ಮಡಿಕೇರಿ: ಬರವಣಿಗೆ, ಒದುವುದು ಹಾಗೂ ವಾಚನ ಎಲ್ಲರಿಗೂ ಇಷ್ಟದಂತೆ ಸಿದ್ಧಿಸುವುದಿಲ್ಲ ಎಂದು ಹಿರಿಯ ಸಾಹಿತಿ ಬಾರಿಯಂಡ ಎ.ಜೋಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಪುಣ್ಯ ಕ್ಷೇತ್ರ ತಲಕಾವೇರಿಯಲ್ಲಿ ಏರ್ಪಡಿಸಲಾಗಿದ್ದ ಸಂಕ್ರಮಣ ಕವಿಗೋಷ್ಠಿ-ಭಕ್ತಿ ಗೀತೆ ಗಾಯನ ಹಾಗೂ ತಲಕಾವೇರಿ ಸ್ಥಳ ಮಹಿಮೆ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬರವಣಿಗೆ ಎಂಬದು ನಮಗಿಷ್ಟಬಂದಂತೆ ಹುಟ್ಟುವುದಿಲ್ಲ. ವಾಚನ, ಒದುವುದು ಅಷ್ಟೊಂದು ಸುಲಭದಲ್ಲಿ ಕೈ ಹಿಡಿಯುವುದಿಲ್ಲ. ನಿರಂತರ ಪ್ರಯತ್ನ, ಅಭ್ಯಾಸದಿಂದ ಮಾತ್ರ ಇದು ಪರಿಪೂರ್ಣವಾಗುತ್ತದೆ. ಏನೋ ಬರೆದ ಕೂಡಲೇ ಅದು ಕತೆ, ಕವನ ಆಗುವುದಿಲ್ಲ, ಎಲ್ಲದಕ್ಕೂ ಏಕಾಗ್ರತೆಬೇಕು. ಈ ಬಗ್ಗೆ ಆಸಕ್ತಿ ಇರುವ ಮಕ್ಕಳಿಗೆ ಪೋಷಕರು ತಿಳಿ ಹೇಳಬೇಕು ಎಂದು ಹೇಳಿದರು.
ಪ್ರಸ್ತುತ ಎಲ್ಲರೂ ನವ್ಯ ಕಾವ್ಯಗಳನ್ನು ಬರೆಯುತ್ತಿದ್ದಾರೆ. ಶಾಸ್ತಿಥಯವಾಗಿ ಚಂದಸ್ಸನ್ನು ಬಿಟ್ಟಿದ್ದಾರೆ. ಹಿಂದಿನ ಕಾಲದಲ್ಲಿ ಪಂಪ, ರನ್ನ, ಪೊನ್ನರು ಆದಿನಗಳಲ್ಲಿ ಬರೆದುದನ್ನು ಸ್ಮರಿಸಬೇಕೆಂದು ಉದಾಹರಣೆ ಸಹಿತ ವಿವರಿಸಿದರು. ಕನ್ನಡ ಸಿರಿ ಬಳಗದಿಂದ ವಿಶ್ವ ವಿಖ್ಯಾತ ಪವಿತ್ರ ಕ್ಷೇತ್ರದಲ್ಲಿ ಇಂತಹ ಉತ್ತಮ ಕಾರ್ಯಕ್ರಮ ಏರ್ಪಡಿಸಿರುವದನ್ನು ಎಂದಿಗೂ ಮರೆಯಲಾಗದು. ಪುಟಾಣಿಗಳಿಂದ ಹಿಡಿದು ಹಿರಿಯರವರೆಗೆ ಒಟ್ಟು ೪೩ ಜನ ಒಂದು ಕಾರ್ಯದಲ್ಲಿ ಭಾಗಿಯಾಗಿರುವದು ಶ್ಲಾಘನೀಯ. ಮುಂದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವದರೊಂದಿಗೆ ಉತ್ತಮ ಬರಹಗಾರರಾಗುವಂತೆ ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ತಲಕಾವೇರಿ ಕ್ಷೇತ್ರದ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ಮಾತನಾಡಿ, ಈ ಒಂದು ಪುಣ್ಯ ಕ್ಷೇತ್ರದಲ್ಲಿ ಉತ್ತಮವಾದ ಕಾರ್ಯಕ್ರಮ ಏರ್ಪಡಿಸಿರುವುದು ಸಂತಸ ತಂದಿದೆ. ಲೋಕ ಕಲ್ಯಾಣಕ್ಕಾಗಿ ಜನ್ಮ ತಾಳಿದ ಕಾವೇರಿ ನದಿ ಹರಿಯುತ್ತಿರುವಂತೆ ಸ್ನೇಹ ಸಿರಿ ಬಳಗ ಈ ಕ್ಷೇತ್ರದಲ್ಲಿ ಆರಂಭ ಮಾಡಿ ಮುಂದಕ್ಕೆ ಹಮ್ಮಿಕೊಂಡಿರುವಂತಹ ಕಾರ್ಯಕ್ರಮಗಳೆಲ್ಲವೂ ಯಶಸ್ವಿಯಾಗಲಿ. ಕೊನೆಗೆ ಐವತ್ತನೇ ಉತ್ಸವವಾಗಿ ಸಂಭ್ರಮಿಸಲಿ ಎಂದು ಶುಭ ಹಾರೈಸಿದರು.
