ಯಾದಗಿರಿ: ಖಾರಿಫ್ ಬರ ಪರಿಸ್ಥಿತಿ ಅಧ್ಯಯನಕ್ಕೆ ಆಗಮಿಸಿದ್ದ ನಿರ್ದೇಶಕ ಡಾ.ಮನ್ಸಿಂಗ್ ನೇತೃತ್ವದ ಕೇಂದ್ರದ ತಂಡ ಭಾನುವಾರ ಶಹಾಪುರ ತಾಲೂಕಿನ ಗುಂಡಳ್ಳಿ, ದೊರನಹಳ್ಳಿ, ಬಿದರಣಿ, ಮದ್ದರಕಿ, ಮುಡಬೂಳ ಇತರ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿತು.
ಕೇಂದ್ರ ಸರ್ಕಾರದ ಆಂತರಿಕ ಸಚಿವಾಲಯದ ಹಿರಿಯ ಅಧಿಕಾರಿ ಡಾ.ಮನ್ಸಿಂಗ್, ಅಧೀನ ಕಾರ್ಯದರ್ಶಿಗಳಾದ ಪಾರ್ಥಪಾಲ್ ಮತ್ತು ರಾಕೇಶಕುಮಾರ್ ಅವರನ್ನು ಒಳಗೊಂಡ ತಂಡ ಬೆಳಗ್ಗೆ ಯಾದಗಿರಿಯಿಂದ ನೇರವಾಗಿ ಗುಂಡಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ನಿಂಗವ್ವ ಅವರ ಹತ್ತಿ ಹೊಲಕ್ಕೆ ಭೇಟಿ ನೀಡಿ ಒಣಗಿದ ಬೆಳೆ ಕಂಡು ಹೊಲದ ಮಾಲೀಕರ ಮಗ ಶರಣಪ್ಪ ಇತರ ರೈತರಿಂದ ಮಾಹಿತಿ ಪಡೆದುಕೊಂಡಿತು.
ಒಂದೂವರೆ ಎಕರೆ ಹೊಲದಲ್ಲಿ 30 ಸಾವಿರ ರೂ. ಖರ್ಚು ಮಾಡಿ ಹತ್ತಿ ಬಿತ್ತಿದ್ದು, ಎಕರೆಗೆ ಸುಮಾರು ಹತ್ತು ಕ್ವಿಂಟಾಲ್ ಹತ್ತಿ ಬೆಳೆಯಬೇಕಿತ್ತು. ಆದರೆ ಮಳೆ ಇಲ್ಲದೆ ಒಂದು, ಒಂದೂವರೆ ಕ್ವಿಂಟಾಲ್ ಬೆಳೆದರೆ ಅದೇ ಹೆಚ್ಚು. ಇಡೀ ಊರಿನ ಎಲ್ಲ ಹತ್ತಿ ಬೆಳೆ ಒಣಗಿದ್ದು, ರೈತರ ಸ್ಥಿತಿ ಚಿಂತಾಜನಕವಾಗಿದೆ ಎಂದು ಕೃಷಿಕ ಶರಣಪ್ಪ ಗೋಳು ತೋಡಿಕೊಂಡರು. ಸ್ಥಳದಲ್ಲಿದ್ದ ರೈತ ದೇವೆಂದ್ರಪ್ಪ, ಮಹಮ್ಮದ್ ಖಾದ್ರಿ, ಸಿದ್ದಣ್ಣ, ಕಾಶಿಪತಿ, ರಮೇಶ ಚವ್ಹಾಣ್ ಇತರರು ಬೆಳೆ ಹಾನಿ ಕುರಿತು ವಿವರಿಸಿದರು.
ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗುರ ಹತ್ತಿ ಬೆಳೆ, ಕೃಷಿ ವಿವಿ ಅಧಿಕಾರಿಗಳು ಅಗತ್ಯ ಮಾಹಿತಿ ನೀಡಿದರು. ನಂತರ ದೊರನಹಳ್ಳಿ ಗ್ರಾಮದ ಹೊಲಗಳಿಗೆ ತೆರಳಿ ನಿಂಗಣ್ಣ ಮಲಗೊಂಡ ಅವರ ಹೊಲದಲ್ಲಿ ಒಣಗಿದ ಹತ್ತಿ, ತೊಗರಿ ಇತರ ಬೆಳೆಗಳನ್ನು ತಂಡದ ಅಧಿಕಾರಿಗಳು ಪರಿಶೀಲಿಸಿದರು.
