ರಮೇಶ ಜಿಗಜಿಣಗಿ, ಸಂಸದ 
ಯಾದಗಿರಿ

ಆಲಮಟ್ಟಿ ಯಾದಗಿರಿ ರೈಲು ಮಾರ್ಗದ ಸರ್ವೆಗೆ ಅಸ್ತು, ಸಂಸದ ರಮೇಶ ಜಿಗಜಿಣಗಿ ಸಂತಸ ವ್ಯಕ್ತ

ಪ್ರಮುಖ ಮುಖ್ಯಾಂಶಗಳು

  • ಅನೇಕ ದಶಕಗಳ ಕನಸು ನನಸು
  • ಹೋರಾಟಗಾರರ ಬೇಡಿಕೆ ಈಡೇರಿಕೆ
  • 4500 ಕೋಟಿ ರೂ. ಮೊತ್ತದ ಯೋಜನೆ

ವಿಜಯಪುರ: ತಾಳಿಕೋಟೆ, ಯಾದಗೀರ ಸುತ್ತಮುತ್ತಲಿನ ಜನತೆಯ ಅನೇಕ ದಶಕಗಳ ಬೇಡಿಕೆಯಾಗಿರುವ ಆಲಮಟ್ಟಿ ಯಾದಗೀರ ರೈಲ್ವೇ ಮಾರ್ಗಕ್ಕೆ ಸಂಬಂಧಿಸಿದಂತೆ 4.5 ಕೋಟಿ ರೂ. ವೆಚ್ಚದಲ್ಲಿ ಸರ್ವೇ ಕಾರ್ಯ ಕೈಗೊಳ್ಳಲು ಟೆಂಡರ್ ಕರೆಯಲಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.

ಆಲಮಟ್ಟಿಯಿಂದ ಯಾದಗೀರಿ 162 ಕೀ.ಮೀ. ದೂರದ ರೈಲ್ವೇ ಮಾರ್ಗಕ್ಕೆ ಈಗ ಪ್ರಥಮ ಹಂತವಾಗಿ ಸರ್ವೇ ಕಾರ್ಯಕ್ಕೆ 4.5 ಕೋಟಿ ರೂ. ಮೊತ್ತಕ್ಕೆ ಟೆಂಡರ್ ಕರೆಯಲಾಗಿದೆ, ಇದು ಒಟ್ಟು 4500 ಕೋಟಿ ರೂ. ಮೊತ್ತದ ಯೋಜನೆಯಾಗಿದೆ ಎಂದು ಜಿಗಜಿಣಗಿ ಮಾಹಿತಿ ನೀಡಿದ್ದಾರೆ.
ಬ್ರಿಟಿಷರ ಕಾಲದಿಂದಲೂ ಈ ರೈಲ್ವೇ ಮಾರ್ಗದ ಬೇಡಿಕೆ ಇತ್ತು. ತಾಳಿಕೋಟೆ, ಯಾದಗೀರಿ ಸೇರಿ ಅನೇಕ ಭಾಗದ ಜನರು ಈ ರೈಲ್ವೇ ಮಾರ್ಗಕ್ಕೆ ಬೇಡಿಕೆ ಇರಿಸಿದ್ದರು, ಅನೇಕ ಹಂತದ ಹೋರಾಟ ಸಹ ನಡೆಸಿದ್ದರು. ಅನೇಕ ಗ್ರಾಮಗಳ ನಿವಾಸಿಗಳ ನಿಯೋಗ ಸಹ ನವದೆಹಲಿಗೆ ಬಂದಿತ್ತು. ನಾನು ಸ್ವತಃ ಕೇಂದ್ರ ರೈಲ್ವೇ ಸಚಿವರನ್ನು ಭೇಟಿ ಮಾಡಿಸಿದ್ದೆ, ಈಗ ಜನತೆಯ ಅನೇಕ ಹೋರಾಟ ಹಾಗೂ ನನ್ನ ಪ್ರಯತ್ನ ಫಲವಾಗಿ ಈಗ ಈ ಮಹತ್ವದ ಯೋಜನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಈಗ ಈ ಜಾಲದ ಸರ್ವೇ ಕಾರ್ಯದ 4.5 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಆ ಮೂಲಕ ಬಹುದಿನದ ಕನಸೊಂದು ನನಸಾಗುತ್ತಿದೆ ಎಂದು ಸಂಸದ ರಮೇಶ ಜಿಗಜಿಣಗಿ ಪ್ರಕಟಣೆ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.