ಯಾದಗಿರಿ: ಜಿಲ್ಲಾ ಕೇಂದ್ರದ ಕೆಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದ್ದರೆ, ಹಲವೆಡೆ ಬಳಕೆಗೂ ಹೆಚ್ಚು ನೀರು ರಸ್ತೆಗೆ ಹರಿಯುತ್ತಿದೆ. ಈ ಎರಡರ ನಡುವೆ ನೀರು ಸರಬರಾಜಿನ ಹೊಣೆ ಹೊತ್ತಿರುವ ನಗರಸಭೆ ಮಾತ್ರ ಗೊಂದಲಕ್ಕೆ ಸಿಲುಕಿದೆ.
ಮಳೆಯಿಲ್ಲದೆ ಅಂತರ್ಜಲ ಕುಸಿದು ಬೋರ್ವೆಲ್ಗಳು ಒಣಗಿದ ಪರಿಣಾಮ ಅನೇಕ ಬಡಾವಣೆಗಳಲ್ಲಿ ನೀರಿನ ಅಭಾವ ಅತಿಯಾಗಿದೆ. ಈ ನಡುವೆ ಪ್ರತಿಷ್ಠಿತ ಬಡಾವಣೆಗಳಾದ ವಾರ್ಡ್ 26ರ ಲಕ್ಷ್ಮಿ ನಗರ ಮತ್ತು ಬಸವೇಶ್ವರ ನಗರಗಳಲ್ಲಿ ಅನೇಕ ದಿನಗಳಿಂದ ಕುಡಿಯುವ ಜೀವಜಲದ ಹಾಹಾಕಾರ ಎದ್ದಿದ್ದು, ನಿವಾಸಿಗಳು ಕೊಡ ನೀರಿಗೂ ಪರಿತಪಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ಬಡಾವಣೆ ಜನರು ಮನೆ ಖಾಲಿ ಮಾಡಿ ಬೇರೆಡೆ ಹೋಗುತ್ತಿದ್ದಾರೆ. ಈ ಬಡಾವಣೆಗಳಲ್ಲಿ ಬರ ಬರಲು ಮುಖ್ಯ ಕಾರಣ ಬಹುತೇಕ ಮನೆಗಳವರು ಮೋಟಾರ್ ಹಚ್ಚಿ ನೀರು ಪಡೆಯುತ್ತಿರುವುದು.
ಬೇಕಾದಷ್ಟು ಬದಲಿಗೆ ನಾಳೆ ನೀರಿನ ಕೊರತೆ ಆಗಬಾರದೆಂಬ ಕಾರಣದಿಂದಲೋ ಅಥವಾ ಬೇರೆಯವರಿಗೆ ಹೆಚ್ಚು ನೀರು ಸಿಗಬಾರದೆಂಬ ಮನಸ್ಥಿತಿಯಿಂದಲೋ ಕೆಲವರೇ ಸಂಗ್ರಹ ಮಾಡುತ್ತಿರುವುದರಿಂದ ಇತರರಿಗೆ ಜೀವಜಲದ ಕೊರತೆ ಕಾಡುತ್ತಿದೆ. ಮತ್ತೊಂದು ಕಾರಣವೆಂದರೆ ಲಕ್ಷ್ಮಿ ನಗರ ಮತ್ತು ಬಸವೇಶ್ವರ ನಗರಗಳಲ್ಲಿನ ಮನೆಗಳು ಸಹಜಕ್ಕಿಂತ ಸ್ವಲ್ಪ ಮೇಲ್ಮಟ್ಟದಲ್ಲಿ ಇರುವುದಿಂದ ಸಕಾಲಕ್ಕೆ ನೀರು ಪೂರೈಕೆಗೆ ತೊಂದರೆಯಾಗುತ್ತಿದೆ ಎಂಬುದು ನಗರಸಭೆ ಅಧಿಕಾರಿಗಳ ಅಂಬೋಣ.
