ಗುರುಮಠಕಲ್​ ಕ್ಷೇತ್ರದ ವಿದ್ಯುತ್​ ಸಮಸ್ಯೆ ಕುರಿತು ಯಾದಗಿರಿಯಲ್ಲಿ ಸೋಮವಾರ ಕರೆದಿದ್ದ ಜೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ಶಾಸಕ ಶರಣಗೌಡ ಕಂದಕೂರ ಮಾತನಾಡಿದರು. ಜೆಡಿಎಸ್​ ಜಿಲ್ಲಾಧ್ಯಕ್ಷ ಸುಭಾಷಚಂದ್ರ ಕಟಕಟಿ, ಅಧಿಕಾರಿಗಳಾದ ಮಾರ್ಕಂಡೇಶ್ವರ, ಎ.ಟಿ.ರಾಠೋಡ್​, ದೇವು ಇತರರಿದ್ದರು. 
ಯಾದಗಿರಿ

ನಿತ್ಯ ಆರು ತಾಸು ಕರೆಂಟ್​ ಕೊಡದಿದ್ರೆ ನೋಡಿ

ಯಾದಗಿರಿ: ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರ ಬೆಳೆ ಉಳಿಸಲು ನಿತ್ಯ ಕನಿಷ್ಠ ಆರು ಗಂಟೆ ತ್ರೀ ಫೆಸ್​ ವಿದ್ಯುತ್​ ಅಡಚಣೆಯಿಲ್ಲದೆ ಪೂರೈಸಬೇಕು. ರ್ನಿಲಕ್ಷ ವಹಿಸಿದರೆ ನಾನು ಹೇಳೋದು&ಕೇಳೋದು ಮಾಡಲ್ಲ, ಮಾಡಬೇಕಾದದ್ದು ಮಾಡಿಯೇ ತೋರಿಸುವೆ. ಹೀಗೆ ಅಧಿಕಾರಿಗಳಿಗೆ ಖಡಕ್​ ವಾರ್ನಿಂಗ್​ ನೀಡಿದವರು ಶಾಸಕ ಶರಣಗೌಡ ಕಂದಕೂರ.

ವಿದ್ಯುತ್​ ವ್ಯತ್ಯಯ, ಟ್ರಾನ್ಸ್​ಫಾರ್ಮರ್​ ವೈಫಲ್ಯ, ಬದಲಿ ವ್ಯವಸ್ಥೆ ಕುರಿತು ಸೋಮವಾರ ಜೆಸ್ಕಾಂ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಗುರುಮಠಕಲ್​ ಮತಕ್ಷೇತ್ರದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮಳೆಯಿಲ್ಲದೆ ಕ್ಷೇತ್ರದ ರೈತರು ತೀವ್ರ ಕಷ್ಟದಲ್ಲಿದ್ದಾರೆ. ಇಂಥ ಸ್ಥಿತಿಯಲ್ಲಿ ನೀವು ಕರೆಂಟ್​ ವಿಷಯದಲ್ಲಿ ತೊಂದರೆ ಕೊಟ್ಟರೆ ಯಾರನ್ನು ಕೇಳಬೇಕು? ಅವರ ಗೋಳು ಕೇಳಲಾಗದೆ ನಿಮ್ಮ ಹತ್ತಿರ ಬಂದು ಇತ್ಯರ್ಥಕ್ಕೆ ಯತ್ನಿಸುತ್ತಿರುವುದಾಗಿ ಹೇಳಿದರು.

ಕುಡಿಯುವ ನೀರು ಮತ್ತು ಕರೆಂಟ್​ ಸಮಸ್ಯೆ ಅತಿಯಾಗಿ ಬಾಧಿಸುತ್ತಿದೆ. ವಿದ್ಯುತ್​ ವಿಷಯದಲ್ಲಿ ಅಧಿಕಾರಿಗಳೊಂದಿಗೆ ನಿತ್ಯ ಸಂಪರ್ಕದಲ್ಲಿದ್ದರೂ ಸಮಸ್ಯೆ ಬಗೆಹರಿಯುವ ಬದಲು ಉಲ್ಬಣಗೊಳ್ಳುತ್ತಿದೆ ಎಂದು ವಿಷಾದಿಸಿದ ಅವರು, ನಿಮ್ಮ ಸಮಸ್ಯೆ ನನಗೆ ಅರ್ಥ ಆಗುತ್ತದೆ. ಆದರೆ ಶಾಸಕನಾಗಿ ನಾನು ಜನರ ಬೇಡಿಕೆಗೆ ಸ್ಪಂದಿಸಲಬೇಕು. ಅಂತಲೇ ಅಧಿಕಾರಿಗಳು ನೆಪ ಹೇಳದೆ ಕೆಲಸ ಮಾಡಿಕೊಡಿ ಎಂದು ಸೂಚಿಸಿದರು.

