ಮಡಿಕೇರಿ:
ಭಾರತೀಯ ಸೇನೆ ವತಿಯಿಂದ ಮಡಿಕೇರಿಯಲ್ಲಿ ಸೋಮವಾರ ಮಾಜಿ ಸೈನಿಕರ ರ‍್ಯಾಲಿ ಆಯೋಜಿಸಲಾಗಿತ್ತು. ಈ ಸಂದರ್ಭ ಸ್ಪರ್ಶ್ ಮತ್ತು ಪಿಂಚಣಿ ಅರ್ಹತೆಗೆ ಸಂಬAಧಿಸಿದ ಕುಂದುಕೊರತೆಗಳನ್ನು ಸ್ಥಳದಲ್ಲೇ ಪರಿಹರಿಸಲಾಯಿತು.
ಹೆಚ್‌ಕ್ಯೂ ಸದರ್ನ್ ಕಮಾಂಡ್ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಡಿಕೇರಿ, ವಿರಾಜಪೇಟೆ ಸೇರಿದಂತೆ ಜಿಲ್ಲೆಯ ಮಾಜಿ ಸೈನಿಕರು, ವೀರ ನಾರಿಯರು ಹಾಗೂ ಅವಲಂಬಿತರು ಪಾಲ್ಗೊಂಡಿದ್ದರು. ದಕ್ಷಿಣ ಕಮಾಂಡ್‌ನ ಪಿವಿಎಸ್‌ಎಂ, ಎವಿಎಸ್‌ಎಂ, ಜಿಒಸಿ-ಇನ್-ಸಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್, ದಕ್ಷಿಣ ಭಾರತ ಪ್ರದೇಶದ ಲೆಫ್ಟಿನೆಂಟ್ ಜನರಲ್ ಕರಣ್‌ಬೀರ್ ಸಿಂಗ್ ಬ್ರಾರ್, ಪಿವಿಎಸ್‌ಎಂ, ಎವಿಎಸ್‌ಎಂ, ಜಿಒಸಿ, ಕೆ ಮತ್ತು ಕೆ ಸಬ್ ಏರಿಯಾದ ಮೇಜರ್ ಜನರಲ್ ವಿಟಿ ಮ್ಯಾಥ್ಯೂ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್, ಹೆಮ್ಮೆಯ ಮಾಜಿ ಸೈನಿಕರು, ವೀರ ನಾರಿಯರು ಹಾಗೂ ಅವರ ಕುಟುಂಬಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ರಾಷ್ಟ್ರಕ್ಕೆ ಅವರ ತ್ಯಾಗ ಮತ್ತು ಸೇವೆಯನ್ನು ಗೌರವಿಸುವುದಾಗಿ ಹೇಳಿದರು. ಭಾರತೀಯ ಸೇನೆಯು ತನ್ನ ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳನ್ನು ನೋಡಿಕೊಳ್ಳುವ ಬದ್ಧತೆಯ ಬಗ್ಗೆ ಭರವಸೆ ನೀಡಿದರು. ನಂತರ ಮಾಜಿ ಸೈನಕರು ಮತ್ತು ಅವಲಂಬಿತರ ಕತೆ ಸಂವಾದ ನಡೆಸಿದರು.
565 ಮಾಜಿ ಸೈನಿಕರು, ವೀರನಾರಿಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಬೆಂಗಳೂರಿನ ಸದರ್ನ್ ಕಮಾಂಡ್ ಮತ್ತು ಪಿಸಿಡಿಎಯ ಏಳು ವಿವಿಧ ದಾಖಲಾತಿ ಕಚೇರಿಗಳ ಅಧಿಕಾರಿಗಳು ಸ್ಪರ್ಶ ಮತ್ತು ಪಿಂಚಣಿ ಹಕ್ಕುಗಳಿಗೆ ಸಂಬAಧಿಸಿದ 376 ಕುಂದುಕೊರತೆಗಳನ್ನು ಸ್ಥಳದಲ್ಲೇ ಪರಿಹರಿಸಿದರು.
ವೈದ್ಯಕೀಯ ಮತ್ತು ದಂತ ವೈದ್ಯಕೀಯ ತಂಡ 72 ರೋಗಿಗಳಿಗೆ ವೈದ್ಯಕೀಯ ನೆರವು ಮತ್ತು ಚಿಕಿತ್ಸೆ ಒದಗಿಸಿತು. ಕ್ಯಾನ್ಸರ್ ತಪಾಸಣಾ ಶಿಬಿರವನ್ನೂ ನಡೆಸಲಾಯಿತು.19 ರೋಗಿಗಳನ್ನು ಇದರಲ್ಲಿ ಪರೀಕ್ಷಿಸಲಾಯಿತು.
ಬೆಂಗಳೂರಿನ ಜೆಆರ್‌ಒ, ಮಡಿಕೇರಿಯ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಕಚೇರಿ ಮತ್ತು ಸೇನಾ ಕಲ್ಯಾಣ ನಿಯೋಜನೆ ಸಂಸ್ಥೆಯ ಅಧಿಕಾರಿಗಳು ವಿವಿಧ ಕಲ್ಯಾಣ ಯೋಜನೆಗಳು, ಮರು ಉದ್ಯೋಗ ಮತ್ತು ನೇಮಕಾತಿ ಪ್ರಕ್ರಿಯೆಯ ಬಗ್ಗೆ ನಿವೃತ್ತ ಸೈನಿಕರಿಗೆ ಮಾಹಿತಿ ನೀಡಿದರು.