ಯಾದಗಿರಿ ನಗರದ ವಿವಿಧ ಕೊಳಚೆ ಪ್ರದೇಶಗಳ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಕಲ್ಪಿಸುವಂತೆ ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ನಡೆಯುತ್ತಿದ್ದ ಧರಣಿ ಸ್ಥಳಕ್ಕೆ ಮಂಗಳವಾರ ಜಿಲ್ಲಾಧಿಕಾರಿ ರಾಹುಲ್​ ಪಾಂಡ್ವೆ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ವೇಳೆ ಸಂಘಟನೆ ಪದಾಧಿಕಾರಿಗಳಿದ್ದರು. 
ಯಾದಗಿರಿ

ಚುನಾವಣೆ ಬಳಿಕ ಅರ್ಹರಿಗೆ ನಿವೇಶನ

ಯಾದಗಿರಿ: ನಗರದ ವಿವಿಧ ಕೊಳಚೆ ಪ್ರದೇಶಗಳ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಕಲ್ಪಿಸುವಂತೆ ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ನಡೆಯುತ್ತಿರುವ 8ನೇ ದಿನದ ಧರಣಿ ಸ್ಥಳಕ್ಕೆ ಮಂಗಳವಾರ ಜಿಲ್ಲಾಧಿಕಾರಿ ರಾಹುಲ್​ ಪಾಂಡ್ವೆ ಭೇಟಿ ನೀಡಿ, ಲಿಖಿತ ಭರವಸೆ ನೀಡಿದ್ದರಿಂದ ನಮ್ಮ ಹೋರಾಟ ಹಿಂಪಡೆಯಲಾಗಿದೆ ಎಂದು ಸಂಘಟನೆ ಕಾರ್ಯದರ್ಶಿ ರೇಣುಕಾ ತಿಳಿಸಿದ್ದಾರೆ.

ಬೆಳಗ್ಗೆ ಹೋರಾಟಗಾರರೊಂದಿಗೆ ಜಿಲ್ಲಾಧಿಕಾರಿ ಅವರು ಮಾತನಾಡಿ ತೆರಳಿದ ನಂತರ ಸ್ಥಳಕ್ಕೆ ಆಗಮಿಸಿದ ಎಡಿಸಿ ರಮೇಶ ಕೋಲಾರ ಅವರು ಬೇಡಿಕೆಗಳ ಲಿಖಿತ ಭರವಸೆಯ ಪತ್ರವನ್ನು ನೀಡಿದ್ದಾರೆ.ನಿವೇಶನ ರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಸಂಬಂಧ ಜಿಲ್ಲಾಧಿಕಾರಿಗಳು ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆದಿದ್ದು, ಸರ್ಕಾರಿ ಜಮೀನು ಗುರುತಿಸುವುದು, ಜಮೀನಿನ ಸರ್ವೇ ನಡೆಸುವುದು ಹಾಗೂ ಅಲ್ಲಿ ರಚಿಸಬಹುದಾದ ನಿವೇಶನಗಳ ಪಟ್ಟಿ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ.

ಈ ಪ್ರಕ್ರಿಯೆಗೆ ಕಾಲಾವಕಾಶ ಅಗತ್ಯವಿದ್ದು, ರಾಜ್ಯ ವಿಧಾನ ಪರಿಷತ್​ ಚುನಾವಣೆ ತಕ್ಷಣ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಸಲ್ಲಿಸಿರುವ ನಿವೇಶನ ರಹಿತರ ಪಟ್ಟಿ ಪರಿಶೀಲಿಸಿ, ಅರ್ಹ ಕುಟುಂಬಗಳಿಗೆ ನಿವೇಶನ ಒದಗಿಸಲು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಸಂಘಟನೆ ಪದಾಧಿಕಾರಿಗಳು ಮತ್ತು ನೂರಾರು ಜನರು ಹೋರಾಟದಲ್ಲಿದ್ದರು.