲಿಕ್​ ರಿಕ್ರಿಯೇಷನ್​ ಕ್ಲಬ್​ನಲ್ಲಿ ಗುರುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕ್ಲಬ್​ನ ಕಾರ್ಯದರ್ಶಿ ಸುರೇಶ ಸಜ್ಜನ್​ ಅವರು 40ನೇ ನಾಡಹಬ್ಬ ಉತ್ಸವದ ಆಮಂತ್ರಣ ಪೂಜೆ ನೆರವೇರಿಸಿದರು. ಉತ್ಸವ ಸಮಿತಿ ಅಧ್ಯಕ್ಷ ರಾಜಾ ಮುಕುಂದ ನಾಯಕ ಇತರರಿದ್ದರು. 
ಯಾದಗಿರಿ

ನಾಡಹಬ್ಬ ಉತ್ಸವಕ್ಕೆ 11ರಂದು ಚಾಲನೆ

ಸುರಪುರ: ಇಲ್ಲಿನ ಕನ್ನಡ ಸಾಹಿತ್ಯ ಸಂಘ ಹಾಗೂ ಪಬ್ಲಿಕ್​ ರಿಕ್ರಿಯೇಷನ್​ ಕ್ಲಬ್​ನ ಜಂಟಿ ಆಶ್ರಯದಲ್ಲಿ 40ನೇ ನಾಡಹಬ್ಬ ಉತ್ಸವವನ್ನು ಅ.11ರಿಂದ 19ರವರೆಗೆ ಗರುಡಾದ್ರಿ ಕಲಾ ಮಂದಿರದಲ್ಲಿ ಆಯೋಜಿಸಲಾಗಿದ್ದು, ಮೈಸೂರು ದಸರಾ ಮಾದರಿಯಲ್ಲಿ ಆನೆ-ಅಂಬಾರಿ ಮೆರವಣಿಗೆ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಬ್ಲಿಕ್​ ರಿಕ್ರಿಯೇಷನ್​ ಕ್ಲಬ್​ನ ಕಾರ್ಯದರ್ಶಿ ಸುರೇಶ ಸಜ್ಜನ್​ ತಿಳಿಸಿದರು.

ನಗರದ ಪಬ್ಲಿಕ್​ ರಿಕ್ರಿಯೇಷನ್​ ಕ್ಲಬ್​ನಲ್ಲಿ ಗುರುವಾರ ನಾಡಹಬ್ಬ ಉತ್ಸವದ ಆಮಂತ್ರಣ ಪೂಜೆ ನೆರವೇರಿಸಿ ಮಾತನಾಡಿದ ಅವರು, ಅ.11ರಂದು ಸಂಜೆ 4ರವರೆಗೆ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ಆನೆ&ಅಂಬಾರಿ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಅಂಬಾರಿಯಲ್ಲಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಿ ಶೋಭಾಯಾತ್ರೆ ನಡೆಸಲಾಗುವುದು. ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ದೇವಿಗೆ ಪುಷ್ಪಾರ್ಚನೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಲಿದ್ದು, ಶಾಸಕ ರಾಜಾ ವೇಣುಗೋಪಾಲ ನಾಯಕ ಪಾಲ್ಗೊಳ್ಳಿದ್ದಾರೆ ಎಂದರು.

ಗಟ್ಟಿಮೇಳ, ಕೋಲಾಟ, ಡೊಳ್ಳು ಕುಣಿತ ಸೇರಿ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಮಹಿಳೆಯರು ಕುಂಭ&ಕಳಸದೊಅದಿಗೆ ಪಾಲ್ಗೊಳ್ಳುವರು. ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ರಾಜಮಾರ್ಗದ ಮೂಲಕ ಗರುಡಾದ್ರಿ ಕಲಾ ಮಂದಿರವರೆಗೆ ಮೆರವಣಿಗೆ ಸಾಗಲಿದೆ. ನಗರವಾಸಿಗಳು ಮನೆಗಳ ಮುಂಭಾಗ ರಂಗೋಲಿ ಹಾಕಿ, ಪುಷ್ಪವೃಷ್ಟಿ ಮಾಡುವ ಮೂಲಕ ಶೋಭಾಯಾತ್ರೆಗೆ ಅದ್ದೂರಿಯಾಗಿ ಸ್ವಾಗತಿಸಬೇಕು. ಬಳಿಕ ರಾತ್ರಿ 8ಕ್ಕೆ ಉತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಗೌರವಾಧ್ಯ ರಾಜಾ ಪಾಮ ನಾಯಕ ಉದ್ಘಾಟಿಸುವರು. ಪ್ರತಿ ದಿನ ವಿಶೇಷ ಉಪನ್ಯಾಸ, ಶಾಲಾ ಮಕ್ಕಳ ಸಾಂಸತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ರಾಜಾ ಮುಕುಂದ ನಾಯಕ ಮಾತನಾಡಿ, ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅವರು 1986ರಲ್ಲಿ ನಾಡಹಬ್ಬ ಉತ್ಸವ ಸಮಿತಿ ಸ್ಥಾಪಿಸಿರುತ್ತಾರೆ ಎಂದು ಅವರ ಕೊಡುಗೆ ಸ್ಮರಿಸಿದ ಅವರು, 40ನೇ ವರ್ಷದ ಉತ್ಸವವನ್ನು ಯಶಸ್ಸುಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದರು.

