ಯಾದಗಿರಿ ನಗರದಲ್ಲಿರುವ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರ ಧರಣಿಯಲ್ಲಿ ಹಣಮಂತ ಶಹಾಪೂರಕರ್​, ಸಂಗೀತಾ ಹಪ್ಪಳ, ರೇಣುಕಾ ಸರಡಗಿ ಇತರರಿದ್ದರು. 
ಯಾದಗಿರಿ

ಸ್ಲಂ ನಿವಾಸಿಗಳ ಧರಣಿ ಆರಂಭ

ಯಾದಗಿರಿ: ನಗರದಲ್ಲಿರುವ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವಂತೆ ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಟನೆ ನೇತೃತ್ವದಲ್ಲಿ ಮಂಗಳವಾರದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರ ಧರಣಿ ಆರಂಭವಾಗಿದೆ.

ಸ್ಲಂ ಜನಾಂದೋಲನ ಕರ್ನಾಟಕದ ಜಿಲ್ಲಾಧ್ಯ ಹಣಮಂತ ಶಹಾಪೂರಕರ್​, ಸಾವಿತ್ರಿಬಾಯಿ ಫುಲೆ ಮಹಿಳಾ ಸಂಟನೆ ಜಿಲ್ಲಾ ಸಂಚಾಲಕಿ ಸಂಗೀತಾ ಹಪ್ಪಳ, ಜಿಲ್ಲಾ ಸಂಟನಾ ಕಾರ್ಯದರ್ಶಿ ರೇಣುಕಾ ಸರಡಗಿ ನೇತೃತ್ವದಲ್ಲಿ ನೂರಾರು ಜನರು ಸೇರಿ ಬೇಡಿಕೆಗೆ ಆಗ್ರಹಿಸಿದರು.

ಈ ವೇಳೆ ಮಾತನಾಡಿ ಪದಾಧಿಕಾರಿಗಳು, ನಗರದ ನಿವೇಶನ ರಹಿತರ ಸಮಸ್ಯೆಯನ್ನು 2017ರಿಂದ ಜಿಲ್ಲಾಡಳಿತದ ಗಮನಕ್ಕೆ ತರಲಾಗುತ್ತಿದೆ. 2020ರ ಜ.29ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ವೇಳೆ ಮುಂಡರಗಿಯಲ್ಲಿರುವ ಸರ್ಕಾರಿ ಜಾಗವನ್ನು ತೋರಿಸಿ ಫಲಾನುಭವಿಗಳಿಗೆ ನಿವೇಶನ ನೀಡುವುದಾಗಿ ಜಿಲ್ಲಾಡಳಿತ ಭರವಸೆ ನೀಡಿತ್ತು.

ಬಳಿಕ ಕೋವಿಡ್​ ಕಾರಣ ನೀಡಿ ಪ್ರಕ್ರಿಯೆ ಸ್ಥಗಿತಗೊಳಸಿದೆ. ಆದರೆ ಇವತ್ತಿಗೂ ಮತ್ತೆ ಚಾಲನೆ ನೀಡಿ ಬಡವರಿಗೆ ನಿವೇಶನ ನೀಡುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು. 2025ರ ಡಿ.5ರಂದು ಹಾಗೂ 2026ರ ಜೂ.10ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಲವು ವರ್ಷಗಳಿಂದ ಮನವಿ, ಪ್ರತಿಭಟನೆ ನಡೆಸಿದರೂ ಜಿಲ್ಲಾಡಳಿತದಿಂದ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಈಗ ನಿರಂತರ ಧರಣಿಗೆ ಮುಂದಾಗಿದ್ದೇವೆ ಎಂದರು.

ನಗರದ ಅರ್ಹ ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡುವವರೆಗೆ ಧರಣಿ ಮುಂದುವರಿಸಲಾಗುವುದು. ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನಿರಂತರ ಧರಣಿಯಲ್ಲಿ 200ಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಮಂಗಳವಾರ ಸಂಜೆಯವರೆಗೂ ಜಿಲ್ಲಾಡಳಿತದ ಪರವಾಗಿ ಯಾರೊಬ್ಬರು ಬಂದು ಇವರನ್ನು ಮಾತಾಡಿಸಿಲ್ಲ ಮತ್ತು ಬೇಡಿಕೆ ಈಡೆರಿಕೆಗೆ ಭರವಸೆ ನೀಡಿಲ್ಲ ಎಂದು ರೇಣುಕಾ ಸರಡಗಿ ತಿಳಿಸಿದ್ದಾರೆ. ಧರಣಿಯಲ್ಲಿ ಈರಮ್ಮ ಕೋಳೂರ, ಯಂಕಮ್ಮ ಮಾಳಿಕೇರಿ, ಶಂಕ್ರಮ್ಮ ಕೊಟಿಮನಿ, ಸಂಗೀತಾ ಹರಿಕೇರಿ, ನಿರ್ಮಲಾ ಸುಂಗಲಕರ್​, ಬಾಬುಮಿಯಾ ಇತರರಿದ್ದರು.

ಬಡವರೊಂದಿಗೆ ಜಿಲ್ಲಾಡಳಿತ ಚಲ್ಲಾಟ

2021ರ ಜ.18ರಂದು ಮತ್ತೆ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು. ಖಾಸಗಿ ಜಮೀನು ಖರೀದಿಸಿ ನಿವೇಶನ ನೀಡುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬಳಿಕ 2023ರ ಮಾ.2ರಿಂದ 15 ದಿನಗಳ ಕಾಲ ಅರ್ನಿದಿಷ್ಟ ಸತ್ಯಾಗ್ರಹ ನಡೆಸಿದಾಗ, ಚುನಾವಣೆ ನಂತರ ನಿವೇಶನ ರಹಿತರ ಸಮಸ್ಯೆ ಬಗೆಹರಿಸಿ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡುವುದಾಗಿ ಜಿಲ್ಲಾಧಿಕಾರಿಗಳು ಲಿಖಿತ ಭರವಸೆ ನೀಡಿದರೂ ಕ್ಯಾರೆ ಎನ್ನುತ್ತಿಲ್ಲ ಬದಲಿಗೆ ಬಡವರೊಂದಿಗೆ ಜಿಲ್ಲಾಡಳಿತ ಚೆಲ್ಲಾಟವಾಡುತ್ತಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.