ಯಾದಗಿರಿ: ಮಳೆ ಇಲ್ಲದೆ ಬಿತ್ತಿದ ಬೆಳೆ ಹಾನಿಯಾಗಿ ಸಾಲದ ಸೂಳಿಯಲ್ಲಿ ಸಿಲುಕಿ ರೈತ ಒದ್ದಾಡುತ್ತಿರುವಾಗ ಬರ ಅಧ್ಯಯನಕ್ಕಾಗಿ ಈಗ ಕೇಂದ್ರ ಅಧಿಕಾರಿಗಳ ತಂಡ ಜಿಲ್ಲೆಗೆ ಬರುತ್ತಿದೆ. ಇದು ಹೇಗಾಗಿದೆ ಎಂದರೆ "ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗಿದೆ.
ಈಗಾಗಲೇ ರೈತರು ಆದಷ್ಟು ಆಗಲಿ ಎಂದು ಅನೇಕ ಕಡೆ ಬೆಳೆಗಳ ರಾಶಿ ಮಾಡಿದ್ದಾರೆ. ಇನ್ನೂ ಕೆಲವಡೆ ರಾಶಿ ನಡೆದಿವೆ. ಈಗ ಬಂದು ಯಾವ ಬೆಳೆಗಳ ಹಾನಿ ಕುರಿತು ಕೇಂದ್ರ ತಂಡ ಅಧ್ಯಯನ ಮಾಡುತ್ತದೆಯೋ ಎಂಬ ಕುತೂಹಲ ಅನೇಕರಲ್ಲಿದೆ. ಪ್ರಸ್ತಕ ಸಾಲಿನ ಮುಂಗಾರು ಬೆಳೆ ಮಳೆ ಇಲ್ಲದೆ ಒಣಗಿದ ಪರಿಣಾಮ ರೈತರು ಅಪಾರ ಪ್ರಮಾಣ ಆರ್ಥಿಕ ನಷ್ಟ ಮತ್ತು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನ್ನದಾತನ ಉಳಿವಿಗಾಗಿ ಇಷ್ಟೋತ್ತಿಗಾಗಲೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಪರಿಹಾರ ನೀಡಬೇಕಾಗಿತ್ತು. ಆದರೆ ಬೆಳೆ ಹಾನಿ, ಮಳೆ ಪ್ರಮಾಣದ ವರದಿ, ಬರ ಅಧ್ಯಯನ ಎಂಬ ಕೆಲಸದಲ್ಲಿಯೇ ಸರ್ಕಾರಗಳು ಕಾಲಹರಣ ಮಾಡಿದರೆ ಅತ್ತ ರೈತರು ನೆಮ್ಮದಿಯಿಂದ ಬದುಕಲು ಸಾಧ್ಯವೇ ಎಂಬ ಪ್ರಶ್ನೆ ಪ್ರಜ್ಞಾವಂತರನ್ನು ಕಾಡುತ್ತಿದೆ.
ಶನಿವಾರ ಮತ್ತು ಭಾನುವಾರ ಜಿಲ್ಲೆಗೆ ಬರಲಿರುವ ಅಧಿಕಾರಿಗಳ ತಂಡ ಯಾದಗಿರಿಯಲ್ಲಿ ಒಂದು ಸಭೆ ನಡೆಸಿ ಜಿಲ್ಲೆಯ ಆರು ತಾಲೂಕುಗಳ ಪೈಕಿ ಶಹಾಪುರ ಒಂದೇ ತಾಲೂಕಿಗೆ ಭೇಟಿ ನೀಡಿ ಅಧ್ಯಯನ ಮಾಡಿ ದೆಹಲಿಗೆ ತೆರಳಿ ಬೆಳೆ ಹಾನಿ ಬಗ್ಗೆ ವರದಿ ನೀಡಬೇಕು. ನಂತರ ಅದನ್ನು ಪರಿಶೀಲಿಸಿ ಪರಿಹಾರ ಘೋಷಣೆಯಾಗಬೇಕು. ನಂತರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡಿಕೊಂಡು ಪರಿಹಾರದ ಹಣ ರೈತರ ಖಾತೆಗೆ ಜಮೆ ಮಾಡಬೇಕು. ಅಲ್ಲಿಯವರೆಗೆ ಸಾಲದ ಬಾಧೆಯಿಂದ ಈಗಾಗಲೇ ತತ್ತರಿಸಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕು, ಇಲ್ಲವೇ ಊರು ಬಿಟ್ಟ ಓಡಿಹೋಗಬೇಕು. ಇದು ಜಿಲ್ಲೆಯ ರೈತರ ಪರಿಸ್ಥಿತಿಯ ನಗ್ನಸತ್ಯ.
