ಯಾದಗಿರಿ: ವೈದ್ಯಕಿಯ ಚಿಕಿತ್ಸಾ ಪದ್ಧತಿಗಳಲ್ಲಿ ಇತ್ತೀಚೆಗೆ ಹೋಮಿಯೋಪತಿ ಚಿಕಿತ್ಸೆ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಾಗುತ್ತಿದೆ. ಇದಕ್ಕೆ ಬೇಕಾದ ಅಗತ್ಯ ಅನುಕೂಲ ಮಾಡಿಕೊಡಲಾಗುವುದು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.
ನಗರದ ಆಯುಷ್ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ಶುಕ್ರವಾರ ಆಯೋಜಿಸಿದ್ದ ವಿಶ್ವ ಹೋಮಿಯೋಪತಿ ದಿನ ಮತ್ತು ವೈದ್ಯರ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಲುಂಬಿನಿ ಉದ್ಯಾನವನ ಎದುರು 4 ಎಕರೆ ಹಾಗೂ ಮನಗನಾಳ ಹತ್ತಿರ 9 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ. ಬರುವ ದಿನಗಳಲ್ಲಿ 50 ಹಾಸಿಗೆ ಆಯುಷ್ ಜಿಲ್ಲಾಸ್ಪತ್ರೆ ನಿರ್ಮಾಣದತ್ತ ಗಮನಹರಿಸುವುದಾಗಿ ತಿಳಿಸಿದರು.
ಹೋಮಿಯೋಪತಿ ಚಿಕಿತ್ಸೆ ಹಾಗೂ ಔಷಧ ಸೇವನೆಯಿಂದ ಶರೀರದ ಮೇಲೆ ಯಾವುದೇ ಕೆಟ್ಟ ಪರಿಣಾಮ ಆಗುವುದಿಲ್ಲ, ನಿಧಾನವಾಗಿ ರೋಗ ನಿಮೂರ್ಲನೆ ಆಗುತ್ತದೆ. ಕಾರಣ ರೋಗಿಗಳು ತಾಳ್ಮೆ ವಹಿಸಬೇಕು ಎಂದು ಕೋರಿದರು.
ಹೋಮಿಯೋಪತಿ ಇಲಾಖೆ ಉಪನಿರ್ದೇಶಕ ಡಾ.ಪ್ರಸನ್ನ ಎಚ್.ಎಸ್. ಮಾತನಾಡಿ, ಜಿಲ್ಲೆಯಲ್ಲಿ 10 ಹೋಮಿಯೋಪತಿ ಚಿಕಿತ್ಸಾಲಯ ಕಾರ್ಯನಿರ್ವಹಿಸುತ್ತಿವೆ. ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರಲು ಇಲ್ಲಿನ ವೈದ್ಯರಿಗೆ ಅಗತ್ಯ ವೈದ್ಯಕಿಯ ಮಾಹಿತಿ ಸಿಗಲಿ ಎಂಬ ಆಶಯದೊಂದಿಗೆ ರಾಜ್ಯ ಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಆಸ್ಪತ್ರೆಗಳಿಗೆ ಸೂಕ್ತ ಔಷಧ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚೆಚ್ಚು ಜನರ ಸೇವೆ ಸಲ್ಲಿಸುವ ಚಿಂತನೆಯಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಅನುಷ್ಠಾನಗೊಳಿಸಲು ಯತ್ನಿಸುತ್ತಿರುವುದಾಗಿ ಹೇಳಿದರು.
ಧಾರವಾಡ ವೈದ್ಯಕಿಯ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಸತೀಶ ಜಿ.ಪಾಟೀಲ್ ಮಾತನಾಡಿ, ತಮ್ಮ ಸೇವಾ ಅವಧಿಯಲ್ಲಿ ಕೈಗೊಂಡ ಸಂಶೋಧನೆ ಹಾಗೂ ಚಿಕಿತ್ಸಾ ಪದ್ಧತಿಗಳನ್ನು ವಿವರಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ವಂದನಾ ಜೆ.ಗಾಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ವೈದ್ಯಾಧಿಕಾರಿಗಳಾದ ಡಾ.ಅಶ್ವಥ ನಾರಾಯಣ, ಡಾ.ಪ್ರಮೋದ ಕುಲಕರ್ಣಿ ಅತಿಥಿಗಳಾಗಿದ್ದರು. ಡಾ.ಪ್ರಕಾಶ ರಾಜಾಪುರ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಲ್ಲಿ ಕೈಗೊಂಡ ಹೋಮಿಯೋಪತಿ ಚಟುವಟಿಕೆಗಳನ್ನು ತಿಳಿಸಿದರು.
ಶಾಸಕ ತುನ್ನೂರ ಅವರು ಹೋಮಿಯೋಪತಿ ಕ್ಯಾಲೆಂಡರ್ ಮತ್ತು ಕೈಪಿಡಿ ಬಿಡುಗಡೆ ಮಾಡಿದರು. ಡಾ.ಮೀರಾ ಜೋಶಿ ಸ್ವಾಗತಿಸಿದರು. ಡಾ.ಸಂಗಮೇಶ ಕೆಂಭಾವಿ ನಿರೂಪಣೆ ಮಾಡಿ ವಂದಿಸಿದರು.