ಶಹಾಪುರದಲ್ಲಿ ಬುಧವಾರ ಹಮ್ಮಿಕೊಂಡ ಪೌರಕಾರ್ಮಿಕರ ದಿನ ಕಾರ್ಯಕ್ರಮದಲ್ಲಿ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ಎಇಇ ನಾನಾಸಾಹೇಬ್​ ಮಡಿವಾಳಕರ್​ ಅವರು ಪೌರಕಾರ್ಮಿಕರಿಗೆ ಸನ್ಮಾನಿಸಿದರು. ವ್ಯವಸ್ಥಾಪಕಿ ರತ್ನಾಬಾಯಿ, ಕೊಟೆರಪ್ಪ, ಶಿವಣ್ಣ, ಮಲ್ಲಪ್ಪ ಬಂಡಿ, ಬಾಲಕೃಷ್ಣ ಬಬಲಾದಿ ಇತರರಿದ್ದರು. 
ಯಾದಗಿರಿ

ಪೌರಕಾರ್ಮಿಕರು ಹೆತ್ತವರಿಗೆ ಸಮಾನ

ಶಹಾಪುರ: ಮುಖ್ಯರಸ್ತೆ, ಓಣಿ, ಗಲ್ಲಿ, ಚರಂಡಿ ಹೀಗೆ ಎಲ್ಲೆಂದರಲ್ಲಿ ಸ್ವಚ್ಛತೆ ಕೆಲಸ ಮಾಡುವ ಪೌರಕಾರ್ಮಿಕರು ಹೆತ್ತ ತಾಯಿ, ತಂದೆಗೆ ಸಮಾನ ಎಂದು ನಗರಸಭೆ ಪ್ರಭಾರಿ ಎಇಇ ನಾನಾಸಾಹೇಬ್​ ಮಡಿವಾಳಕರ್​ ಹೇಳಿದರು.

ನಗರಸಭೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ ನೂರಾರು ಕಾರ್ಮಿಕರು ಮಳೆ, ಚಳಿ, ಬಿಸಿಲು ಎನ್ನದೆ ಸ್ವಚ್ಛತಾ ಕೆಲಸದಲ್ಲಿ ನಿರತರಾಗುವ ಮೂಲಕ ಸಾರ್ವಜನಿಕರ ನೆಮ್ಮದಿ ಕಾಪಾಡುವ ಕೆಲಸ ಮಾಡುತ್ತಿದ್ದಾರೆ ಎಂದರು.

ಬಸವಣ್ಣನವರ ಕಾಲದ ಅಂದಿನ ಕಾಯಕ ನಿಷ್ಠೆ, ಪ್ರಾಮಾಣಿಕ ಸೇವೆ ಪೌರಕಾರ್ಮಿಕರಲ್ಲಿದೆ. ಅವರು ಒಂದೆರಡು ದಿನ ಕೆಲಸಕ್ಕೆ ಬರದಿದ್ದರೆ ಊರೆಲ್ಲ ಗಬ್ಬೆದ್ದು ನಾರುವ ಸ್ಥಿತಿ ಉಂಟಾಗಿರುತ್ತದೆ. ಆದರೆ ಅವರು ಹಾಗೆ ಮಾಡದೇ ನಗರದ ಹಿತ ಕಾಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಪರಿಸರ ಅಭಿಯಂತರ ಹರೀಶ ಸಜ್ಜನ ಮಾತನಾಡಿ, ಪೌರಕಾರ್ಮಿಕರಿಗೆ ಮೂಲಭೂತ ಸೌಲಭ್ಯ ನೀಡುವುದರ ಜತೆಗೆ ಅವರ ಆರೋಗ್ಯದ ಕಡೆ ಗಮನ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸೈಯದ್​ ಮುಸ್ತಾಪ ದರ್ಭಾನೆ, ವೆಂಕಟೇಶ ಆಲೂರ, ಮಾನಪ್ಪ ಮಾತನಾಡಿದರು. ಈ ವೇಳೆ ಪೌರಕಾರ್ಮಿಕರಿಗೆ ಕಲ್ಯಾಣ ಕರ್ನಾಟಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮೌನೇಶ ಹಳಿಸಗ ಅವರು ಸೀರೆ ನೀಡಿ ಸನ್ಮಾನಿಸಿದರು. ನಗರಸಭೆ ವತಿಯಿಂದ ಪ್ರತಿ ಪೌರಕಾರ್ಮಿಕರಿಗೂ ಕುಕ್ಕರ್​ ನೀಡಿ ಗೌರವಿಸಲಾಯಿತು. ವ್ಯವಸ್ಥಾಪಕಿ ರತ್ನಾಬಾಯಿ, ಕೊಟೆರಪ್ಪ, ಶಿವಣ್ಣ, ಮಲ್ಲಪ್ಪ ಬಂಡಿ, ಬಾಲಕೃಷ್ಣ ಬಬಲಾದಿ, ಸುಮುದಾಯ ಸಂಟನಾ ಅಧಿಕಾರಿ ಸಿರ್ಸಮ್ಮ ಸೇರಿ ಇತರರಿದ್ದರು. ವೆಂಕಟೇಶ ನಿರೂಪಿಸಿದರು. ರಮೇಶ ಚಟ್ರಕಿ ಸ್ವಾಗತಿಸಿದರು.