ಶಹಾಪುರ ತಾಲೂಕು ಬರಪೀಡಿತ ಪಟ್ಟಿಗೆ ಸೇರಿದ ನಂತರ ಉಳಿದ ತಾಲೂಕು ಸಹ ಸೇರಿಸಬೇಕೆಂದು ಹೋರಾಟ, ಬಂದ್, ಶಾಸಕರಿಂದ ಬೆಂಗಳೂರಿನ ಗಾಂಧಿ ಪ್ರತಿಮೆ ಎದುರು ಮೌನ ಪ್ರತಿಭಟನೆ, ಆಡಳಿತರೂಡ ಸರ್ಕಾರದ ಶಾಸಕರಿಂದ ಸಿಎಂ, ಡಿಸಿಎಂ ಅವರಿಗೆ ಭೇಟಿ ಹೀಗೆ ಎಲ್ಲವೂ ಆದನಂತರ ಕೊನೆಗೆ ಮೂರನೇ ಪಟ್ಟಿಯಲ್ಲಿ ಜಿಲ್ಲೆಯ ಉಳಿದ ಐದು ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ. ಹೀಗೆ ಕಳೆದ ಎರಡು ತಿಂಗಳಿಂದ ಬೆಳೆ ಹಾನಿ, ಮಳೆ ಪ್ರಮಾಣದ ಸರ್ವೇ, ವರದಿ ನಂತರ ಬರ ೂಷಣೆಯಲ್ಲಿಯೇ ಸಮಯ ಉರುಳಿ ಹೊಗಿದೆ ಆದರೆ ಇಲ್ಲಿ ಸುಮಾರು ಐವತ್ತು ಸಾವಿರಕ್ಕೂ ಅಧಿಕ ರೈತರು ಬೆಳೆ ಹಾನಿಯಿಂದ ತಕ್ಷಣದ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ.
ಸಕಲ ಜೀವರಾಶಿಗಳಿಗೆ ಅನ್ನಕೊಡುವ ರೈತರು ಹೀಗೆ ಬೆಳೆ ನಷ್ಟದಿಂದ ನರಳಿ, ನರಳಿ ಸರ್ಕಾರ ಕೊಡುವ ಪರಿಹಾರಕ್ಕಾಗಿ ಕೈಚಾಚಿಕೊಂಡು ಕೂಡಬೇಕೇ? ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ಇಷ್ಟೊಂದು ಸುಧೀರ್ ಸಮಯ ತೆಗೆದುಕೊಂಡರೆ ಸಾಲದ ಸೂಳಿಯಲ್ಲಿ ಸಿಲುಕಿರುವ ರೈತರು ಬದುಕಬಹುದೇ ಎಂಬ ಪ್ರಶ್ನೆಗಳು ಎದುರಾಗಿವೆ. ರೈತ ಉಳಿದರೆ ಎಲ್ಲರೂ, ಎಲ್ಲವೂ ಉಳಿಯುತ್ತದೆ ಎಂಬ ಮಾತಿಗೂ ಮತ್ತು ಪರಿಹಾರ ನೀಡಲು ಸರ್ಕಾರಗಳು ರೂಪಿಸಿದ ನಿಯಮಗಳು ಒಂದಕ್ಕೊಂದು ತಾಳೆಯಾಗದೆ ಯಾರು, ಯಾರಿಗೆ ಕೇಳಬೇಕು. ಹೇಳಬೇಕು ಎಂಬ ಪ್ರಶ್ನೆ ಕೃಷಿ ಕಾಯಕನಿರತ ರೈತರನ್ನು ಬೆಂಬಿಡದೆ ಕಾಡುತ್ತಿದೆ. ಈಗ ಒಂದೇ ತಾಲೂಕಿನಲ್ಲಿ ಅಧ್ಯಯನ ನಡೆಸುವ ಕೇಂದ್ರ ತಂಡ, ಇನ್ನೂ ಐದು ತಾಲೂಕು ಯಾವಾಗ ಬಂದು ಅಧ್ಯಯನ ನಡೆಸಿ ವರದಿ ನೀಡುವುದು, ಅದು ನೋಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಹಾರ ನೀಡುವುದು ಯಾವಾಗ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗಳು ಉತ್ತಿ, ಬಿತ್ತಿ ಹಾನಿಗೊಳಗಾದ ರೈತರಿಗೆ ಕಾಡಲಾರಂಭಿಸಿದೆ.
