ಯಾದಗಿರಿ: ವಿಧಾನ ಪರಿಷತ್ನ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ&ಜೆಡಿಎಸ್ ಮೈತ್ರಿ ಅಭ್ಯರ್ಥಿ ಶಶೀಲ್ ನಮೋಶಿ ಗೆಲ್ಲುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಅಚ್ಚರಿ ಮೂಡಿಸಿದ್ದಾರೆ. 13 ಜನರು ಕಣದಲ್ಲಿದ್ದರೂ ಬಿಜೆಪಿಯ ನಮೋಶಿ ಮತ್ತು ಪರಾಜಿತ ಅಭ್ಯರ್ಥಿ ಕಾಂಗ್ರೆಸ್ನ ಶರಣಪ್ಪ ಮಟ್ಟೂರ ನಡುವೆಯೇ ಹಣಾಹಣಿ ಏರ್ಪಟಿತ್ತು.
ಮತದಾನಕ್ಕೂ ಮುನ್ನ ಈ ಇಬ್ಬರಲ್ಲಿ ಇವರೇ ಗೆಲ್ಲುತ್ತಾರೆಂಬ ಬಗ್ಗೆ ಹೇಳದಷ್ಟು ಟಫ್ ಫೈಟ್ ನಡೆದಿತ್ತು. ಆದರೆ ಫಲಿತಾಂಶ ಬಿಜೆಪಿ ಪರ ಬರುವ ಮೂಲಕ ಕಾಂಗ್ರೆಸ್ ಮತ್ತು ಮತಕ್ಷೇತ್ರ ವ್ಯಾಪ್ತಿಯ ಸಚಿವ&ಶಾಸಕರು ಮತ್ತು ಮುಖಂಡರಲ್ಲಿ ಗೆಲ್ಲುವ ನಿರೀಕ್ಷೆ ಹುಸಿಯಾಗಿದ್ದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಶಿಕ್ಷಕ ಮತದಾರರು ಕೈಕೊಟ್ಟಿದ್ದು ಯಾಕೆ? ಅವರ ಸಮಸ್ಯೆಗಳಿಗೆ ಸರ್ಕಾರ ಮತ್ತು ಪಕ್ಷ ಸ್ಪಂದಿಸಲಿಲ್ಲವೇ? ಎಲ್ಲಿ ಎಡವಟ್ಟಾಯ್ತು ಹೀಗೆ ಅನೇಕ ಪ್ರಶ್ನೆಗಳು ಕೇಳಿಬರುತ್ತಿವೆ.
ಕಾರಣವೆಂದರೆ ಈಶಾನ್ಯ ಶಿಕ್ಷಕರ ಕ್ಷೇತ್ರದ ಏಳು ಜಿಲ್ಲೆಗಳಲ್ಲಿ ಕಾಂಗ್ರೆಸ್ನ 32 ಶಾಸಕರಿದ್ದು, ಇವರಲ್ಲಿ ಆರು ಸಚಿವರು. ಐವರು ಲೋಕಸಭಾ ಮತ್ತು ಇಬ್ಬರು ರಾಜ್ಯಸಭಾ ಸದಸ್ಯರು ಸಹ ಕಾಂಗ್ರೆಸಿಗರೇ. ಅಲ್ಲದೆ ಐದಾರು ಎಂಎಲ್ಸಿ. ನಿರೀಕ್ಷೆ ಮತ್ತು ಅಳತೆಗೂ ಮೀರಿ ಅಧಿಕಾರಸ್ಥರು ಈ ಕ್ಷೇತ್ರದಲ್ಲಿದ್ದರೂ ತನ್ನ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಆಗಲಿಲ್ಲ ಎಂಬ ದೊಡ್ಡ ಕೊರಗು ಕಾಡುತ್ತಿದೆ.
ಅದರಲ್ಲೂ ಕಲಬುರಗಿ ಮತ್ತು ಬೀದರ್ ಜಿಲ್ಲೆಯಲ್ಲೇ ಎಂಟು ಕಾಂಗ್ರೆಸ್ ಶಾಸಕರಿದ್ದು, ಅವರಲ್ಲಿ ನಾಲ್ವರು ಖ್ಯಾತನಾಮ ಸಚಿವರು, ಇಬ್ಬರು ಎಂಎಲ್ಸಿ ಮತ್ತು ಇಬ್ಬರು ಸಂಸದರು. ಇನ್ನು ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಗಟ್ಟಿ ಬೇರುಗಳನ್ನೇ ಬಿಟ್ಟಿದೆ. ಕಾರಣ ಆ ಎರಡು ಜಿಲ್ಲೆಗಳಲ್ಲಿ ಪಕ್ಷತೇರ ಶಾಸಕರು ಸೇರಿ ಎಲ್ಲ 11ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಸಂಸದ, ಒಬ್ಬ ರಾಜ್ಯಸಭಾ ಸದಸ್ಯರು, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅಧಿಕ ಕಾಂಗ್ರೆಸ್ ಶಾಸಕರಿದ್ದು, ಇಬ್ಬರು ಸಂಸದರು ಕಾಂಗ್ರೆಸ್ನವರೇ. ಹೀಗಾಗಿ ಪಕ್ಷದ ಭದ್ರಕೋಟೆಯಲ್ಲಿ ಬಿಜೆಪಿ ಗೆದ್ದಿದೆ ಎಂದರೆ, ಸೋಲಿನ ಬಗ್ಗೆ ಕಾಂಗ್ರೆಸ್ ಆಳವಾದ ಪರಾಮರ್ಶೆ ಮಾಡುವ ಅಗತ್ಯವಿದೆ.