ಸುರಪುರ: ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ವಿಶ್ವ ವಿಖ್ಯಾತ ಬ್ರಹ್ಮೋತ್ಸವಕ್ಕೆ ಮಂಗಳವಾರ ಸುರಪುರ ಸಂಸ್ಥಾನದಿಂದ ಅಗ್ರಪೂಜೆ ಸಲ್ಲಿಸಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಸಂಸ್ಥಾನದ ಪರವಾಗಿ ರಾಜಪ್ರತಿನಿಧಿಯಾಗಿ ಸಂಸ್ಥಾನದ ಅಳಿಯ ವೇಣುಮಾಧವ ನಾಯಕ ಅವರು ರಾಜಪ್ರತಿನಿಧಿಯಾಗಿ ಭಾಗವಹಿಸಿದ್ದರು. ವೈಭವದ ರಥೋತ್ಸವ ವೇಳೆ ರಥದ ಮೇಲಿಂದ ಸುರಪುರಂ ಎಂದು ಘೋಷಣೆ ಮೊಳಗಿತು. ಆರತಿ ತಟ್ಟೆಯೊಂದಿಗೆ ಆಗಮಿಸಿದ ವೇಣುಮಾಧವ ನಾಯಕ ಅವರು ರಥಕ್ಕೆ ಪೂಜೆ ಸಲ್ಲಿಸಿ ಮಂಗಳಾರುತಿ ನೆರವೇರಿಸಿದರು.
ತಿರುಮಲ ದೇವಸ್ಥಾನದ ಅರ್ಚಕರು, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸುರಪುರ ಸಂಸ್ಥಾನದ ಅರ್ಚಕ ವೆಂಕಟೇಶ ದೇವರು ಸೇರಿ ಗಣ್ಯರು ಉಪಸ್ಥಿತರಿದ್ದರು. ಲಾಂತರ ಭಕ್ತರು ಪಾಲ್ಗೊಂಡಿದ್ದ ರಥೋತ್ಸವದಲ್ಲಿ ಸಂಸ್ಥಾನದ ಅಗ್ರಪೂಜೆ ವಿಶೇಷ ಗಮನಸೆಳೆಯಿತು.
ಸುರಪುರದ ವೇಣುಗೋಪಾಲಸ್ವಾಮಿ, ತಿರುಪತಿಯ ವೆಂಕಟೇಶ್ವರನ ಹೆಸರಿನಿಂದಲೂ ಕರೆಯಿಸಿಕೊಳ್ಳುತ್ತಾನೆ. ಇಲ್ಲಿ ಇಬ್ಬರು ಒಂದೇ ಎನ್ನಲಾಗುತ್ತದೆ. ಸುರಪುರ ಸಂಸ್ಥಾನದ ಅರಸರು ಗೋಪಾಲಸ್ವಾಮಿಯ ಪರಮಭಕ್ತರು. ವೆಂಕಟೇಶ್ವರಸ್ವಾಮಿ ಸುರಪುರ ಸಂಸ್ಥಾನದ ಅರಸರಿಗೆ ಕನಸಿನಲ್ಲಿ ದರ್ಶನ ನೀಡಿ, ನಿಮಗೆ ಸುರಪುರದಲ್ಲಿಯೇ ದರ್ಶನ ನೀಡುವುದಾಗಿ ತಿಳಿಸಿದ್ದರೆಂಬ ಪ್ರತಿತಿ ಇದೆ. ಈ ಹಿನ್ನೆಲೆಯಲ್ಲಿ ಅರಸರು ಸುರಪುರದಲ್ಲಿ ವೇಣುಗೋಪಾಲಸ್ವಾಮಿ ದೇವಸ್ಥಾನ ನಿರ್ಮಿಸಿ, ತಿರುಪತಿಯ ಪ್ರಮುಖ ಧಾರ್ಮಿಕ ಸಂಪ್ರದಾಯ ಇಲ್ಲಿಯೂ ಮುಂದುವರಿಸಿದರು. ಹೀಗಾಗಿ ತಿರುಪತಿ ಬಹ್ಮೋತ್ಸವಕ್ಕೆ ಸಂಸ್ಥಾನದ ಪರವಾಗಿ ರಾಜಪ್ರತಿನಿಧಿಯನ್ನು ಕಳಿಸುವ ಭಕ್ತಿ, ಪರಂಪರೆ ಇಂದಿಗೂ ಮುಂದುವರೆದಿದೆ.