ಶಹಾಪುರ: ಇಡೀ ರಾಜ್ಯವೇ ಈ ಬಾರಿ ಬರದಿಂದ ತತ್ತರಿಸಿದ್ದು, ಸ್ಥಳಿಯ ರೈತರಿಗೆ ಕೃಷ್ಣಾ ನದಿ ನೀರು ದೊರೆಯುತ್ತಿಲ್ಲ ಇಂತಹ ಪರಿಸ್ಥಿತಿಯಲ್ಲಿ ರಾತ್ರಿ ವೇಳೆ ತೆಲಂಗಾಣಕ್ಕೆ ಕದ್ದುಮುಚ್ಚಿ ನೀರು ಬಿಟ್ಟಿದ್ದನ್ನು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಾಗನೂರ ಖಂಡಿಸಿದರು.
ಸಮೀಪದ ಭೀಮರಾಯನ ಗುಡಿಯ ಕೃಷ್ಣಾ ಜಲ ಭಾಗ್ಯ ನಿಗಮದ ಕಚೇರಿ ಎದುರು ಮಂಗಳವಾರ ರೈತರೊಂದಿಗೆ ಧರಣಿ ನಡೆಸಿ ಮಾತನಾಡಿದ ಅವರು, ಅಕ್ರಮವಾಗಿ ತೆಲಂಗಾಣಕ್ಕೆ 2 ಟಿಎಂಸಿ ನೀರು ಹರಿಸಿದ ಸರ್ಕಾರ ಈ ಭಾಗದ ರೈತರನ್ನು ಜೀವಂತ ಸಮಾಧಿ ಮಾಡಲು ಹೊರಟಿದ್ದು, ಇವರಿಗೆ ರೈತರ ಶಾಪ ತಟ್ಟದೆ ಇರಲಾರದು ದೂರಿದರು.
ಕೂಡಲೇ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ರೈತರ ಸಂಕಷ್ಟಕ್ಕೆ ಸ್ಪಂಧಿಸಬೇಕು. ಆದರೆ ಜನಪ್ರತಿನಿಧಿಗಳು ಸರ್ಕಾರದ ಕೈಗೊಂಬೆಯಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು, ಜಲಸಂಪನ್ಮೂಲ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಮುಖ್ಯಮಂತ್ರಿ ಮತ್ತು ತೆಲಂಗಾಣದ ಸಿಎಂ ಅವರ ನಡುವೆ ಕದ್ದುಮುಚ್ಚಿ ಮಾತುಕತೆ ನಡೆದಿದ್ದು, ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡುವ ಮೂಲಕ ಎರಡು ಟಿಎಂಸಿ ನೀರು ಕಳೆದ ಮೂರು ದಿನಗಳಿಂದ ಸತತವಾಗಿ ಹರಿಸಲಾಗಿದೆ ಎಂದು ಮಾಗನೂರ ದೂರಿದರು.
ಶಹಾಪುರ ತಾಲೂಕಿನ ಕೊನೇ ಭಾಗದ ರೈತರಿಗೆ ನೀರು ತಲುಪುವುದು ಕಷ್ಟವಿದೆ. ಇಂತಹ ಬರದ ಛಾಯೆ ನಡುವೆ ಅನವಾರ, ಬೊಮ್ಮನಹಳ್ಳಿ, ಸಾವೂರ ಹಯ್ಯಾಳ (ಕೆ), ಅಗಸ್ತಾಳ ಭಾಗದ ರೈತರ ಜಮೀನಿಗೆ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ. ಬರಗಾಲದ ಹೊಡೆತಕ್ಕೆ ಕುಡಿಯಲು ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಮತ್ತು ಅಧಿಕಾರಿಗಳು ಪಕ್ಕದ ರಾಜ್ಯದ ರೈತರ ಜಮೀನಿಗೆ ನಮ್ಮ ಹಕ್ಕಿನ ಕೃಷ್ಣಾ ನೀರು ಹರಿಸುತ್ತಾರೆ ಎಂದರೆ ಇದೆಂಥ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಿಯ ರೈತರ ಬದುಕಿಗೆ ಬೆಂಕಿ ಬಿದ್ದಿದ್ದು, ಪಕ್ಕದ ರಾಜ್ಯದ ರೈತರಿಗೆ 2 ಟಿಎಂಸಿ ನೀರು ಹರಿಸುತ್ತಿದೆ ಎಂದರೆ ಕೃಷ್ಣಾ ತೀರದ ಜನತೆಗೆ ಮಾಡಿದ ಮಹಾ ಮೋಸವಾಗಿದೆ. ಕೂಡಲೇ ಜಲ ಸಂಪನ್ಮೂಲ ಸಚಿವರು ಹಾಗೂ ಅಧಿಕಾರಿಗಳು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಸಂಗನಗೌಡ ಅನವಾರ, ಚಾಂದ್ ಪಟೇಲ್, ಬೋಳಾರಿ ಸೇರಿ ವಿವಿಧ ಗ್ರಾಮದ ರೈತರು ಇದ್ದರು.