ಜಿಲ್ಲೆ

ಕಾವ್ಯ ಬರೆಯುವುದು ಸಮಾಜದ ಹಿತಕ್ಕಾಗಿ

ಮೈಸೂರು: ಕವಿ, ಕಾವ್ಯ ಬರೆಯೋದು ತನ್ನ ಕಾರಣಕ್ಕಾಗಿ ಅಲ್ಲ. ಸಮಾಜದ ಹಿತಕ್ಕಾಗಿ ಎಂದು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಲ್.ಎನ್.ಮುಕುಂದರಾಜ್ ತಿಳಿಸಿದರು.

ಚಾಮರಾಜನಗರದ ರಂಗವಾಹಿನಿ, ನೆಲೆ ಹಿನ್ನೆಲೆ ಹಾಗೂ ರಾಮ ಮನೋಹರ ಲೋಹಿಯಾ ಟ್ರಸ್ಟ್ ಸಹಯೋಗದಲ್ಲಿ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ 12ನೇ ವರ್ಷದ ರಾಜ್ಯ ಮಟ್ಟದ ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ ಪ್ರದಾನ, ರಾಜಶೇಖರ ಕೋಟಿ ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಲೇಖಕ ತನಗಾಗಿ ಬರೆಯೋದಿಲ್ಲ. ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಯನ್ನು ಮತ ಕೊಟ್ಟು ಆಯ್ಕೆ ಮಾಡುತ್ತೇವೆ. ಆದರೆ, ಲೇಖಕ ತಾನೇ ಸ್ವಯಂ ಆಗಿ ರೂಪುಗೊಂಡು ಸಮಾಜದ ಹಿತಕ್ಕಾಗಿ ಎಲ್ಲ ಸೂಕ್ಷ್ಮಗಳನ್ನೂ ಸಮಾಜದ ಮುಂದಿಡುತ್ತಾನೆ. ಹೀಗಾಗಿ, ಲೇಖಕ ಸಮಾಜಕ್ಕೆ ಒದಗಿ ಬರುವುದು ತನ್ನ ಕಾರಣಕ್ಕಾಗಿ ಅಲ್ಲ, ಭಾಷೆ, ಸಾಮಾಜಿಕ ಮತ್ತು ರಾಜಕೀಯ ಅನಿವಾರ್ಯತೆಯಿಂದ ಎಂದರು.

ಹೊಸದಾಗಿ ಪ್ರಚಾರ:

ನವ್ಯ ಕಾಲದಲ್ಲಿ ಕವಿ ತನ್ನ ಕಾವ್ಯದ ಬಗ್ಗೆ ಹೇಳದೇ ಹೊಸದಾದ ಬರಹವನ್ನು ಪ್ರಚಾರ ಮಾಡುತ್ತಿದ್ದರು. ಪಿ.ಲಂಕೇಶ್, ಗೋಪಾಲಕೃಷ್ಣಅಡಿಗರು, ಯು.ಆರ್.ಅನಂತಮೂರ್ತಿ, ಕಿ.ರಂ.ನಾಗರಾಜ್, ಡಿ.ಆರ್.ನಾಗರಾಜು ಹೊಸ ಲೇಖಕರಿಗೆ ಪ್ರಚಾರ ಕೊಡುತ್ತಿದ್ದರು. ಅದರಿಂದಲೇ ಆ ಕಾಲದಲ್ಲಿ ಸಿನಿಮಾ ನಟರಿಗಿಂತ ಸಾಹಿತಿಗಳು ಸ್ಟಾರ್ ಗಿರಿ ಪಡೆದುಕೊಂಡಿದ್ದರು ಎಂದು ಡಾ.ಎಲ್.ಎನ್.ಮುಕುಂದರಾಜ್ ಹೇಳಿದರು.

ಮುಳ್ಳೂರು ನಾಗರಾಜ್ ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗುವ ಮುನ್ನ ಜವರಾಜ್ ಹೆಸರು ಕೇಳಿರಲಿಲ್ಲ. ಇದು ಏನನ್ನು ಸೂಚಿಸುತ್ತದೆ ಎಂದರೆ ಮತ್ತೊಬ್ಬ ಲೇಖಕನ ಬರಹ ಓದುವ ಉತ್ಸಾಹ ಇಲ್ಲವಾಗಿದೆ. ಇದು ಕನ್ನಡ ಸಾಹಿತ್ಯದ ಮಟ್ಟಿಗೆ ದೊಡ್ಡ ಕೊರತೆ ಅನಿಸುತ್ತದೆ ಎಂದು ತಿಳಿಸಿದರು.

