ಜಿಲ್ಲೆ

ವಾಣಿ ಕಾಲೇಜಿನಲ್ಲಿ ಬರಹ ಕೌಶಲ ಕಾರ್ಯಕ್ರಮ

ಸೌಮ್ಯ ಆರ್

ಬೆಳ್ತಂಗಡಿ: ಸಾಹಿತ್ಯಾಸಕ್ತಿ ರೂಢಿಸಿಕೊಳ್ಳುವುದರಿಂದ ಉತ್ತಮ ಬದುಕಿನೊಂದಿಗೆ ನೆಮ್ಮದಿ, ಗೌರವ, ಪ್ರಶಸ್ತಿಗಳನ್ನು ಪಡೆದುಕೊಳ್ಳಬಹುದು ಎಂದು ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಹೇಳಿದರು.

ವಾಣಿ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬರಹ ಕೌಶಲ ವಿಷಯದ ಕುರಿತು ಮಾತನಾಡಿದರು.

ಜೀವನದ ಕಷ್ಟ ಸುಖದ ಅನುಭವಗಳನ್ನು ಮತ್ತು ನಮ್ಮ ಹತ್ತಿರದ ವಿಷಯ ಅಥವಾ ಘಟನೆಗಳನ್ನು ಆಸಕ್ತಿಯಿಂದ ಗಮನಿಸಿದಾಗ ಅದು ಬರವಣಿಗೆಗೆ ಸ್ಫೂರ್ತಿಯಾಗುತ್ತದೆ. ಸಾಹಿತ್ಯಕ್ಕೆ ವಿಷಯಗಳನ್ನು ನಾವೇ ಹುಡುಕಿಕೊಂಡು ಹೋಗಬೇಕಾಗುತ್ತದೆ. ಲೇಖನಗಳು ಅಥವಾ ಕಥೆಗಳು ಓದುಗರ ವ್ಯಕ್ತಿತ್ವದಲ್ಲಿ ಬದಲಾವಣೆ ತರುವುದರೊಂದಿಗೆ ಸಮಾಜದಲ್ಲಿ ನೈತಿಕತೆ ಕಂಡುಕೊಳ್ಳಬಹುದು ಎಂದರು.

ವಿದ್ಯಾರ್ಥಿಗಳು ರಚಿಸಿದ ‘ಅಕ್ಷರ ವಾಣಿ ಭಿತ್ತಿ ಪತ್ರಿಕೆ’ಯನ್ನು ಅನಾವರಣಗೊಳಿಸಲಾಯಿತು. ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ. ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಂಘ ಸಂಯೋಜಕರಾದ ರಮ್ಯಾ ಜೋಶಿ, ಅಭ್ಯುದಯ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸನಾ ಶರಿನಾ ಪಿಂಟೋ ಸ್ವಾಗತಿಸಿದರು. ಅಭಿಜ್ಞಾ ವಂದಿಸಿದರು.