ಯಾದಗಿರಿ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಬೇಸ್ಲೆಸ್ ಆರೋಪ ಮಾಡುತ್ತಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ವಾದ್ರಾ, ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾರ್ ದೇಶದ ಜನರಿಗೆ ಕ್ಷಮೆ ಕೇಳಬೇಕೆಂದು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ್ ಮತ್ತು ಆಯುಕ್ತರಾದ ಎಸ್.ಎಸ್.ಸಂಧು, ವಿವೇಕ್ ಜೋಶಿ ಅವರು ಎಸ್ಐಆರ್ ಸಂಬಂಧಿತ ಎಲ್ಲ ಆದೇಶಗಳನ್ನು ಸರ್ವಾನುಮತದಿಂದಲೇ ಹೊರಡಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದರೂ ಪ್ರಚಾರ ಮತ್ತು ಜನರ ದಾರಿ ತಪ್ಪಿಸಲು ಕಾಂಗ್ರೆಸಿಗರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ರಾಹುಲ್ ಗಾಂಧಿ ಅವರನ್ನು ಪ್ರಧಾನಿಯಾಗಿಸಲು ಕಾಂಗ್ರೆಸಿಗರು ಇಂತಹ ಬೇಸ್ಲೆಸ್ ಆರೋಪಗಳನ್ನು ಹೊರಿಸಿ ಲಾಂಚ್, ರಿಲಾಂಚ್ ಮಾಡಿಸಲು ಮುಂದಾಗಿದ್ದಾರೆ. ಇದು ಯಾವತ್ತೂ ತೆರೆ ಕಾಣದ ಸಿನಿಮಾದಂತಿದೆ ಎಂದು ಟಾಂಗ್ ನೀಡಿದ ಅವರು, ಈ ಹಿಂದೆ ದೇಶವಾಳಿದ ಕಾಂಗ್ರೆಸ್ನ ಅನೇಕರು ಅದರಲ್ಲೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಎಷ್ಟೆಲ್ಲ ಕೆಟ್ಟ ಸ್ಥಿತಿ ನಿರ್ಮಿಸಿ ಜನರಿಗೆ ತೊಂದರೆ ಕೊಟ್ಟಿಲ್ಲವೇ? ಅವರಷ್ಟು ತೊಂದರೆ ಕೊಟ್ಟವರು ಯಾರಿದ್ದಾರೆ ಹೇಳಿ? ಎಸ್ಐಆರ್ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶಕುಮಾರ್ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ ಎಂದರು.
ಇಡಿ ರಾಜ್ಯ ಬರದಿಂದ ತತ್ತರಿಸಿದ್ದು, ಪ್ರತಿ ಕುಟುಂಬದ ರೈತನಿಗೆ ಕೇವಲ 2500 ರೂ. ಪರಿಹಾರ ಘೋಷಿಸಿದ ಕ್ರಮ ಖಂಡನೀಯ. ಸರ್ಕಾರ ತಕ್ಷಣವೇ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ರೈತ ಎಕರೆ ಬಿತ್ತನೆಗೆ ಸುಮಾರು 50 ಸಾವಿರ ರೂ. ಖರ್ಚು ಮಾಡಿದ್ದಾನೆ. ಆದರೆ ನೀವು ಘೋಷಿಸಿದ ಹಣ ಉಪ್ಪಿನಕಾಯಿಗೂ ಸಾಕಾಗದು. ಹಿಂದೆ ಯಡಿಯೂರಪ್ಪ ಸಿಎಂ ಇದ್ದಾಗ ಎನ್ಡಿಆರ್ಎಫ್ ನಿಯಮದಂತೆಯೇ ಕೇಂದ್ರ ಸರ್ಕಾರ ಜತೆ ವಿವಿಧ ಬೆಳೆಗಳಿಗೆ ಹೆಕ್ಟೇರ್ಗೆ ತಲಾ 10 ಸಾವಿರ ರೂ.ಗಳಂತೆ 30 ಸಾವಿರ ರೂ. ಪರಿಹಾರ ನೀಡಿದ್ದರು. ಆದರೀಗ ಆರ್ಥಿಕ ದಿವಾಳಿಯಾಗಿರುವ ರಾಜ್ಯ ಸರ್ಕಾರ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ 2500 ರೂ. ಘೋಷಿಸಿದೆ ಎಂದು ರವಿಕುಮಾರ್ ಲೇವಡಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ. ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ರಾಜ್ಯ ಕಾರ್ಯಕಾರಿ ಸದಸ್ಯ ಮಹೇಶರಡ್ಡಿ ಮುದ್ನಾಳ್, ಮಾಜಿ ರಾಜ್ಯ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ, ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ದೇವೇಂದ್ರನಾಥ ನಾದ್, ಹಿರಿಯ ಮುಖಂಡ ವೆಂಕಟರಡ್ಡಿ ಅಬ್ಬೆತುಮಕೂರು, ಸಿದ್ದರಾಜರಡ್ಡಿ ಬಲಕಲ್, ಪರಶುರಾಮ ಕುರಕುಂದಾ, ದೇವರಾಜ ನಾಯಕ, ಲಿಂಗಪ್ಪ ಹತ್ತಿಮನಿ, ಚಂದ್ರ ಕಡೆಸೂರ, ಲಕ್ಷ್ಮೀಕಾಂತ ಪಾಟೀಲ್ ಇತರರಿದ್ದರು.