ಮುಳ್ಳೂರು ನಾಗರಾಜ ಅಪ್ಪಟ ಹೋರಾಟಗಾರ :

ಪ್ರದೇಶಾಭಿವೃದ್ಧಿ ಮಂಡಳಿ ನಿರ್ದೇಶಕ ಡಿ.ಚಂದ್ರಶೇಖರಯ್ಯ ಮಾತನಾಡಿ, ಮುಳ್ಳೂರು ನಾಗರಾಜ ಅವರ ಕಾವ್ಯ ಪ್ರೀತಿ ಅಪರಿಮಿತವಾದದ್ದು, ತಗಡೂರು ಭೂ ಹೋರಾಟದ ವೇಳೆ ಗುಡಿಸಲಿನಲ್ಲಿಯೇ ಕವಿತೆ ಬರೆದಿದ್ದನ್ನು ಕಂಡಿದ್ದೇನೆ. ಬದನವಾಳು ದುರಂತದ ಪುಸ್ತಕ ಬರೆದರು. ಪುರೋಹಿತಶಾಹಿ ವಿರೋಧಿಸಿದ್ದರಿಂದ ಅವರಿಗೆ ಪ್ರಶಸ್ತಿಗಳು ಬರಲಿಲ್ಲ. ಆದರೆ, ಅಪ್ಪಟ ಹೋರಾಟಗಾರ ಎಂದು ಹೇಳಿದರು.

ದಸಂಸ ಮೂಲ ಹೋರಾಟಗಾರರು ಚಳವಳಿ ಮಾಡಿದ್ದರಿಂದ ವಿದ್ಯೆ, ಉದ್ಯೋಗ ಪಡೆದ ಹಲವು ಜನರ ಬದುಕು ಸುಧಾರಣೆಯಾಗಿದೆ. ಆದರೆ, ಈಗಿನ ವ್ಯವಸ್ಥೆ ದಿನದಿಂದ ದಿನವೂ ಕ್ರೂರವಾಗುತ್ತಿದೆ. ದೌರ್ಜನ್ಯದ ಪರಮಾವಧಿ ತಲುಪಿದೆ ಎಂದು ಕಳವಳ ವ್ಯಕ್ತಪಡಿಸಿದರು

12ನೇ ವರ್ಷದ ರಾಜ್ಯಮಟ್ಟದ ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿಯನ್ನು ತಿ.ನರಸೀಪುರದ ಕವಿ ಎಂ.ಜವರಾಜ್ ಅವರಿಗೆ ಪ್ರದಾನ ಮಾಡಲಾಯಿತು. ಕವಿ ಸುಬ್ಬ ಹೊಲೆಯಾರ್, ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ.ಆರ್. ರಾಜು, ವಿಶ್ರಾಂತ ಕುಲಪತಿ ಪ್ರೊ.ಮಹದೇವ, ಒಡನಾಡಿ ಸ್ಟ್ಯಾನ್ಲಿ , ಪತ್ರಕರ್ತೆ ರಶ್ಮಿ ಕೋಟಿ, ನೆಲೆ ಹಿನ್ನೆಲೆ ಕೆ.ಆರ್.ಗೋಪಾಲಕೃಷ್ಣ ಇನ್ನಿತರರಿದ್ದರು.


ಬಳಿಕ ತಿಪಟೂರು ಪ್ರದೀಪ್ ನಿರ್ದೇಶನದಲ್ಲಿ ಬೆಂಗಳೂರಿನ ಸಂಸ ಥಿಯೇಟರ್ ಮತ್ತು ರಂಗಧರ್ಮ ತಂಡದಿಂದ ‘ಮಿಸೆಸ್ ಅಂಬೇಡ್ಕರ್’ ನಾಟಕ ಪ್ರದರ್ಶನಗೊಂಡಿತು.