ಕ್ಷೇತ್ರದಲ್ಲಿ ಕೆಲ ವರ್ಷಗಳಿಂದ ಟಿಸಿ ಸಮಸ್ಯೆ ಅತಿಯಾಗಿದೆ. ಕೆಟ್ಟರೆ ಸಕಾಲಕ್ಕೆ ದುರಸ್ತಿಯಾಗಿ ಕೂಡಿಸುವ ಕೆಲಸ ಆಗುತ್ತಿಲ್ಲ. 10&15ದಿನಗಳಾದರೂ ಸಮಸ್ಯೆ ನೀಗುತ್ತಿಲ್ಲ ಎಂದು ಶಾಸಕ ಕಂದಕೂರ, ಟಿಸಿಗಳ ದುರಸ್ತಿಗಾಗಿ ಗುರುಮಠಕಲ್​ನಲ್ಲೇ ಕೇಂದ್ರ ಸ್ಥಾಪಿಸಲಾಗುತ್ತಿದೆ. ಈಗಾಗಲೇ ಇದರ ಟೆಂಡರ್​ ಕರೆಯಲಾಗಿದೆ ಎಂದು ಹೇಳಿದರು.

ಜೆಡಿಎಸ್​ ಜಿಲ್ಲಾಧ್ಯಕ್ಷ ಸುಭಾಷಚಂದ್ರ ಕಟಕಟಿ, ಜಿಲ್ಲಾ ವಕ್ತಾರ ಮಲ್ಲಣ್ಣಗೌಡ ಕೌಳೂರು, ಅಧಿಕಾರಿಗಳಾದ ಮಾರ್ಕಂಡೇಶ್ವರ, ಎ.ಟಿ.ರಾಠೋಡ್​, ದೇವು ಇತರರಿದ್ದರು.

ಖಚಿತ ವಿದ್ಯುತ್​ ಪೂರೈಕೆ ಭರವಸೆ

ಗುರುಮಠಕಲ್​ ಕ್ಷೇತ್ರದಲ್ಲಿ ಏಳು ಗಂಟೆ ವಿದ್ಯುತ್​ ಪೂರೈಕೆಗೆ ಪ್ರಯತ್ನಿಸಲಾಗುತ್ತಿದೆ. ಕೆಲವೆಡೆ ಟ್ರಿಪ್ಪಿಂಗ್​ ಮತ್ತು ತಾಂತ್ರಿಕ ಕಾರಣದಿಂದ ವ್ಯತ್ಯಯ ಆಗುತ್ತಿರುವುದನ್ನು ಒಪ್ಪಿಕೊಂಡ ಜೆಸ್ಕಾಂ ಎಇ ರಾವೇಂದ್ರ, ಕನಿಷ್ಠ ಆರು ಗಂಟೆ ವಿದ್ಯುತ್​ ನೀಡುವುದಾಗಿ ಭರವಸೆ ನೀಡಿದರು. ಲೋಡ್​ ಹೆಚ್ಚಿರುವ ಕಡೆ ಹೊಸ ವಿದ್ಯುತ್​ ಉಪಕೇಂದ್ರಗಳ ಅಗತ್ಯವಿರುವುದನ್ನು ಮನಗಂಡು ಕೆಲ ಹೊಸ ಸಬ್​ ಸ್ಟೇಷನ್​ಗಳನ್ನು ಆರಂಭಿಸಿದ್ದರಿಂದ ಅವುಗಳ ವ್ಯಾಪ್ತಿಯಲ್ಲಿ ವಿದ್ಯುತ್​ ಪೂರೈಕೆ ಸುಧಾರಿಸಿದೆ ಎಂದು ತಿಳಿಸಿದರು. ಹಗಲು ವೇಳೆ ಸುಮಾರು 220 ಮೆಗಾವಾಟ್​ ಸೌರ ವಿದ್ಯುತ್​ ಉತ್ಪಾದನೆ ಆಗುತ್ತಿರುವುದರಿಂದ ಕೃಷಿ ಪಂಪ್​ಸೆಟ್​ಗಳಿಗೆ ವಿದ್ಯುತ್​ ನೀಡಲು ಹೆಚ್ಚಿನ ಸಮಸ್ಯೆ ಇಲ್ಲ. ಆದರೆ ಸಂಜೆ ಉತ್ಪಾದನೆ ಕಡಿಮೆ, ಬೇಡಿಕೆ ಹೆಚ್ಚಿರುತ್ತದೆ. ಜಲ ಮತ್ತು ಪವನ ವಿದ್ಯುತ್​ ಲಭ್ಯತೆ ಕಡಿಮೆ ಸಂದರ್ಭದಲ್ಲಿ ಥರ್ಮಲ್​ ವಿದ್ಯುತ್​ ಅವಲಂಬನೆ ಹೆಚ್ಚಾಗುತ್ತದೆ. ಇದರಿಂದ ಕೆಲವೊಮ್ಮೆ ಪೂರೈಕೆಯಲ್ಲಿ ಕೊರತೆ ಉಂಟಾಗುತ್ತಿದೆ ಎಂದು ರಾವೇಂದ್ರ ಸಭೆಯ ಗಮನಕ್ಕೆ ತಂದರು.