ಉದ್ಯಮಿ ಕಿಶೋರಚಂದ ಜೈನ ಮಾತನಾಡಿ, ಇಲ್ಲಿಯ ಇತಿಹಾಸ, ಪರಂಪರೆ, ಸಂಸತಿಯನ್ನು ಸ್ಮರಿಸುವ ಉದ್ದೇಶದಿಂದ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದರು. ಕ್ಲಬ್​ ಅಧ್ಯ ಅರವಿಂದ ಕುಮಾರ, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ, ನಾಡಹಬ್ಬ ಉತ್ಸವ ಸಮಿತಿ ಗೌರವಾಧ್ಯಕ್ಷ ರಾಜಾ ಪಾಮ ನಾಯಕ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಮಸ್ಕಿ ಸೇರಿ ಕ್ಲಬ್​ನ ಪದಾಧಿಕಾರಿಗಳು, ಸದಸ್ಯರಿದ್ದರು.

ಪ್ರಕಾಶ ಅಂಗಡಿ ನಿರೂಪಿಸಿದರು. ರಾಜಶೇಖರ ದೇಸಾಯಿ ವಂದಿಸಿದರು.

ಸುರಪುರ ರತ್ನ ಪ್ರಶಸ್ತಿ

ಮಾಜಿ ಶಾಸಕ ದಿ.ರಾಜಾ ಪಿಡ್ಡನಾಯಕ, ರಾಜಾ ವೆಂಕಟಪ್ಪನಾಯಕ, ಮಾಜಿ ಸಂಸದ ಬ್ಯಾರಿಸ್ಟರ್​ ರಾಜಾ ವೆಂಕಟಪ್ಪನಾಯಕ, ಮಾಜಿ ಸಚಿವ ರಾಜಾ ಮದನಗೋಪಾಲನಾಯಕ, ಎ.ಕೃಷ್ಣ ಸುರಪುರ, ದಿ.ವಿರುಪಾಪ್ಪಗೌಡ ರಾಜನಕೋಳೂರ ಅವರಿಗೆ ನಾಡಹಬ್ಬ ಉತ್ಸವದಲ್ಲಿ ಮರಣೋತ್ತರವಾಗಿ ಸುರಪುರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆದಾಯ ತೆರಿಗೆ ನಿವೃತ್ತ ಆಯುಕ್ತ ರತ್ನಾಕರ ನಾಯಕ, ಉದ್ಯಮಿ ಗ್ಯಾನಚಂದ್​ ಜೈನ, ಕ್ರೀಡಾಪಟು ಮರೆಪ್ಪ ಗುರಿಕಾರ, ಡಾ.ಇಂದರಚಂದ್​ ಜೈನ, ಶ್ರೀಹರಿರಾವ ಆದೋನಿ, ಶಾಂತಿ ಭಂಗ್ರೆ (ರೀಟಾ ಹಂಚಾಟೆ) ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ವಿಶೇಷ ಉಪನ್ಯಾಸ

ಅ.11ರಿಂದ ಅ.17 ರವರೆಗೆ ಪ್ರತಿದಿನ ರಾತ್ರಿ 8ಕ್ಕೆ ವಿಶೇಷ ಉಪನ್ಯಾಸ ನಡೆಯಲಿದೆ. ಅ.11ರಂದು ನಾಡಹಬ್ಬ ಉತ್ಸವದಲ್ಲಿ ಸಮ್ಮಿಳಿತಗೊಂಡ ಜಾನಪದ ಕಲೆ ಕುರಿತು ಶಿವಲೀಲಾ ಮುರಾಳ, 12ರಂದು ಸುರಪುರದ ಜನಪದ ಪರಂಪರೆ&ಕನಕಪ್ಪ ವಾಗಣಗೇರಿ, 13ರಂದು ಸಾಮಾಜಿಕ ಜೀವನದಲ್ಲಿ ಸ್ತಿಥ ಸಮಾನತೆ-ವಿಶ್ವಪೂರ್ವ ಸತ್ಯಂಪೇಟೆ, 14ರಂದು ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿ-ಶ್ರೀನಿವಾಸ ಜಾಲವಾದಿ, 15ರಂದು ಸಗರನಾಡಿನ ಮಹಿಳಾ ಸಾಧಕರು&ಜ್ಯೋತಿಲತಾ ತಡಿಬಿಡಿಮಠ, 16ಕ್ಕೆ ಸಗರನಾಡಿನ ಚಂದಿಮರಸ&ಡಾ.ಡಿ.ಎನ್​.ಪಾಟೀಲ್​ ಕರಡಕಲ್​, 17ರಂದು ಸಗರನಾಡಿನ ಶರಣರು ಕುರಿತು ಪಾರ್ವತಿ ದೇಸಾಯಿ ಬೂದೂರು ವಿಶೇಷ ಉಪನ್ಯಾಸ ನೀಡಲಿದ್ದಾರೆ.