ಕೇಂದ್ರದ ಮೂರು ಬರ ಅಧ್ಯಯನ ತಂಡಗಳು ರಾಜ್ಯದಲ್ಲಿ ಬೆಳೆ ಹಾನಿ ಮತ್ತು ರೈತರ ಸಂಕಷ್ಟದ ಕುರಿತು ಕೇಂದ್ರ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಿವೆ. ಯಾದಗಿರಿ ಜಿಲ್ಲೆಗೆ ಭೇಟಿ ನೀಡಿದ ತಂಡ ಬೆಳೆ ಹಾನಿ ಪರಿಶೀಲನೆಗೂ ಮುನ್ನ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವಶ್ಯಕ ಮಾಹಿತಿ ಪಡೆಯಿತು.
ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ, ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ, ಸಹಾಯಕ ಆಯುಕ್ತ ಶ್ರೀಧರ್ ಗೋಟುರ, ತೋಟಗಾರಿಕೆ ಉಪನಿರ್ದೇಶಕ ರಾವೇಂದ್ರ, ಶಹಾಪುರ ತಹಸೀಲ್ದಾರ್ ಸಿದ್ದಾರೂಡ ಬನ್ನಿಕೊಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಸವರಾಜ ಶರಬೈ ಇತರರಿದ್ದರು.
ತಂಡದೊಂದಿಗೆ ಮಾತನಾಡಿದ ರೈತರಾದ ಕಲ್ಲಪ್ಪ, ಹಣಮಂತಪ್ಪ ದೋರನಳ್ಳಿ ಅವರು ಮಳೆಯಿಲ್ಲದೆ ಬಿತ್ತಿದ ಬೆಳೆಗಳು ಹಾನಿಯಾಗಿವೆ. 1972ರಲ್ಲಿ ಬಂದಿದ್ದ ಭೀಕರ ಬರದಂಥ ಸ್ಥಿತಿ ಈಗ ಎದುರಾಗಿದೆ. ಕಾರಣ ಸರ್ಕಾರಗಳು ಕೂಡಲೇ ಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕು ಎಂದು ಅಳಲು ತೋಡಿಕೊಂಡರು. ರೈತ ಹಯ್ಯಳಪ್ಪ ದೊಡಮನಿ ಎಂಬುವರು ಮಳೆ ಮತ್ತು ತೀವ್ರ ನೀರಿನ ಕೊರತೆಯಿಂದ ಹತ್ತಿ ಮತ್ತು ತೊಗರಿ ಬೆಳೆ ನಾಶವಾಗಿದೆ ಎಂದು ದೂರಿದರು. ರೈತರಾದ ಸಿದ್ದಪ್ಪ, ಮಲ್ಲಿಕಾರ್ಜುನ ಬಡಿಗೇರ ಸಹ ಬೆಳೆ ನಷ್ಟದ ಮಾಹಿತಿ ನೀಡಿದರು.
ತೀವ್ರ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳ ಮೇಲಾದ ಪರಿಣಾಮ, ಬೆಳೆಗಳ ಸ್ಥಿತಿ ಹಾಗೂ ರೈತರ ಸಮಸ್ಯೆಗಳ ಕುರಿತು ತಂಡ ಮಾಹಿತಿ ಸಂಗ್ರಹಿಸಿತು. ನಂತರ ಬಿದರಣಿ ಹಾಗೂ ಮುಡಬೂಳ ಗ್ರಾಮಗಳಿಗೆ ಭೇಟಿ ನೀಡಿ ಬಿಟಿ ಕಾಟನ್, ತೊಗರಿ ಬೆಳೆ ನಾಶ, ನೀರು ಸರಬರಾಜು ಸಮಸ್ಯಾತ್ಮಕ ಸ್ಥಳಗಳ ಪರಿಶೀಲನೆ ನಡೆಸಿ ದೇವದುರ್ಗಕ್ಕೆ ಪ್ರಯಾಣ ಬೆಳೆಸಿತು.