ಇನ್ನು ವಿವಿಧ ಬಡಾವಣೆಗಳಲ್ಲಿ ನಿವಾಸಿಗಳು ನಲ್ಲಿ ನೀರು ಪಡೆದ ನಂತರ ಬಂದ್ ಮಾಡದಿರುವುದು ಮತ್ತು ಅನೇಕ ನಲ್ಲಿಗಳಿಗೆ ಬಂದ್ ಮಾಡುವ ವ್ಯವಸ್ಥೆ ಇಲ್ಲದೆ ಎರಡ್ಮೂರು ತಾಸು ನೀರು ರಸ್ತೆ ಹರಿದು ಬಿಡುತ್ತಾರೆ. ಇಲ್ಲವೋ ಸುಮ್ಮನೆ ರಸ್ತೆಗೆ ನೀರು ಹೊಡೆಯುವುದು, ವಾಹನಗಳನ್ನು ನಿತ್ಯವೂ ತೊಳೆಯುವುದು, ಮನೆ ಮುಂದೆ ನೀರು ಚೆಲ್ಲುವುದು ಹೀಗೆ ಮಾಡುವ ಮೂಲಕ ನಾಳೆಗೂ ಆಗುವಷ್ಟು ನೀರು ಇಂದೇ ಪೋಲು ಮಾಡುವುದು ನಿರಂತರ ನಡೆದಿದೆ.
ಗುರುಸಣಗಿ ಬ್ರಿಜ್ ಕಂ ಬ್ಯಾರೇಜ್ನ ಲೀಕೆಜ್ ನೀರು ಸಂಗ್ರಹಿಸಿ ಶುದ್ಧೀಕರಿಸಿ ನಗರದ ಜನರಿಗೆ ದಿನ ಬಿಟ್ಟು ದಿನ ಕುಡಿಯಲು ಸರಬರಾಜು ಮಾಡಲಾಗುತ್ತದೆ. 31 ವಾರ್ಡ್ ಜನರಿಗೆ 20 ಎಂಎಲ್ಡಿ ನೀರು ನಿತ್ಯ ಬೇಕು. ಆದರೆ ಸದ್ಯ 13 ಎಂಎಲ್ಡಿ ನೀರು ಕೊಡುವಷ್ಟು ಸಾಮರ್ಥವಿದ್ದುದರಿಂದ ದಿನ ಬಿಟ್ಟು ದಿನ ನೀರು ಪೂರೈಸಲಾಗುತ್ತಿದೆ. ಉಳಿದ 7 ಎಂಎಲ್ಡಿ ನೀರಿಗಾಗಿ ಅಮೃತ ಯೋಜನೆಯಡಿ ಕಾಮಗಾರಿ ನಡೆದಿದ್ದು,ಮುಗಿದ ನಂತರ ಬೇಕಾಗುವ 20 ಎಂಎಲ್ಡಿ ನೀರು ನೀಡಲು ಸಾಧ್ಯವಾಗಲಿದೆ.
ನಗರದಲ್ಲಿನ ಬೃಹತ್ ಟ್ಯಾಂಕ್ನಲ್ಲಿ 13 ಲಕ್ಷ ಲೀಟರ್ ಮತ್ತು ಕೋಳಿವಾಡ ಏರಿಯಾ ಮತ್ತು ಕಮಲಾ ನೆಹರು ಪಾರ್ಕ್ನ ತಳಮಟ್ಟದಲ್ಲಿ 27 ಲಕ್ಷ ಲೀಟರ್ ಮತ್ತು ಏಳು ಲಕ್ಷ ಲೀಟರ್ ನೀರು ನಿತ್ಯ ರಾತ್ರಿ ಸಂಗ್ರಹಿಸಿ ಬೆಳಗ್ಗಿನ ಜಾವ ಒಂದು ದಿನ 15 ವಾರ್ಡ್ ಹಾಗೂ ಮರುದಿನ ಉಳಿದ 16 ವಾರ್ಡ್ಗಳಿಗೆ ಒಂದು ದಿನ ಹೀಗೆ ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲಾಗುತ್ತಿದೆ.
