ಬೆಂಗಳೂರು ಲೇಖಕರು ಹೆಚ್ಚು ಬರೆದರೆ ಗುಣಮಟ್ಟ ಕಡಿಮೆಯಾಗುತ್ತದೆ ಎನ್ನುವುದು ಸುಳ್ಳು. ಬರೆಯುತ್ತಿದ್ದರೆ ಬರವಣೆಗೆ ಗುಣಮಟ್ಟ ಹೆಚ್ಚಾಗುತ್ತದೆ. ಲೇಖಕಕರು ತಮ್ಮ ಸಂತೋಷಕ್ಕೆ ಬರೆದರೆ, ಪುಸ್ತಕೋದ್ಯಮ ಕುಂಠಿತವಾಗುತ್ತದೆ. ಓದುಗರನ್ನು ಪರಿಣಾಮಕಾರಿಯಾಗಿ ತಲುಪಬೇಕು ಮತ್ತು ತಟ್ಟಬೇಕು ಎಂಬ ದೃಷ್ಟಿಯಲ್ಲಿ ಬರೆಯಬೇಕು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ್ ಭಟ್ ಆಭಿಪ್ರಾಯ ವ್ಯಕ್ತಪಡಿಸಿದರು.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆ್ ವರ್ಲ್ಡ್ ಕಲ್ಚರ್‌ನಲ್ಲಿ ಭಾನುವಾರ ಸಾವಣ್ಣ ಪ್ರಕಾಶನದ ಪತ್ರಕರ್ತ ಜೋಗಿ ಬರೆದಿರುವ ‘ಭಗ್ನಪ್ರೇಮಿಯ ಅಪೂರ್ಣ ಡೈರಿ’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುಸ್ತಕಗಳನ್ನು ಪ್ರಕಟಿಸುವಾಗ ಲೇಖಕರಿಗಿಂತ ಹೆಚ್ಚು ಪ್ರಕಾಶಕರು ಸಂಭ್ರಮಿಸುವುದು ಮುಖ್ಯ. ಹೀಗೆ ಸಂಭ್ರಮಿಸುವ ಪ್ರಕಾಶಕರು ತುಂಬಾ ಕಡಿಮೆ. ಆದರೆ, ಪ್ರಕಾಶಕ ಜಮೀಲ್ ಅವರಲ್ಲಿ ಹೀಗೆ ಸಂಭ್ರಮಿಸುವ ಅಪರೂಪದ ಗುಣವನ್ನು ಕಂಡಿದ್ದೇನೆ. ಲೇಖಕನಾದವ ನಿರಂತರವಾಗಿ ಬರೆಯುತ್ತಿರಬೇಕು. ಹೊಸದನ್ನು ತುಂಬಿಕೊಂಡು ಬರೆಯುತ್ತಿರಬೇಕು ಎಂದು ಹೇಳಿದರು.
ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಯಶಸ್ವಿ ಪ್ರೇಮ ಕತೆಗಳಿಗಿಂತ ಭಗ್ನ ಪ್ರೇಮ ಕತೆಯಾಧಾರಿತ ಸಿನಿಮಾ, ಕಾದಂಬರಿ, ಕತೆ ಪುಸ್ತಕಗಳು ಹೆಚ್ಚು ಯಶಸ್ಸು ಕಂಡಿವೆ ಎಂದರು.
ಪ್ರೇಮ ಯಶಸ್ಸು ಸಾಧಿಸಿದರೆ ಅದು ಜನರ ನೆನಪಿನಿಂದ ಬೇಗ ಮರೆಯಾಗುತ್ತದೆ. ನಿಸ್ವಾರ್ಥ ಪ್ರೇಮ, ಒಲಿಯದೆ ಪ್ರೀತಿ ಭಗ್ನವಾದರೆ ಹೆಚ್ಚು ಕಾಲ ನೆನಪಿನಲ್ಲಿದ್ದು ಶಾಶ್ವತವಾಗಿರುತ್ತದೆ. ದೇವದಾಸ್, ರಾಧಾ-ಕೃಷ್ಣ, ರೋಮಿಯೋ ಜೂಲಿಯಟ್ ಮುಂತಾದ ಕತೆಗಳು ಉದಾಹರಣೆಯಾಗಿವೆ. ಇಂತಹ ವಿಷಯಗಳು, ಕತೆಗಳು ಜನರ ಮನಸ್ಸಿನಲ್ಲಿ ಹೆಚ್ಚು ಕಾಲ ಇರುತ್ತವೆ ಮತ್ತು ಆಕರ್ಷಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ನಟ ಅರುಣ್ ಸಾಗರ್, ಎ.ಸತೀಶ್, ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ ಉಪಸ್ಥಿತರಿದ್ದರು.
ಪುಸ್ತಕ ಬರೆಯುವುದರ ಹಿಂದೆ ಬಹಳ ಶ್ರಮ ಇರುತ್ತದೆ. ಅದಕ್ಕೆ ಬಹಳ ಹಿಂದೆಯೇ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಸಾಮಾನ್ಯ ಆಕರ್ಷಣೆ ಪ್ರೀತಿಯಾಗುವುದಿಲ್ಲ. ಯಾವುದೇ ಪ್ರೇಮವನ್ನು ಭಗ್ನ ಪ್ರೇಮ ಎನ್ನಬೇಕಾದರೆ ಆ ಪ್ರೇಮ ಬಲವಾಗಿರಬೇಕು. - ಜೋಗಿ, ಲೇಖಕ