ಜಿಲ್ಲೆ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗ್ರಾಮಸ್ಥರ ಆಕ್ರೋಶ

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ಯಾದವಾಡ, ಪುಡಕಲಕಟ್ಟಿ, ಕರಡಿಗುಡ್ಡ ಗ್ರಾಮಗಳ ಮಧ್ಯೆ ಸ್ಥಾಪನೆಯಾಗುತ್ತಿರುವ ಮೃಣಾಲ್ ಸಕ್ಕರೆ ಕಾರ್ಖಾನೆಯ ಕಟ್ಟಡ ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುರುವಾರ ಪೂಜೆ ನೆರವೇರಿಸಿದರು. ಕಾರ್ಖಾನೆ ಸ್ಥಾಪನೆಗೆ ಆಕ್ಷೇಪಿಸಿರುವ ಗ್ರಾಮಸ್ಥರು ಗುರುವಾರವೂ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಪುತ್ರ ಮೃಣಾಲ್, ಸಹೋದರ ಚೆನ್ನರಾಜ್ ಹಟ್ಟಿಹೊಳಿ, ಕೆಎಂಎಫ್ ನಿರ್ದೇಶಕಿ ಶಿವಲೀಲಾ ಕುಲಕರ್ಣಿ, ಮುಖಂಡ ತವನಪ್ಪ ಅಷ್ಟಗಿ ಅವರೊಂದಿಗೆ ಬಂದ ಸಚಿವೆ ಹೆಬ್ಬಾಳ್ಕರ್ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವಿಷಯ ತಿಳಿದ ಗ್ರಾಮಸ್ಥರು ಟ್ರ‍್ಯಾಕ್ಟರ್‌ಗಳಲ್ಲಿ ಸ್ಥಳಕ್ಕೆ ತೆರಳಿ ಕಾರ್ಖಾನೆಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ಘೋಷಣೆ ಕೂಗಿದರು. ಕಾರ್ಖಾನೆ ಸ್ಥಾಪಿಸಬಾರದು ಎಂದು ಮನವಿ ಸಲ್ಲಿಸಿದರು.

ಸಚಿವೆ ಹೆಬ್ಬಾಳ್ಕರ್ ರೈತರ ಮನವೊಲಿಸಲು ಯತ್ನಿಸಿದರು. `ನಾನೂ ರೈತನ ಮಗಳು. ರೈತರು, ಕಬ್ಬು ಬೆಳೆಗಾರರಿಗೆ ಅನುಕೂಲವಾಗುವ ಉದ್ದೇಶದಿಂದ ಸಕ್ಕರೆ ಕಾರ್ಖಾನೆ ಸ್ಥಾಪಿಸಲಾಗುತ್ತಿದೆ. ನಿಮಗಾಗುವ ಸಮಸ್ಯೆಗಳಿಗೆ ಸಮಜಾಯಿಷಿ ನೀಡಲು ಚರ್ಚೆಗೆ ಸಿದ್ಧ' ಎಂದರು.

ಹರ್ಷಾ ಶುಗರ್ಸ್ ಎಂ.ಡಿ. ಚೆನ್ನರಾಜ್ ಹಟ್ಟಿಹೊಳಿ ಮಾತನಾಡಿ, ಜರ್ಮನ್ ತಂತ್ರಜ್ಞಾನ ಬಳಸಿ ಪರಿಸರ ಸ್ನೇಹಿ ಕಾರ್ಖಾನೆ ಸ್ಥಾಪಿಸಲಾಗುವುದು. ಆಧುನಿಕ ತಂತ್ರಜ್ಞಾನದಿ0ದ ಜಲ ಮತ್ತು ವಾಯುಮಾಲಿನ್ಯ ಆಗುವುದಿಲ್ಲ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥ ಬಸವರಾಜ ಬೆಂಡಿಗೇರಿ, ಹತ್ತಿರದಲ್ಲೇ ನಿಮ್ಮದೇ ಹರ್ಷ ಶುಗರ್ಸ್ ಇದೆ. ಅಲ್ಲೂ ಇದೇ ಭರವಸೆ ನೀಡಿದ್ದಿರಿ. ಆದರೆ, ಅಲ್ಲಿನ ರೈತರು, ಗ್ರಾಮಸ್ಥರೀಗ ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ವಿರೋಧದ ನಡುವೆಯೂ ಫ್ಯಾಕ್ಟರಿ ಸ್ಥಾಪಿಸಿದರೆ ಹೋರಾಟ ಮುಂದುವರಿಸಲಾಗುವುದು ಎಂದರು. ಮಾಧ್ಯಮದವರ ಎದುರು ಈ ರೀತಿ ಚರ್ಚೆ ಬೇಡ ಎಂದು ಸಚಿವೆ ಹೇಳಿದರು.

ರೈತರ ನೆಮ್ಮದಿ ಕಸಿಯುವ ಕಾರ್ಖಾನೆ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಂಚಾಯಿತಿಯಿ0ದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ ಗಳಗಿ, ಸದಸ್ಯ ಮಡಿವಾಳಪ್ಪ ದಿಂಡಲಕೊಪ್ಪ ತಿಳಿಸಿದರು.

ನಾವು ಗಲಾಟೆ ಮಾಡಲು ಬಂದಿಲ್ಲ. ಆದರೂ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಿದ್ದೀರಿ. ಗ್ರಾಮದಲ್ಲಿ ಡಿಎಆರ್ ತುಕಡಿ ನಿಯೋಜಿಸಿದ್ದೇಕೆ? ಅಽಕಾರ ದುರ್ಬಳಕೆ ಮಾಡಿಕೊಂಡು ಹೆದರಿಸುವ ತಂತ್ರ ಮಾಡಬಾರದು ಎಂದು ಗ್ರಾಮಸ್ಥರು ಘೋಷಣೆ ಕೂಗಿದರು.

* ಪಂಚಾಯಿತಿಯ ಸ್ವಚ್ಛ ವಾಹಿನಿ ದುರ್ಬಳಕೆ:

ಪೂಜಾ ಕಾರ್ಯಕ್ರಮದ ಮುನ್ನಾ ದಿನವಾದ ಬುಧವಾರ ಕರಡಿಗುಡ್ಡ ಗ್ರಾಮ ಪಂಚಾಯಿತಿಯ ಸ್ವಚ್ಛ ವಾಹಿನಿ ದುರ್ಬಳಕೆ ಮಾಡಲಾಗಿದೆ. ಮೃಣಾಲ್ ಸಕ್ಕರೆ ಕಾರ್ಖಾನೆ ಭೂಮಿಪೂಜೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸ್ವಚ್ಛ ವಾಹಿನಿಯ ಮೈಕ್‌ನಲ್ಲಿ ಗ್ರಾಮದ ತುಂಬ ಪ್ರಚಾರ ಮಾಡಲಾಗಿತ್ತು.