ಕೆಲವೊಂದು ಸಮಯದಲ್ಲಿ ತುರ್ತಾಗಿ ಪರಿಹಾರ ನೀಡುವ ಸರ್ಕಾರಗಳು ರೈತರ ಬೆಳೆಹಾನಿಗೊಳಗಾದಾಗ ತಕ್ಷಣ ಪರಿಹಾರ ನೀಡುವ ವ್ಯವಸ್ಥೆ ಮಾಡಬೇಕು. ಆದರೆ ನೂರೆಂಟು ನಿಯಮ ರೂಪಿಸಿ, ಅವುಗಳ ಪ್ರಕಾರ ಪರಿಹಾರ ನೀಡುವ ಚಾಳಿ ರೈತರ ವಿಷಯದಲ್ಲಿ ನಿಲ್ಲಬೇಕು ಎಂಬುವುದೆ ಕೃಷಿಕನ ಮನದಾಳದ ಮಾತಾಗಿದೆ. ಈಗಾಗಲೇ ಮುಂಗಾರು ಬೆಳೆಗಳ ರಾಶಿ ಮಾಡಿ ಅದರಿಂದ ಬಂದ ಹಣದಿಂದ ತುಸು ಸಾಲ ಕಟ್ಟಿ, ಹಿಂಗಾರು ಬಿತ್ತನೆ ಸಿದ್ದವಾಗಬೇಕಾದ ರೈತರು ಬೆಳೆಹಾನಿಯಿಂದ ಸಾಲಗಾರರಿಗೆ ಮುಖತೊರಿಸದಂತ ಸ್ಥಿತಿ ಇಲ್ಲಿ ನಿರ್ಮಾಣಗೊಂಡಿದೆ. ಆದರೆ ಈಗ ಇನ್ನೂ ಅಧ್ಯಯನ, ವರದಿ, ಪರಿಶೀಲನೆ ಅಂತಾ ಅಧಿಕಾರಿಗಳ ತಂಡ ಭೇಟಿ ನೀಡುವುದೇ ನಡೆದಿದೆ.
ಗಿರಿ ಜಿಲ್ಲೆಯಲ್ಲಿ ಒಟ್ಟು 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆ ಬಿತ್ತನೆಯಾಗಿವೆ. ಇದರಲ್ಲಿ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತಲಾಗಿದೆ. ಇದು ಶೇ.70 ಹಾನಿಯಾಗಿದೆ. ಒಂದು ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಭತ್ತ ಬೆಳೆಯಲಾಗುತ್ತಿದೆ. ಕಾಲುವೆಯಿಂದ ನೀರು ಹರಿಸಿದರೆ ಈ ಬೆಳೆಗಾರರು ಬಚಾವ್, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ. ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, ಪ್ಯಾಡಿ, ಉದ್ದು ಹೀಗೆ ವಿವಿಧ ಬೆಳೆಗಳು ಬಿತ್ತನೆ ಮಾಡಲಾಗಿದ್ದು, ಇವುಗಳಲ್ಲೂ ಸಹ ಶೇ.65 ಬೆಳೆ ಹಾನಿಯಾಗಿದೆ.