ಯಾದಗಿರಿ: ನಗರದ ಲುಂಬಿನಿ ಉದ್ಯಾನವನ ಅಭಿವೃದ್ಧಿಗೊಳಿಸಲು ನೀಲನಕ್ಷೆ ಸಿದ್ದಪಡಿಸಲಾಗಿದ್ದು, ಇದಕ್ಕಾಗಿ ನಗರಸಭೆ ಕೆರೆ ಅಭಿವೃದ್ಧಿ ನಿಧಿಯನ್ವಯ 4.74 ಕೋಟಿ ರೂ. ಖರ್ಚು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಹೇಳಿದರು.
ನಗರದ ಲುಂಬಿನಿ ಗಾರ್ಡನ್ಗೆ ಬುಧವಾರ ಭೇಟಿ ನೀಡಿದ ಅವರು, ಮಕ್ಕಳ ಆಟದ ಪ್ರದೇಶ, ಐಲ್ಯಾಂಡ್ನ ವಾಕ್ವೇ, ಪಾದಚಾರಿ ಮಾರ್ಗದ ಎತ್ತರ ಹೆಚ್ಚಿಸಬೇಕು. ಮಳೆಗಾಲದಲ್ಲಿ ನೀರು ನಿಂತು ಉದ್ಯಾನಕ್ಕೆ ಹಾನಿಯಾಗದಂತೆ ನೆಲವನ್ನು ಸಮತಟ್ಟು ಮಾಡಬೇಕು. ಮಕ್ಕಳ ಆಟದ ಪ್ರದೇಶದಲ್ಲಿ ಕಡ್ಡಾಯವಾಗಿ ಬೀಚ್ ಮರಳು ಹಾಕಬೇಕು ಎಂದು ಇಂಜಿನಿಯರ್ಗಳಿಗೆ ನಿರ್ದೇಶನ ಮಾಡಿದರು.
ಲೋಕೋಪಯೋಗಿ ಹಾಗೂ ನಗರಸಭೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದ ಅವರು, ಇಲ್ಲಿ ಮಾಡಲಾಗುವ ಕಾಮಗಾರಿ ಯಾವುದೇ ಕಾರಣಕ್ಕೂ ಅನುದಾನದ ಕೊರತೆಯಿಂದ ನಿಲ್ಲದೆ ಪೂರ್ಣಗೊಳಿಸುವ ಮೂಲಕ ಉದ್ಯಾನಕ್ಕೆ ಬರುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಕೆರೆಯಲ್ಲಿನ ಹೂಳು ತೆಗೆದು ಹೊರ ಹಾಕಿ ವರ್ಷದ ಎಲ್ಲ ದಿನಗಳಲ್ಲಿ ಬೋಟಿಂಗ್ ನಡೆಯುವಂತೆ ಮಾಡಬೇಕು. ಕೆರೆಯ ಸುತ್ತಲಿನ 2 ಕಿಮೀ ಮಾರ್ಗದಲ್ಲಿನ ಗಿಡ-ಗಂಟಿ ಕಡಿದು ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕು. ಸುತ್ತಲಿನ ತಂತಿ ಬೇಲಿ ಪೈಕಿ ಅಲ್ಲಲ್ಲಿ ಹಾನಿಯಾಗಿದೆ. ಸರಿಯಾಗಿ ತಂತಿ ಬೇಲಿ ಹಾಕಿ ಕೆರೆ ಪ್ರದೇಶ ಒತ್ತುವರಿಯಾಗದಂತೆಯೂ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ಈ ವೇಳೆ ಮಾತನಾಡಿದ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಪರಶುರಾಮ, 10 ವರ್ಷಗಳ ಹಿಂದೆ ನಿರ್ಮಾಣವಾದ ಉದ್ಯಾನ ಮರು ಅಭಿವೃದ್ಧಿಪಡಿಸಬೇಕಿದೆ ಗಾರ್ಡನ್ ವಾಕಿಂಗ್ ಪಾಥ್, ಪಾದಚಾರಿ ಮಾರ್ಗ ಬಹಳ ಕಿರಿದಾಗಿದ್ದು, ಇದಕ್ಕಾಗಿ 1.20 ಕೋಟಿ ಮೀಸಲಿಡಲಾಗಿದೆ. ಜಂಗಲ್ ಕಟ್ಟಿಂಗ್ಗೆ 9.65 ಲ ವೆಚ್ಚ ಆಗಬಹುದು. ಕೆರೆ ಹೂಳು ಎತ್ತುವುದು, ಒಂದೇ ಕಡೆ ಮಕ್ಕಳ ಆಟಿಕೆ ಪ್ರದೇಶ ಅಭಿವೃದ್ಧಿ, ಹಸರೀಕರಣ, ಆಸನಗಳು, ಶೌಚಗೃಹ, ಬೀದಿ ದೀಪ, ವಿಶ್ರಾಂತಿ ತಾಣ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಲುಂಬಿನಿ ಗಾರ್ಡನ್ನ ಐಲ್ಯಾಂಡ್ನಲ್ಲಿ ಬುದ್ಧನ ಮೂರ್ತಿ ಸ್ಥಾಪಿಸುವ ಬೇಡಿಕೆ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಅದನ್ನೂ ಕೂಡಲೇ ಮಾಡಬೇಕು ಎಂದು ಯುಡಾ ಅಧ್ಯ ಬಾಬುರಾವ್ ಕಾಡ್ಲೂರ್ ಹೇಳಿದರು. ನಗರಸಭೆ ಪೌರಾಯುಕ್ತ ಉಮೇಶ್ ಚವ್ಹಾಣ್ ಸೇರಿ ಇತರರಿದ್ದರು.