ಹಿಂದಿನ ಬಿಜೆಪಿ ಸರ್ಕಾರದ ಬಹುತೇಕ ಯೋಜನೆಗಳನ್ನು ಈ ಸರ್ಕಾರ ನಿಲ್ಲಿಸಿದೆ. ವಿಧವಾ ವೇತನ, ಪಿಂಚಣಿ ಹಣ ಸೇರಿ ಅನೇಕ ಯೋಜನೆ ಫಲಾನುಭವಿಗಳಿಗೆ ಕೋಟ್ಯಂತರ ರೂ. ಕೊಡುವುದನ್ನು ಬಾಕಿ ಉಳಿಸಿಕೊಂಡಿದೆ. ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಿದ ಬೆನ್ನಲ್ಲೇ ಆರ್ಥಿಕ ಇಲಾಖೆ ಹೊಸ ಯೋಜನೆಗಳನ್ನು ಘೋಷಣೆ ಮಾಡಬೇಡಿ, ರಾಜ್ಯದ ಆರ್ಥಿಕ ಸ್ಥಿತಿ ಸರಿಯಲ್ಲ ಎಂಬ ವರದಿ ಬಹಿರಂಗಗೊಳಿಸಿದೆ. ಇದೊಂದು ಆರ್ಥಿಕ ದಿವಾಳಿಯಾದ, ಜನವಿರೋಧ ಸರ್ಕಾರ. ಕೂಡಲೇ ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸಬೇಕೆಂದು ರವಿಕುಮಾರ್ ಒತ್ತಾಯಿಸಿದರು.
ಈಶಾನ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಅ.23ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಐದನೇ ಸಲ ಕಣಕ್ಕಿಳಿಯಲಿರುವ ಹಾಲಿ ಎಂಎಲ್ಸಿ ಶಶೀಲ್ ನಮೋಶಿ ಅವರಿಗೆ ಜಿಲ್ಲೆಯ ಶಿಕ್ಷಕರು ಬೆಂಬಲಿಸಬೇಕೆಂದು ಎಂಎಲ್ಸಿ ಡಾ.ಬಿ.ಜಿ. ಪಾಟೀಲ್ ಮನವಿ ಮಾಡಿದರು. ನಾಲ್ಕು ಸಲ ಗೆದ್ದಿರುವ ನಮೋಶಿ ಅತ್ಯಂತ ಕ್ರಿಯಾಶೀಲರಾಗಿ ಸದನದ ಒಳಗೂ-ಹೊರಗೂ ಶಿಕ್ಷಕರ ಸಮಸ್ಯೆಗಳಿಗಾಗಿ ಹೋರಾಡಿ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಈಗ ಮತ್ತೊಮ್ಮೆ ಕಣಕ್ಕಿಳಿಯಲಿದ್ದು, ಜಿಲ್ಲೆಯ ಶಿಕ್ಷಕರು ಬೆಂಬಲಿಸುವ ಮೂಲಕ ಭರ್ಜರಿ ಗೆಲುವು ತಂದುಕೊಡಬೇಕು ಎಂದು ಕೋರಿದರು.