ರೈತರಿಂದ ಹಣ ಪಡೆದರೆ ಕೈಕಾಲು ಬೀಳುತ್ತವೆ

ವಿದ್ಯುತ್​ ಸಂಪರ್ಕ, ಟ್ರಾನ್ಸ್​ಫಾರ್ಮರ್​ ಅಳವಡಿಕೆ ಸೇರಿ ಇಲಾಖೆ ಕೆಲಸಗಳಿಗೆ ರೈತರಿಂದ ಹಣ ಪಡೆಯುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಶಾಸಕ ಶರಣಗೌಡ, ಸರ್ಕಾರ ಸಂಬಳ ನೀಡುತ್ತದೆ. ಆದರೂ ಹಣ ಪಡೆದು ಕೆಲಸ ಮಾಡಿದರೆ ದೇವರು ಮೆಚ್ಚಲ್ಲ. ಅಂತಹವರ ಕೈಕಾಲು ಬೀಳುತ್ತವೆ ಹುಷಾರಾಗಿರಿ ಎಂದು ಎಚ್ಚರಿಸಿದರು. ಕೆಲವರು ರೈತರಿಂದ ಫೋನ್​ ಪೇ ಮೂಲಕ ಹಣ ಪಡೆದ ಬಗ್ಗೆ ಖಚಿತ ಮಾಹಿತಿ ಇದೆ. ಅಂತಹವರ ವಿರುದ್ಧ ಕ್ರಮಕ್ಕೆ ಆಗ್ರಹಿಸಬಹುದಾದರೂ ಹಾಗೆ ಮಾಡುವುದಿಲ್ಲ ಎಂದ ಕಂದಕೂರ ಸುಮಾರು ಒಂದೂವರೆ ತಾಸಿನ ಸಭೆಯಲ್ಲಿ ಶಾಂತ ರೀತಿಯಿಂದ ಚರ್ಚಿಸಿದ್ದು ವಿಶೇಷವೆನಿಸಿತು.

ರೈತರು ಕರೆ ಮಾಡಿದಾಗ ಅಧಿಕಾರಿಗಳು ಸೌಜನ್ಯದಿಂದ ಮಾತಾಡಿ ಸಮಸ್ಯೆಯನ್ನು ತಾಳ್ಮೆಯಿಂದ ಕೇಳಿ. ಒರಟಾಗಿ ಮಾತನಾಡಿದರೆ ನಾನು ಸುಮ್ಮನಿರಲ್ಲ. ಕರೆಂಟ್​ ಬಂದು&ಹೋಗುವ ವಿಷಯದ ಬಗ್ಗೆ ಸರಿಯಾದ ಮಾಹಿತಿ ನೀಡಿ. ಮಾನವೀಯತೆಯಿಂದ ವರ್ತಿಸುವುದನ್ನು ಕಲಿತುಕೊಳ್ಳಿ.
> ಶರಣಗೌಡ ಕಂದಕೂರ ಗುರುಮಠಕಲ್​ ಶಾಸಕ