ನಗರದ ಬಹುತೇಕ ವಾರ್ಡ್ನ ಹತ್ತಾರು ಬಡಾವಣೆಗಳಲ್ಲಿ ನಿತ್ಯವೂ ಲಕ್ಷಾಂತರ ಲೀಟರ್ ನೀರು ಪೋಲಾಗುತ್ತಿದೆ. ಬೇಕಾದಷ್ಟು ನೀರು ಪಡೆದು ನಲ್ಲಿ ಬಂದ್ ಮಾಡಿದರೆ ಮುಂದಿನ ಮನೆಯವರಿಗೆ ನೀರು ಸಿಗುತ್ತದೆ. ನಲ್ಲಿ ಬಂದ್ ಮಾಡಲ್ಲ, ಇನ್ನು ಅನೇಕರು ನಲ್ಲಿ ಬಂದ್ ಮಾಡುವಂತಹ ವ್ಯವಸ್ಥೆ ಮಾಡಿಕೊಂಡಿಲ್ಲ. ತಮ್ಮ ನೇತೃತ್ವದಲ್ಲಿ ಜೆಇ ಶಂಭುಲಿಂಗ ಪೂಜಾರಿ ಸಹಿತ 30 ಅಧಿಕ ನೌಕರರು ಎಲ್ಲ ವಾರ್ಡ್ಗಳಿಗೆ ತೆರಳಿ ಜೀವಜಲ ಪೋಲು ಮಾಡದಂತೆ ತಿಳಿವಳಿಕೆ ನೀಡಲಾಗುತ್ತಿದೆ.
ನಗರದ 31 ವಾರ್ಡ್ ಜನರು ಬಳಸುವ ನಲ್ಲಿ ನೀರಿನ 3 ಕೋಟಿ ರೂ. ತೆರಿಗೆ ಬಾಕಿ ಇದೆ. ಪ್ರತಿ ನಲ್ಲಿಗೆ ತಿಂಗಳಿಗೆ 120 ರೂ. ಕಟ್ಟಬೇಕು. ಪ್ರತಿ ತಿಂಗಳು ತಪ್ಪದೆ ಕಟ್ಟಿದರೆ ಹಣ ಸಂಗ್ರಹವಾಗಿ ಎಲ್ಲರಿಗೂ ನಿತ್ಯ ನೀರು ಕೊಡಬಹುದು. ಹೊರಗಡೆ ಒಂದೇ ಒಂದು ಲೀಟರ್ಗೆ 20 ರೂ. ಕೊಡುವ ಜನರು ತಿಂಗಳವರೆಗೆ ನೀರು ಪೂರೈಸುವ ನಗರಸಭೆಗೆ ಕೇವಲ 120 ರೂ. ಕಟ್ಟಲು ಹಿಂದೆ-ಮುಂದೆ ಮಾಡಿದರೆ ವ್ಯವಸ್ಥೆ ನಡೆಸುವುದು ಹೇಗೆ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ನಗರಸಭೆ ಅಧಿಕಾರಿ.
ನಗರದ ಬಹುತೇಕ ವಾರ್ಡ್ಗಳಲ್ಲಿ ಅನೇಕ ದಿನಗಳಿಂದ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ನಗರಸಭೆ ಅಧಿಕಾರಿಗಳು ಸಕಾಲಕ್ಕೆ ಎಲ್ಲ ಕಡೆ ನೀರು ಸರಬರಾಜು ಮಾಡಬೇಕು. ಪ್ರತಿಯೊಬ್ಬರಿಗೂ ನೀರು ಅವಶ್ಯಕ. ಇಂತಹ ವೇಳೆ ಐದಾರು ದಿನಗಳಿಗೊಮ್ಮೆ ನೀರು ಬಿಟ್ಟರೆ ಜನರು ಜೀವನ ಮಾಡುವುದು ಹೇಗೆ? ಇದನ್ನು ಗಂಭೀರ ಪರಿಗಣಿಸುವ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಸಾರ್ವಜನಿಕರೊಂದಿಗೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ.> ಮಹೇಶರಡ್ಡಿ ಮುದ್ನಾಳ್ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