ತಲಕಾವೇರಿ ಸ್ಥಳ ಮಹಿಮೆ ಕುರಿತು ವಿಚಾರ ಮಂಡನೆ ಮಾಡಿದ ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಕೆ.ಸಿ.ದಯಾನಂದ ಮಾತನಾಡಿ, ಸಪ್ತನದಿಗಳಲ್ಲಿ ಒಂದಾಗಿರುವ ಕಾವೇರಿ ಜನ ಮಾನಸದಲ್ಲಿ ನೆಲೆಸಿರುವ ತೀರ್ಥರೂಪಿಣಿ ಮಾತೆಯಾಗಿದ್ದಾಳೆ. ಈಕೆಯ ಸ್ಮರಣೆಯಿಂದ ಪಾಪ ನಿವಾರಣೆಯಾಗಲಿದ್ದು, ಕಾವೇರಿ ಜಲದಿಂದ ಲಕ್ಷಾಂತರ ಎಕರೆ ಭೂಮಿ ಫಲವತ್ತಾಗಿದೆ. ದಕ್ಷಿಣದ ಗಂಗೆಯಾಗಿರುವ ಕಾವೇರಿಯ ನೀರು ಕೆವಲ ನೀರಲ್ಲ, ಅದು ಭವಲೋಕ ನಿವಾರಣೆ ಮಾಡುವ ಬ್ರಹ್ಮವಾಹಿ ತೀರ್ಥವಾಗಿದೆ. ಕೊಡಗಿನಲ್ಲಿ ಹುಟ್ಟಿ ತಮಿಳುನಾಡಿನವರೆಗೂ ಹರಿಯುವ ಪ್ರದೇಶಗಳಲ್ಲಿ ಪವಿತ್ರ ಸ್ಥಾನಗಳನ್ನು ಹೊಂದಿ ಲಕ್ಷಾಂತರ ಮಂದಿಯನ್ನು ಪುನೀತರಾಗಿಸಿದ್ದಾಳೆ ಎಂದು ಬಣ್ಣಿಸಿದರು.
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ, ಹತ್ತು ವರ್ಷಗಳ ಹಿಂದೆ ಜನ್ಮ ತಳೆದ ಕನ್ನಡ ಸಿರಿ ಸ್ನೇಹ ಬಳಗ ಹಲವಷ್ಟು ಕನ್ನಡ ಪರ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದೆ. ಕರ್ನಾಟಕ ಸುವರ್ಣ ಸಂಭ್ರಮ ಆಚರಣೆ ಹಿನ್ನೆಲೆಯಲ್ಲಿ ಬಳಗದ ವತಿಯಿಂದ ಒಂದು ವರ್ಷದಲ್ಲಿ ಐವತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಐದು ತಾಲೂಕುಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಿದ್ದು, ಈಗಾಗಲೇ ನಾಲ್ಕು ಕಾರ್ಯಕ್ರಮಗಳನ್ನು ಪೂರೈಸಲಾಗಿದ್ದು, ಮುಂದಿನ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕಾರ ನೀಡುವಂತಾಗಬೇಕು ಎಂದರು.
ಕನ್ನಡ ಸ್ನೇಹ ಸಿರಿ ಬಳಗದ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿ, ಬಳಗದ ವತಿಯಿಂದ ವರ್ಷದಲ್ಲಿ ಐವತ್ತು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವದರೊಂದಿಗೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸ್ಥಳಗಳ ಇತಿಹಾಸ, ಮಹಿಮೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಖಲೀಕರಣ ಮಾಡಲಾಗುವುದು. ತಲಕಾವೇರಿಯಿಂದ ಈ ಕಾರ್ಯವನ್ನು ಪ್ರಾರಂಭ ಮಾಡಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಕಡೆಗಳಲ್ಲೂ ಮಾಡಲಾಗುವುದು. ಇದರಿಂದ ವಿದ್ಯಾರ್ಥಿಗಳಿಗೆ, ಪ್ರವಾಸಿಗರಿಗೆ, ಸಂಶೋಧನೆ ಮಾಡುವವರಿಗೆ ಬಹಳಷ್ಟು ಅನುಕೂಲಕರವಾಗಲಿದೆ. ಈ ಒಂದು ಕಾರ್ಯಕ್ಕೆ ಎಲ್ಲರೂ ಬಳಗದೊಂದಿಗೆ ಸಹಕರಿಸಬೇಕು ಎಂದರು.
ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕುದುಕುಳಿ ಭರತ್, ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ದನಂಜಯ, ಕವಿ ವತ್ಸಲ ಶ್ರೀಶ, ಗೋಣಿಕೊಪ್ಪ ಕಾವೇರಿ ಕಾಲೇಜು ಉಪ ಪ್ರಾಂಶುಪಾಲೆ ಡಾ.ಎ.ಎಸ್.ಪೂವಮ್ಮ, ಶಿರಂಗಾಲ ಕಾಲೇಜಿನ ಪ್ರಾಂಶುಪಾಲ ಹಂಡ್ರಂಗಿ ನಾಗರಾಜು, ಕೇಕಡ ಇಂದುಮತಿ ರವೀಂದ್ರ, ಕರಿಕೆಯ ನಿವೃತ್ತ ಶಿಕ್ಷಕ ಎ.ಎಸ್.ಶ್ರೀಧರ್ ಇತರರಿದ್ದರು.